INTERVIEW | ಭಾರತ Quadನಿಂದ ಹೊರಬಂದು ಚೀನಾ ಜೊತೆಗೆ ಉತ್ತಮ ಸಂಬಂಧ ಹೊಂದಬೇಕು: ಅಮೆರಿಕಾ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್
ನವದೆಹಲಿ: ಜೆಫ್ರಿ ಸ್ಯಾಚ್ಸ್ ಅಮೆರಿಕಾದ ಅರ್ಥಶಾಸ್ತ್ರಜ್ಞ, ಶೈಕ್ಷಣಿಕ, ಸಾರ್ವಜನಿಕ ನೀತಿ ವಿಶ್ಲೇಷಕ ಮತ್ತು ಸಾಲ ಬಿಕ್ಕಟ್ಟುಸ, ಅಧಿಕ ಹಣದುಬ್ಬರದಿಂದ ಸಾರ್ವಜನಿಕ ಆರೋಗ್ಯ, ಬಡತನ ಮತ್ತು ಹವಾಮಾನ ಬದಲಾವಣೆಯವರೆಗಿನ ಸಂಕೀರ್ಣ ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.
ವಿಶ್ವಸಂಸ್ಥೆಯ ಮೂವರು ಪ್ರಧಾನ ಕಾರ್ಯದರ್ಶಿಗಳ ಮಾಜಿ ಸಲಹೆಗಾರರಾದ ಸ್ಯಾಚ್ಸ್, ಕೊಲಂಬಿಯಾ ವಿಶ್ವವಿದ್ಯಾಲಯದ ಸುಸ್ಥಿರ ಅಭಿವೃದ್ಧಿ ಕೇಂದ್ರದ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಯುಎನ್ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲದ ಅಧ್ಯಕ್ಷರೂ ಆಗಿದ್ದಾರೆ. ಪ್ರಭಾವಶಾಲಿ ಬುಕ್ ಕ್ಲಬ್‌ನ ನಿರೂಪಕರೂ ಆಗಿದ್ದಾರೆ. ಅಮೆರಿಕಾದ ವಿದೇಶಿ ಮತ್ತು ವ್ಯಾಪಾರ ನೀತಿಯ ಕುರಿತು ನಿರ್ಭೀತ ಟೀಕೆಗಳಿಗೂ ಹೆಸರುವಾಸಿಯಾಗಿದ್ದಾರೆ.
ಜೆಫ್ರಿ ಸ್ಯಾಚ್ಸ್ ಅವರೊಂದಿಗೆ ಜಯಂತ್ ಜಾಕೋಬ್ ಸಂದರ್ಶನ ನಡೆಸಿದ್ದು, ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಸಂವಿಧಾನಿಕ ಸುಂಕಾಸ್ತ್ರ ಕುರಿತು ಮಾತನಾಡಿದ್ದಾರೆ. ಈ ವೇಳೆ ಭಾರತವು ಕ್ವಾಡ್ ನಿಂದ ಹೊರಬಂದು ಚೀನಾದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಡಾಲರ್ ಅಪನಗದೀಕರಣ ಈಗಾಗಲೇ ಶುರುವಾಗಿದೆ. ಒಂದು ದಶಕದೊಳಗೆ, ಜಾಗತಿಕ ವ್ಯಾಪಾರ ಮತ್ತು ಹಣಕಾಸಿನಲ್ಲಿ ಡಾಲರ್‌ನ ಪ್ರಾಬಲ್ಯ ತೀವ್ರವಾಗಿ ಕುಸಿಯುತ್ತದೆ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಸುಂಕಾಸ್ತ್ರವನ್ನು ರಾಜಕೀಯ ಮತ್ತು ಆರ್ಥಿಕ ಅಸ್ತ್ರವಾಗಿ ಬಳಸುತ್ತಿದ್ದು, ಈ ಬಗ್ಗೆ ಏನು ಹೇಳುತ್ತೀರಿ? ಇದು ಮಿತ್ರ ರಾಷ್ಟ್ರಗಳ ನಡುವೆ ಸುಂಕ ಯುದ್ಧವನ್ನು ಹೆಚ್ಚಿಸಬಹುದೇ? ಜಗತ್ತಿಗೂ ಮತ್ತು ಭಾರತಕ್ಕೂ ಇದರ ಅರ್ಥವೇನು?
