

ಪಟಿಯಾಲ: ಅತ್ಯಾಚಾರ ಪ್ರಕರಣದಲ್ಲಿ ಸೆಪ್ಟೆಂಬರ್ 2 ರಿಂದ ತಲೆಮರೆಸಿಕೊಂಡಿರುವ ಪಂಜಾಬ್ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ, ವಿಡಿಯೋ ಸಂದರ್ಶನದಲ್ಲಿ ಕಾಣಿಸಿಕೊಂಡ ನಂತರ ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸನೂರ್‌ನ ಎಎಪಿ ಶಾಸಕನ ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದ್ದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗದೇ ಇರುವುದರಿಂದ ಪೊಲೀಸರಿಗೆ ಈ ಬೆಳವಣಿಗೆ ಮುಜುಗರ ತಂದಿದೆ.
ಪಟಿಯಾಲ ಪೊಲೀಸರು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕನ ವಿರುದ್ಧ ಲುಕ್-ಔಟ್ ನೋಟಿಸ್ ಕೂಡ ಹೊರಡಿಸಿದ್ದಾರೆ.
ಶುಕ್ರವಾರ ಆಸ್ಟ್ರೇಲಿಯಾ ಮೂಲದ ಪಂಜಾಬಿ ವೆಬ್ ಚಾನೆಲ್‌ಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಪಠಾಣಮಜ್ರಾ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು 'ಜಾಮೀನು ಪಡೆದ ನಂತರವೇ ಮನೆಗೆ ಮರಳುತ್ತೇನೆ' ಎಂದಿದ್ದಾರೆ.
ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ ಅವರು, ಈ ಪ್ರಕರಣವನ್ನು 'ರಾಜಕೀಯ ಪಿತೂರಿ' ಎಂದು ಕರೆದಿದ್ದು, ಇದು ಪಂಜಾಬ್ ಜನರ ಪರವಾಗಿ ಮಾತನಾಡುವ ಧ್ವನಿಗಳನ್ನು ಅಡಗಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
'ಪಂಜಾಬ್‌ನಲ್ಲಿ, ಪ್ರಮುಖ ವಿಷಯಗಳಲ್ಲಿ ಸಚಿವರು ಮತ್ತು ಶಾಸಕರನ್ನು ಸಂಪರ್ಕಿಸುವುದಿಲ್ಲ. ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ. ದೆಹಲಿಯಲ್ಲಿ ಸೋತ ನಂತರ, ಆ ನಾಯಕರು ಈಗ ಪಂಜಾಬ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅವರು ದಹಲಿಯಂತೆಯೇ ಹಾಳು ಮಾಡುತ್ತಿದ್ದಾರೆ' ಎಂದ ಅವರು, ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ವ್ಯಕ್ತಪಡಿಸಿದರು.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಠಾಣಮಜ್ರಾ ವಿಚಾರಣೆಗೆ ಹಾಜರಾಗದ ಕಾರಣ ಪಟಿಯಾಲ ನ್ಯಾಯಾಲಯವು ಈಗಾಗಲೇ ಅವರ ವಿರುದ್ಧ ಘೋಷಿತ ಅಪರಾಧಿ ವಿಚಾರಣೆಯನ್ನು ಪ್ರಾರಂಭಿಸಿದೆ.
ಮೊದಲ ಬಾರಿಗೆ ಶಾಸಕರಾದ ಅವರು ಪಂಜಾಬ್ ಪೊಲೀಸರು ಅವರನ್ನು ಬಂಧಿಸಲು ಹರಿಯಾಣದ ಕರ್ನಾಲ್‌ಗೆ ಹೋದಾಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದರು.
ಮೊದಲ ಬಾರಿಗೆ ಶಾಸಕರಾದ ಸನೂರ್‌ನ ಎಎಪಿ ಶಾಸಕ ಹರ್ಮೀತ್ ಪಠಾಣಮಜ್ರಾ ಅವರನ್ನು ಸೆಪ್ಟಂಬರ್ 2ರಂದು ಬೆಳಿಗ್ಗೆ ಕರ್ನಾಲ್‌ನಲ್ಲಿ ಬಂಧಿಸಲಾಯಿತು. ಆದರೆ, ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಪಠಾಣಮಜ್ರಾ ಮತ್ತು ಅವರ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಒಬ್ಬ ಪೊಲೀಸ್ ಅವರನ್ನು ತಡೆಯಲು ಪ್ರಯತ್ನಿಸಿದರೂ, ಅವರು ಅವರಿಂದ ತಪ್ಪಿಸಿಕೊಂಡು ಎರಡು ಎಸ್‌ಯುವಿಗಳಲ್ಲಿ ಪರಾರಿಯಾಗಿದ್ದಾರೆ.
ಆದಾಗ್ಯೂ, ಪಠಾಣಮಜ್ರಾ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿಲ್ಲ ಎಂದರು ಮತ್ತು 'ನಕಲಿ ಎನ್‌ಕೌಂಟರ್' ಮಾಡಲಾಗುತ್ತದೆ ಎಂಬುದನ್ನು ತಿಳಿದ ನಂತರ ನಾನು ಓಡಿಹೋದೆ ಎಂದು ಹೇಳಿದ್ದರು.
ಸೆಪ್ಟೆಂಬರ್ 1 ರಂದು ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಎಪಿ ಶಾಸಕನ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು.
ಶಾಸಕ ತನ್ನನ್ನು ವಿಚ್ಛೇದಿತ ಎಂದು ತಪ್ಪಾಗಿ ಬಿಂಬಿಸಿಕೊಂಡು ತನ್ನೊಂದಿಗೆ ಸಂಬಂಧ ಬೆಳೆಸಿದ್ದಾರೆ ಮತ್ತು ನಂತರ 2021ರಲ್ಲಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಜಿರಾಕ್‌ಪುರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಅವರು ತನ್ನ ಮೇಲೆ ನಿರಂತರ ಲೈಂಗಿಕ ಶೋಷಣೆ ಎಸಗಿ ಬೆದರಿಕೆಯೊಡ್ಡಿದ್ದಾರೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement