

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ದೇವರನಾಡಲ್ಲಿ ಭಾರಿ ಪ್ರವಾಹ ಸೃಷ್ಟಿ ಮಾಡಿದ್ದು, ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸುವ ವೇಳೆ ಈಜು ತರಬೇತುದಾರೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಹೌದು.. ಆಗಸ್ಟ್ 1ರಂದು ಕಣ್ಣೂರು ಜಿಲ್ಲೆಯ ಮೀಂತುಳ್ಳಿ ದ್ವೀಪದ ಸಮೀಪ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸುವ ವೇಳೆ ಪ್ರಾಣ ಕಳೆದುಕೊಂಡ ಈಜು ತರಬೇತುದಾರ ಆರ್. ರಾಜೇಶ್ ಅವರಿಗೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಬುಧವಾರ ಭಾವಪೂರ್ಣ ನಮನ ಸಲ್ಲಿಸಿದರು.
ಈಜು ತರಬೇತುದಾರರಾಗಿದ್ದ ರಾಜೇಶ್, ಉಕ್ಕಿ ಹರಿಯುತ್ತಿದ್ದ ಕರಿಯಂಗೋಡ್ ನದಿಯಿಂದ ರಕ್ಷಿಸಿದ್ದ ವ್ಯಕ್ತಿಗೆ ತಮ್ಮದೇ ಲೈಫ್ ಜಾಕೆಟ್ ಅನ್ನು ನೀಡಿ, ಕೊನೆಗೆ ತಮ್ಮ ಜೀವವನ್ನೇ ತ್ಯಾಗ ಮಾಡಿದರು.
ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದ ಸ್ಥಳೀಯ ನಿವಾಸಿ 61 ವರ್ಷದ ಬೆನ್ನಿಯನ್ನು ದಡದತ್ತ ಕರೆದುಕೊಂಡು ಬರುತ್ತಿದ್ದ ವೇಳೆ ರಾಜೇಶ್ ಉಕ್ಕಿ ಹರಿಯುತ್ತಿದ್ದ ಕರಿಯಂಗೋಡ್ ನದಿಯ ಪ್ರಬಲ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಅವರ ಮೃತದೇಹ ಮಂಗಳವಾರ ಪತ್ತೆಯಾಗಿತ್ತು.
ತನ್ನ ಲೈಫ್ ಜಾಕೆಟ್ ನೀಡಿ, ಪ್ರಾಣ ತ್ಯಾಗ ಮಾಡಿದ್ದ ರಾಜೇಶ್
ಈ ಘಟನೆ ಅತ್ಯಂತ ಹೃದಯವಿದ್ರಾವಕ ಎಂದು ಸಿಎಂ ಸತೀಶನ್ ಹೇಳಿದ್ದಾರೆ. ಈ ಹಿಂದೆ ಕೇರಳದ ಪ್ರವಾಹ ಹಾಗೂ ವಯನಾಡು ದುರಂತದ ಸಂದರ್ಭದಲ್ಲೂ ರಾಜೇಶ್ ಸ್ವಯಂಸೇವಕರಾಗಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಅವರು ಸ್ಮರಿಸಿದರು.
"ಕಣ್ಣೂರಿನ ಪುಳಿಂಗೋಮ್‌ನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ರಾಜೇಶ್ ತಮ್ಮದೇ ಲೈಫ್ ಜಾಕೆಟ್ ನೀಡಿದರು. ಬಳಿಕ ಅವರು ಪ್ರವಾಹದ ನೀರಿಗೆ ಬಲಿಯಾದರು. ಅವರ ಅಂತಿಮ ತ್ಯಾಗ ಮತ್ತು ಮಾನವೀಯತೆಯ ಮೇಲಿನ ನಿಸ್ವಾರ್ಥ ಪ್ರೀತಿ ಎಂದೆಂದಿಗೂ ಸ್ಮರಣೀಯ. ಅವರ ಕುಟುಂಬ, ಸ್ನೇಹಿತರು ಮತ್ತು ಆತ್ಮೀಯರಿಗೆ ನನ್ನ ಸಂತಾಪಗಳು. ಅವರ ಧೈರ್ಯ ಸದಾ ಜೀವಂತವಾಗಿರುತ್ತದೆ," ಎಂದು ಮುಖ್ಯಮಂತ್ರಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ತಿರುವನಂತಪುರಂ ಮೂಲದ ರಾಜೇಶ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಕೂಡ ಸಂತಾಪ ಸೂಚಿಸಿದ್ದಾರೆ.
2018ರ ಕೇರಳ ಪ್ರವಾಹ, 2024ರ ವಯನಾಡು ಭೂಕುಸಿತ ದುರಂತ ಹಾಗೂ 2026ರ ಪ್ರವಾಹದಲ್ಲಿ ರಾಜೇಶ್ ನಿಜವಾದ ನಾಯಕನಾಗಿ ಸೇವೆ ಸಲ್ಲಿಸಿದ್ದರು ಎಂದು ಅವರು ಹೇಳಿದ್ದಾರೆ.
ನುರಿತ ಈಜು ತಜ್ಞ ರಾಜೇಶ್
"ತಿರುವನಂತಪುರಂನ ಕಳ್ಳಿಯೂರು ನಿವಾಸಿ ಆರ್. ರಾಜೇಶ್ ಅವರು ರಕ್ಷಣಾ ಸ್ವಯಂಸೇವಕರಾಗಿಯೂ, ರ‍್ಯಾಪೆಲಿಂಗ್ ತರಬೇತುದಾರರಾಗಿಯೂ ಕೇರಳಕ್ಕೆ ಅಗತ್ಯವಿದ್ದಾಗಲೆಲ್ಲಾ ಕರ್ತವ್ಯಕ್ಕೆ ಧಾವಿಸುತ್ತಿದ್ದರು. 2018ರ ಪ್ರವಾಹ, 2024ರ ವಯನಾಡು ಭೂಕುಸಿತ ದುರಂತ ಹಾಗೂ 2026ರ ಪ್ರವಾಹದಲ್ಲೂ ಅವರು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದರು. ಕೊನೆಗೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.
ಅವರ ಧೈರ್ಯ, ನಿಸ್ವಾರ್ಥ ಸೇವೆ ಮತ್ತು ತ್ಯಾಗ ಕೇರಳದ ಇತಿಹಾಸದಲ್ಲಿ ಸದಾ ನೆನಪಾಗಲಿದೆ. ಅವರ ಪತ್ನಿ ಲಕ್ಷ್ಮಿ, ಪುತ್ರರಾದ ಅರ್ಷಾನ್ ಮತ್ತು ಅಭಿಷೇಕ್, ಪೋಷಕರಾದ ರಾಜಶೇಖರನ್ ಮತ್ತು ಗೀತಾ ಸೇರಿದಂತೆ ಕುಟುಂಬದ ಎಲ್ಲರಿಗೂ ನನ್ನ ಸಂತಾಪಗಳು. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ," ಎಂದು ಚಂದ್ರಶೇಖರ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್ ಕೂಡ ಮಂಗಳವಾರ ಈಜು ತರಬೇತುದಾರ ರಾಜೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.