ಟ್ರಂಪ್ ಅವರ ಸುಂಕಾಸ್ತ್ರ ಬಳಕೆ ಅಮೆರಿಕಾ ಸಂವಿಧಾನದ ವಿರುದ್ದವಾಗಿದೆ (ಅಂಕ 1, ಸೆಕ್ಷನ್ 8 ರಡಿ ತೆರಿಗೆಳನ್ನು ನಿಗದಿಸುವ ಅಧಿಕಾರವು ಅಧ್ಯಕ್ಷನಿಗೆ ಅಲ್ಲ, ಕಾಂಗ್ರೆಸ್‌ಗೆ ಮಾತ್ರವಿದೆ). ಈ ತೆರಿಗಳು ಅಮೆರಿಕದ ನ್ಯಾಯಾಲಯಗಳಿಂದ ರದ್ದುಗೊಳಿಸಬಹುದಾಗಿವೆ. ಟ್ರಂಪ್ ಅವರ ತೆರಿಗೆ ನೀತಿ ಅಮೆರಿಕದ ಆರ್ಥಿಕತೆಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ ಏಕೆಂದರೆ ಇದು ಅಮೆರಿಕಾವನ್ನು ಸ್ಪರ್ಧಾತ್ಮಕತೆಯಿಂದ ದೂರ ಮಾಡುತ್ತದೆ ಮತ್ತು ಅಮೆರಿಕಾದ ರಫ್ತುಗಳಿಗೆ ತಡೆದಂತೆ ಕಾರ್ಯನಿರ್ವಹಿಸುತ್ತದೆ. ಇದುವರೆಗೆ, ಈ ನೀತಿ ಜಾಗತಿಕ ಬಹುಪಕ್ಷೀಯ ವ್ಯವಸ್ಥೆಯನ್ನು ಹಾನಿಗೊಳಿಸುತ್ತಿದ್ದು, ವಿಶ್ವ ವಾಣಿಜ್ಯ ಸಂಸ್ಥೆಯ ಮೂಲತತ್ವಗಳನ್ನು ದುರ್ಬಲಗೊಳಿಸುತ್ತಿದೆ. ಏಕೈಕ ಪರೋಕ್ಷ ಲಾಭವೆಂದರೆ, ಅಮೆರಿಕಾದಲ್ಲಿ ಕಾನೂನಿಲ್ಲದ, ನಂಬಬಹುದಾದದ್ದಲ್ಲದ, ಭ್ರಷ್ಟ ರಾಜಕೀಯ ವ್ಯವಸ್ಥೆ ಹೊಂದಿದೆ ಎಂಬುದನ್ನು ಟ್ರಂಪ್ ಅವರು ವಿಶ್ವಕ್ಕೆ ತೋರಿಸುತ್ತಿದ್ದಾರೆ.
ಅಮೆರಿಕಾ ನಿರ್ಬಂಧಗಳನ್ನು ಹೆಚ್ಚಿಸುತ್ತಿದ್ದು, ಇದರಿಂದ ಭಾರತವು ಹೆಚ್ಚು ದುರ್ಬಲವಾಗುತ್ತಿದೆಯೇ? ವಿಶೇಷವಾಗಿ ರಷ್ಯಾ ಜೊತೆಗೆ ತೈಲ ಮತ್ತು ರಕ್ಷಣಾ ಸಂಬಂಧಗಳನ್ನು ಮುಂದುವರೆಸಿದರೆ ಅಥವಾ ಇರಾನ್ ಜೊತೆಗೆ ಸಂಬಂಧಗಳನ್ನು ಮುಂದುವರೆಸಿದರೆ ಹೆಚ್ಚು ದುರ್ಬಲವಾಗುತ್ತದೆಯೇ? ಇರಾನ್ ಹಾಗೂ ರಷ್ಯಾ ಎರಡೂ ದೇಶಗಳು ಭಾರತಕ್ಕೆ ಪ್ರಮುಖ ತಂತ್ರಜ್ಞಾನಿಕ ಸಹಭಾಗಿಗಳಾಗಿವೆ..
ಭಾರತದ ಸುರಕ್ಷತೆ ಬ್ರಿಕ್ಸ್ (BRICS) ಮತ್ತು ಯುಎನ್ ಚಾರ್ಟರ್ (UN Charter)ನಲ್ಲಿದೆ, ಅಮೆರಿಕಾದಲ್ಲಿ ಅಲ್ಲ. ಭಾರತವು ತನ್ನ ರಫ್ತು ಗಮ್ಯಸ್ಥಳಗಳನ್ನು ವಿಭಿನ್ನಗೊಳಿಸಬೇಕು, ಬ್ರಿಕ್ಸ್ ಜೊತೆ ಡಾಲರ್ ಹೊರತುಪಡಿಸಿದ ಪಾವತಿ ವ್ಯವಸ್ಥೆಗಳಲ್ಲಿ ಕೆಲಸ ಮಾಡಬೇಕು, ಭದ್ರತೆ ದೃಷ್ಟಿಯಿಂದ ಭಾರತ QUAD ನಿಂದ ಹೊರಬರಬೇಕು. ಚೀನಾ ಜೊತೆಗೆ ಸಂಬಂಧವನ್ನು ಗಟ್ಟಿಗೊಳಿಸಬೇಕು.
ಭಾರತ ಮತ್ತು ಚೀನಾ ನಡುವೆ ಗಡಿ ಭಿನ್ನತೆಗಳಿದ್ದರೂ ಕೂಡ ಬ್ರಿಕ್ಸ್ ಅಥವಾ ಎಸ್‌ಸಿಒ (SCO) ಮುಂತಾದ ವೇದಿಕೆಗಳಲ್ಲಿ ದ್ವಿಪಕ್ಷೀಯವಾಗಿ ಆರ್ಥಿಕ ಅಥವಾ ಭೌಗೋಳಿಕ ರಾಜಕೀಯ ಹಾದಿಯನ್ನು ಕಂಡುಕೊಳ್ಳುವ ಮಾರ್ಗವಿದೆಯೆ?
ಭಾರತ ಮತ್ತು ಚೀನಾ ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಾಗಿವೆ. ವಿಶ್ವದ ಸುಮಾರು ಶೇ.40ರಷ್ಟು ಜನಸಂಖ್ಯೆಯನ್ನು ಎರಡು ರಾಷ್ಟ್ರಗಳು ಹೊಂದಿವ. ಪಾಶ್ಚಿಮಾತ್ಯ ದ್ವಂದ್ವ ಮಾನದಂಡಗಳ ಪ್ರಕಾರ ಜಗತ್ತನ್ನು ನಡೆಸುವ ಪಾಶ್ಚಿಮಾತ್ಯ ಭ್ರಮೆಗಳನ್ನು ಕೊನೆಗೊಳಿಸುವಲ್ಲಿ ಎರಡೂ ರಾಷ್ಟ್ರಗಳು ಒಂದೇ ರೀತಿಯ ಆಸಕ್ತಿಯನ್ನು ಹೊಂದಿವೆ. ಹೀಗಾಗಿ ಭಾರತ ಮತ್ತು ಚೀನಾ ದೀರ್ಘಕಾಲದ ಗಡಿಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 6ನೇ ಶಾಶ್ವತ ಸದಸ್ಯ ರಾಷ್ಟ್ರವಾಗಲು ಚೀನಾ ಬಲವಾಗಿ ಬೆಂಬಲಿಸಬೇಕು. ಭಾರತ ವಿಶ್ವಸಂಸ್ಥೆಯ ಶಾಶ್ವತ ಸದಸ್ಯ ರಾಷ್ಟ್ರವಾದರೆ, ವಿಶ್ವಕ್ಕೆ ಅದರಲ್ಲೂ ಚೀನಾ ಅಪಾರ ಲಾಭವಾಗಲಿದೆ.
