
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ, ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ ಬೇಸತ್ತ ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್ ಫಾರ್ಮ್ ಬ್ಲಾಕ್ ಬಕ್ ಕಂಪನಿ ನಗರ ತೊರೆಯುವುದಾಗಿ ಹೇಳಿದೆ. ಇದನ್ನೇ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ತಮ್ಮ ರಾಜ್ಯಕ್ಕೆ ಬರುವಂತೆ ಟೆಕ್ ಕಂಪನಿಗೆ ಆಹ್ವಾನ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆಂಧ್ರಪ್ರದೇಶ ರಾಜ್ಯದ ಸಚಿವ ನಾರಾ ಲೋಕೇಶ್ ಅವರು, ಕಂಪನಿಯನ್ನು ಆಂಧ್ರಪ್ರದೇಶದ ವೈಜಾಗ್'ಗೆ ಸ್ಥಳಾಂತರಿಸಬಹುದು. ನಮ್ಮ ನಗರವು ಭಾರತದ ಟಾಪ್ 5 ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ಮಹಿಳೆಯರಿಗೆ ಸುರಕ್ಷಿತ ನಗರವೆಂದು ರ್ಯಾಂಕಿಂಗ್ ಪಡೆದಿದ್ದೇವೆ. ಆಸಕ್ತಿ ಇದ್ದರೆ ದಯವಿಟ್ಟು ಮೆಸೇಜ್ ಮಾಡಿ ಎಂದು ಹೇಳಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಈ ಆಹ್ವಾನ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಬ್ಲಾಕ್‌ಬಕ್ ಕಂಪನಿಯ ಸಿಇಒ, ಕಳೆದ ಒಂಬತ್ತು ವರ್ಷಗಳಿಂದ ಬೆಳ್ಳಂದೂರು ನಮ್ಮ ಕಚೇರಿ ಮತ್ತು ಮನೆಯಾಗಿತ್ತು. ಆದರೆ, ಇಲ್ಲಿ ಮುಂದುವರಿಯುವುದು ಈಗ ತುಂಬಾ ಕಷ್ಟವಾಗಿದೆ. ಇಲ್ಲಿನ ಪರಿಸ್ಥಿತಿ ಮುಂದಿನ 5 ವರ್ಷಗಳಲ್ಲಿ ಸುಧಾರಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ನಾವು ಇಲ್ಲಿಂದ ಹೊರ ಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು. ಟೆಕ್ ಕಂಪನಿಯ ಈ ಹೇಳಿಕೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
Advertisement