ಟ್ರಂಪ್ ಆಗಾಗ್ಗೆ ಜಾಗತಿಕ ಬಹುಪಕ್ಷೀಯ ಗುಂಪುಗಳನ್ನು ಟೀಕಿಸುತ್ತಿರುತ್ತಾರೆ. ಇದರ ಬಗ್ಗೆ ಏನು ಹೇಳುತ್ತೀರಿ? ಇದು ಬ್ರಿಕ್ಸ್ ಬಗ್ಗೆ ಅವರಿಗಿರುವ ಭೀತಿಯೇ ಅಥವಾ ವಿರೋಧವು ಅಮೆರಿಕಾದ ಜಾಗತಿಕ ಪ್ರಭುತ್ವಕ್ಕೆ ನಿಜವಾದ ಬೆದರಿಕೆ ಎಂಬುದಾಗಿ ನ್ಯಾಯಸಮ್ಮತವೆ?
ಹೌದು. ಬ್ರಿಕ್ಸ್ ಅಮೆರಿಕಾದ ಪ್ರಭುತ್ವಕ್ಕೆ ಎಚ್ಚರಿಕೆಯಾಗಿದೆ, ನಾವೀಗ ಪಶ್ಚಿಮದ ಪ್ರಭುತ್ವದ ಜಗತ್ತಿನಲ್ಲಿ ಬದುಕುತ್ತಿಲ್ಲ. ಅಮೆರಿಕಾದ ಆ ದಿನಗಳು ಮುಗಿದಿವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಬ್ರಿಕ್ಸ್ ಯುಎನ್ ಚಾರ್ಟರ್ ಅಡಿಯಲ್ಲಿ ಕಾನೂನು ಆಡಳಿತದ ಆಧಾರದ ಮೇಲೆ ಬಹುಪಕ್ಷೀಯ ಜಗತ್ತನ್ನು ನಿರ್ಮಿಸಲು ಪ್ರಮುಖವಾಗಿದೆ, ಬ್ರಿಟಿಷ್ ಅಥವಾ ಅಮೆರಿಕ ಸಾಮ್ರಾಜ್ಯಗಳ ಇಚ್ಛೆಗಳ ಮೇಲಲ್ಲ.
ಮಧ್ಯಮಾವಧಿಯಲ್ಲಿ, ವಿಶೇಷವಾಗಿ ಬ್ರಿಕ್ಸ್ ರಾಷ್ಟ್ರಗಳು ಸಂಯುಕ್ತ ಕರೆನ್ಸಿ ರೂಪಿಸುವಲ್ಲಿ ಅಥವಾ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುವಲ್ಲಿ ಹೆಚ್ಚುವರಿ ಪ್ರಯತ್ನಗಳನ್ನು ಕೈಗೊಂಡರೆ, ಡಾಲರ್ ಅಪನಗದೀಕರಣವಾಗಲಿದೆಯೇ?
ಹೌದು, ಡಾಲರ್ ಅಪನಗದೀಕರಣವಾಗಲಿದೆ ಎಂದು ಹೇಳುವುದಲ್ಲ. ಈಗಾಗಲೇ ಅದು ಆರಂಭವಾಗಿದೆ. ಮುಂದಿನ 10 ವರ್ಷಗಳಲ್ಲಿ, ಅಂತರರಾಷ್ಟ್ರೀಯ ವ್ಯಾಪಾರ, ಪಾವತಿಗಳು, ವಹಿವಾಟು ಮತ್ತು ಹಣಕಾಸಿನಲ್ಲಿ ಡಾಲರ್ ಬಹಳ ಕಡಿಮೆ ಪಾತ್ರ ವಹಿಸಲಿದೆ. ಬ್ರಿಕ್ಸ್ ಈ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಏಕೆಂದರೆ ಅಮೆರಿಕಾ ತನ್ನ ಡಾಲರ್ ಅನ್ನು ವಿದೇಶಾಂಗ ನೀತಿಯ ಆಯುಧವಾಗಿ ದುರುಪಯೋಗ ಮಾಡಿಕೊಂಡಿದೆ. ಇದು ಅಮೆರಿಕ ವಿದೇಶಾಂಗ ನೀತಿಯ ಗಂಭೀರ ತಪ್ಪಾಗಿದ್ದು, ಆ ತಪ್ಪು ಮುಂದುವರೆಯುತ್ತಲೇ ಇದೆ.
21ನೇ ಶತಮಾನದಲ್ಲಿ ಅಮೆರಿಕ-ಭಾರತ ಸಂಬಂಧ ಅತ್ಯಂತ ನಿರ್ಣಾಯಕ ಎಂದು ಬಹಳಷ್ಟು ಹೇಳಲಾಗುತ್ತದೆ. ಟ್ರಂಪ್ ಆಡಳಿತದಲ್ಲಿ ಇದು ನಿಜವೆಂದು ನೀವು ನಂಬುತ್ತೀರಾ?
ಇಲ್ಲ. ಚೀನಾ-ಭಾರತ-ಆಫ್ರಿಕನ್ ಒಕ್ಕೂಟದ ಸಂಬಂಧವು ಅತ್ಯಂತ ಪ್ರಮುಖ ಸಂಬಂಧವಾಗಿರುತ್ತದೆ. ನ್ಯಾಯಯುತ, ಸುಸ್ಥಿರ, ಎಲ್ಲರನ್ನೂ ಒಳಗೊಂಡ ಮತ್ತು ಸುರಕ್ಷಿತ ಜಗತ್ತನ್ನು ನಿರ್ಮಿಸಲು ಈ ಮೂರು ಪ್ರಬಲ ರಾಷ್ಟ್ರಗಳು ನಿಕಟವಾಗಿ ಸಹಕರಿಸಬೇಕಾಗಿದೆ. ವಿಶ್ವ ಜನಸಂಖ್ಯೆಯಲ್ಲಿ ಅಮೆರಿಕಾ ಪಾಲ ಕೇವಲ 4.1 ಪ್ರತಿಶತದಷ್ಟು ಮಾತ್ರ ಇದೆ. ಆರ್ಥಿಕತೆ ಕೊಡುಗೆ ಶೇ.14ರಷ್ಟಿದೆ. ಭಾರತಕ್ಕೆ ಇತರೆ ರಾಷ್ಟ್ರಗಳಿರುವಂತೆ ಅಮೆರಿಕಾ ಕೂಡ ಪ್ರತಿಸ್ಪರ್ಧಿ ರಾಷ್ಟ್ರವಷ್ಟೇ. ಪ್ರಮುಖ ರಾಷ್ಟ್ರವಲ್ಲ.
"ಚೀನಾ+1" ಅಥವಾ "ಫ್ರೆಂಡ್-ಶೋರಿಂಗ್" ತಂತ್ರಜ್ಞಾನವು ಭಾರತವನ್ನು ಕೇಂದ್ರಗೊಂಡು ಸುಸ್ಥಿರ ಸರಬರಾಜು ನಿರ್ಮಿಸುವಲ್ಲಿ ಎಷ್ಟು ವಾಸ್ತವಿಕವಾಗಿದೆ, ವಿಶೇಷವಾಗಿ ಭಾರತದ ಮೂಲಸೌಕರ್ಯ ಮತ್ತು ನಿಯಂತ್ರಣದ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡಾಗ?
ಅಮೇರಿಕಾ ಸರ್ಕಾರ ಭಾರತವನ್ನು ಚೀನಾದ ಬದಲಾಗಿ ಅಮೆರಿಕದ ಮೌಲ್ಯ ಸರಣಿಗಳಲ್ಲಿ ಇರಿಸಲು ಎಂದಿಗೂ ಅನುಮತಿಸುವುದಿಲ್ಲ. ಅಮೇರಿಕಾ ಬಹಿರಂಗವಾಗಿ ರಕ್ಷಣಾತ್ಮಕ ಧೋರಣೆ ತೆಗೆದುಕೊಂಡಿದೆ, ಭಾರತದ ರಫ್ತು ಅಮೇರಿಕಾಕ್ಕೆ ಹೆಚ್ಚಾದರೆ,ಚೀನಾದ ರಫ್ತುಗಳನ್ನು ನಿಲ್ಲಿಸಿದಂತೆ ಭಾರತದ ರಫ್ತನ್ನೂ ನಿಲ್ಲಿಸುತ್ತದೆ. ಇದಕ್ಕೆ ಅಮೆರಿಕಾ ಶೇ.50 ತೆರಿಗೆ ಹೇರಿರುವುದು ಪಾಠವೇ ಆಗಿದೆ.
ಟ್ರಂಪ್ ಎರಡನೇ ಮಹಾಯುದ್ಧದ ನಂತರ ಟ್ರಂಪ್ ಅವರು, ಅಂತರರಾಷ್ಟ್ರೀಯ ಸುವ್ಯವಸ್ಥೆಯನ್ನು ಯಾವ ರೀತಿಯಲ್ಲಿ ದುರ್ಬಲಗೊಳಿಸುವುದನ್ನು ಮುಂದುವರಿಸಬಹುದು ಎಂದು ನೀವು ಭಾವಿಸುತ್ತೀರಿ? ಆ ಸುವ್ಯವಸ್ಥೆ ಈಗಾಗಲೇ ಕುಸಿಯುತ್ತಿದೆ ಎಂದು ನೀವು ಭಾವಿಸುತ್ತೀರಾ?
ಯಾವುದೇ ಅಂತರರಾಷ್ಟ್ರೀಯ ಸುವ್ಯವಸ್ಥೆ ಇಲ್ಲ. ಅದು ಕೇವಲ ಅಮೆರಿಕಾದ ಕ್ಷುಲ್ಲಕ ಘೋಷಣೆಯಷ್ಟೇ. ಅಲ್ಲಿ ಅಮೆರಿಕಾ ಪ್ರಾಬಲ್ಯವು 800 ವಿದೇಶಿ ಮಿಲಿಟರಿ ನೆಲೆಗಳು, ಸಿಐಎ ನೇತೃತ್ವದ ಆಡಳಿತ-ಬದಲಾವಣೆ ಕಾರ್ಯಾಚರಣೆಗಳು, ಏಕಪಕ್ಷೀಯ ನಿರ್ಬಂಧಗಳು, ಡಾಲರ್‌ನ ಶಸ್ತ್ರಾಸ್ತ್ರೀಕರಣ, ಗಾಜಾದಲ್ಲಿ ನರಮೇಧದಲ್ಲಿ ಯುಎಸ್ ಭಾಗವಹಿಸುವಿಕೆ ಮತ್ತು ಅಧಿಕಾರ ದುರುಪಯೋಗಗಳನ್ನು ಆಧರಿಸಿದೆ. ಯುಎಸ್ ಶಕ್ತಿ ಕ್ಷೀಣಿಸುತ್ತಿದೆ. ನಾವು ಈಗಾಗಲೇ ಬಹುಧ್ರುವೀಯ ಜಗತ್ತನ್ನು ತಲುಪಿದ್ದೇವೆ, ಭಾರತ, ಚೀನಾ, ರಷ್ಯಾ ಮತ್ತು ಅಮೆರಿಕ ಎಲ್ಲವೂ ಮಹಾನ್ ಶಕ್ತಿ ರಾಷ್ಟ್ರಗಳಾಗಿವೆ. ಇದರ ಜೊತೆಗೆ ನಮಗೆ ಬೇಕಾಗಿರುವುದು ಹುಪಕ್ಷೀಯ ಜಗತ್ತು, ಇದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿ ಭಾರತದ ಪಾತ್ರ ಸೇರಿದಂತೆ ವಿಶ್ವಸಂಸ್ಥೆಯ ಪ್ರಮುಖ ಸುಧಾರಣೆಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.
ಟ್ರಂಪ್ ಆಡಳಿತದಲ್ಲಿ, ವಿಶೇಷವಾಗಿ ಚೀನಾದೊಂದಿಗೆ ಹೊಸ ವ್ಯಾಪಾರ ಯುದ್ಧಗಳ ಪ್ರಾರಂಭವು ಆಂತರಿಕ ವೆಚ್ಚಗಳನ್ನು ಪ್ರತಿಕೂಲ ಪರಿಣಾಮ ಬೀರುತ್ತದೆಯೆ?
ಹೌದು, ಆದರೆ, ಈಗಲೇ ಅಲ್ಲ. ವ್ಯಾಪಾರ ಯುದ್ಧಗಳ ವೆಚ್ಚವು ಬಹುಶಃ 5-10 ವರ್ಷಗಳ ಅವಧಿಯಲ್ಲಿ ಅಮೆರಿಕದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ. ಜಾಗತಿಕ ಇಂಧನ ಪರಿವರ್ತನೆಯಲ್ಲಿ ಅಮೆರಿಕ ತನ್ನ ಪಾತ್ರವನ್ನು ತ್ಯಜಿಸುತ್ತಿದೆ, ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ವಾಹನಗಳನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು.
ಭಾರತವು ತನ್ನ ತಂತ್ರಾತ್ಮಕ ಸ್ವಾಯತ್ತತೆಯನ್ನು ಉಳಿಸಿಕೊಂಡು ಅಮೆರಿಕದೊಂದಿಗೆ ಆಳವಾದ ಸಂಬಂಧಗಳನ್ನು ಬೆಳೆಸಲು ಯತ್ನಿಸುತ್ತಿರುವ ಸಮಯದಲ್ಲಿ, ಟ್ರಂಪ್ ಅವರ "ಅಮೆರಿಕಾ ಫಸ್ಟ್" ನಿಲುವು ನವದೆಹಲಿಗೆ ಈ ಸಮತೋಲನವನ್ನು ಸಾಧಿಸುವಲ್ಲಿ ಯಾವ ರೀತಿಯ ಸವಾಲು ಅಥವಾ ಅವಕಾಶವನ್ನು ನೀಡುತ್ತದೆ? ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಬಹುಚರ್ಚಿತ "ವೈಯಕ್ತಿಕ ಸ್ನೇಹ" ಅಥವಾ "ಪರ್ಸನಲ್ ಕೆಮಿಸ್ಟ್ರಿ" ಭಾರತಕ್ಕೆ ಬಹಳ ಪ್ರಯೋಜನವಾಗುತ್ತದೆಯೆಂದು ನೀವು ಭಾವಿಸುತ್ತೀರಾ?
ಪರ್ಸನಲ್ ಕೆಮಿಸ್ಟ್ರಿಯಿಂದ ಯಾವುದೇ ಉಪಯೋಗವಿಲ್ಲ. ಅಮೆರಿಕದೊಂದಿಗೆ ಇರುವುದರಿಂದ ಭಾರತಕ್ಕೆ ಯಾವುದೇ ರೀತಿಯ ಲಾಭವಾಗುವುದಿಲ್ಲ. ಕ್ವಾಡ್‌ನಂತಹ ಮೈತ್ರಿ ರಾಜಕೀಯ (soft alliance politics)ಗಳು ಭಾರತದ ಹಿತಾಸಕ್ತಿಗಳಿಗೆ ಹಾನಿಕಾರಕವಾಗಬಹುದು. ಚೀನಾವನ್ನು ನಿಗ್ರಹಿಸಲು ಅಮೆರಿಕಾದ ವ್ಯರ್ಥ ಮತ್ತು ಹಾನಿಕಾರಕ ಪ್ರಯತ್ನದಲ್ಲಿ ಅಮೆರಿಕಾ ಪರ ಇರದೆ, ರಷ್ಯಾ, ಅಮೆರಿಕ, ಚೀನಾ, ಆಫ್ರಿಕನ್ ಒಕ್ಕೂಟ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ಎಲ್ಲಾ ಪ್ರಮುಖ ಶಕ್ತಿಗಳೊಂದಿಗೆ ಸಮಾನ ಹಾಗೂ ಸಮಪಾಲು ಸಂಬಂಧಗಳನ್ನು ಬೆಳೆಸುವುದನ್ನು ಭಾರತ ತನ್ನ ಗುರಿಯಾಗಿಸಿಕೊಳ್ಳಬೇಕು. ಅಮೆರಿಕಾ ತನ್ನ ಊಹಾತೀತ ಪ್ರಭುತ್ವವನ್ನು ಉಳಿಸಿಕೊಳ್ಳಲು ತಪ್ಪು ಪ್ರಯತ್ನ ಮಾಡುತ್ತಿದೆ. ಅದು ಭಾರತಕ್ಕೆ ಯಾವುದೇ ರೀತಿಯ ಲಾಭವಲ್ಲ. ಭಾರತವು ಅಮೆರಿಕಾದ ಗರ್ವ ಮತ್ತು ಭ್ರಮೆಯ ಆಟಕ್ಕೆ ಬಲಿಯಾಗಬಾರದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