

ನವದೆಹಲಿ: ಕಪ್ಪು ಸಮುದ್ರದಲ್ಲಿ ಉಕ್ರೇನ್ ಸಮೀಪ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆದ ಬಳಿಕ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ನಾವಿಕರಿಗಾಗಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ಇಂದು ನಡೆದ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು, ಉಕ್ರೇನ್ ಅಧಿಕಾರಿಗಳು, ರೊಮೇನಿಯನ್ ಮ್ಯಾರಿಟೈಮ್ ರೆಸ್ಕ್ಯೂ ಕೋಆರ್ಡಿನೇಷನ್ ಸೆಂಟರ್, ರೊಮೇನಿಯನ್ ಕೋಸ್ಟ್ ಗಾರ್ಡ್ ಹಾಗೂ ಇತರ ಸಂಬಂಧಿತ ರಕ್ಷಣಾ ಸೇವೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು ಎಂದು ಹೇಳಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠಕ್ಕೆ ಈ ಮಾಹಿತಿ ತಿಳಿಸಲಾಗಿದೆ.
ಸುಳಿವೇ ಇಲ್ಲ
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲ್ಲಿಸಿದ್ದ ಕೈಗೊಂಡ ಕ್ರಮಗಳ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ಆಗಸ್ಟ್ 5ರವರೆಗೆ ಲಭ್ಯವಾದ ಮಾಹಿತಿಯ ಪ್ರಕಾರ ದೀಪಕ್ ಕುಮಾರ್ ಗುಪ್ತಾ ಮತ್ತು ರಾಮಚಂದ್ರ ಅವರ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿತು.
ಹೊಸ ಮಾಹಿತಿ ಲಭ್ಯವಾಗುವವರೆಗೆ ಶೋಧ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಆದರೆ ಡಿಜಿಎಂಎ ಬಾಕಿ ಉಳಿದಿರುವ ತನಿಖೆ ಹಾಗೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ವರದಿಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದು, ಸಂಬಂಧಪಟ್ಟ ಎಲ್ಲ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ದಾಖಲಿಸಿತು.
ನಾಪತ್ತೆಯಾಗಿರುವ ನಾವಿಕರ ಕುಟುಂಬಗಳಿಗೆ ವಿಮಾ ಪರಿಹಾರ ಪಡೆಯುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸುಗಮಗೊಳಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.
ದೀಪಕ್ ಕುಮಾರ್ ಗುಪ್ತಾ ಅವರ ಅಣ್ಣ ಸಂದೀಪ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಉಕ್ರೇನ್ ಮತ್ತು ರೊಮೇನಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ತಮ್ಮ ಕುಟುಂಬವು ಭಾರತ ಸರ್ಕಾರ ಹಾಗೂ ಉಭಯ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಪದೇಪದೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ರಾಯಭಾರ ಕಚೇರಿಯ ಸತತ ಪ್ರಯತ್ನ
ಜುಲೈ 26ರಿಂದ 30ರ ನಡುವೆ ಕುಟುಂಬವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಉಭಯ ದೇಶಗಳ ಭಾರತೀಯ ರಾಯಭಾರ ಕಚೇರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಅಥವಾ ಸಕಾರಾತ್ಮಕ ಭರವಸೆ ದೊರೆತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
22 ವರ್ಷದ ದೀಪಕ್ ಗುಪ್ತಾ ಭಾರತೀಯ ಸಿಬ್ಬಂದಿಯನ್ನು ಹೊತ್ತಿದ್ದ ವ್ಯಾಪಾರಿ ಹಡಗು ಉಕ್ರೇನ್‌ನ ಒಡೆಸಾ ಬಂದರು ಸಮೀಪ ದಾಳಿಗೆ ಒಳಗಾದ ಬಳಿಕ ನಾಪತ್ತೆಯಾಗಿದ್ದರು.
ಆರಂಭದಲ್ಲಿ ಮೆಹ್ತಾ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಮ್ಯಾರಿಟೈಮ್ ಅಡ್ಮಿನಿಸ್ಟ್ರೇಷನ್ ಜಂಟಿಯಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಿವೆ ಎಂದು ತಿಳಿಸಿದರು. ಎಲ್ಲ ಪ್ರಯತ್ನಗಳ ಹೊರತಾಗಿಯೂ ಇಬ್ಬರು ನಾವಿಕರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದರು.
ವಿಮೆ ಕೊಡಿಸಲು ಸೂಚನೆ
ನಾವಿಕರ ಉದ್ಯೋಗ ಒಪ್ಪಂದಗಳಲ್ಲಿ ವಿಮಾ ಸೌಲಭ್ಯವಿದ್ದು, ಅವರ ಕುಟುಂಬಗಳಿಗೆ ವಿಮಾ ಪರಿಹಾರ ದೊರಕುವಂತೆ ಸರ್ಕಾರ ನೆರವಾಗಬಹುದು ಎಂದು ನ್ಯಾಯಮೂರ್ತಿ ಬಾಗ್ಚಿ ಮೆಹ್ತಾಗೆ ತಿಳಿಸಿದರು. ಆದರೆ ನಾಪತ್ತೆಯಾದ ನಾವಿಕರ ಕುಟುಂಬಗಳ ಪರ ವಕೀಲರು ಯಾವುದೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆದಿಲ್ಲ ಎಂದು ಆರೋಪಿಸಿದರು. ಜುಲೈ 26ರ ಸ್ಥಿತಿಯನ್ನೇ ರಾಯಭಾರ ಕಚೇರಿಯ ದಾಖಲೆಯಲ್ಲಿ ತೋರಿಸಲಾಗಿದೆ ಎಂದು ಹೇಳಿದರು.
ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸುವುದರಿಂದ ಪ್ರಾಯೋಗಿಕವಾಗಿ ಯಾವುದೇ ಪ್ರಯೋಜನವಿಲ್ಲ ಎಂದು ಮೆಹ್ತಾ ತಿಳಿಸಿದರೂ, ಅಧಿಕಾರಿಗಳು ಸಂಬಂಧಪಟ್ಟ ಎಲ್ಲ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಆಗಸ್ಟ್ 3ರಂದು ಸುಪ್ರೀಂ ಕೋರ್ಟ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಿಸಿ, ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆದ ಬಳಿಕ ನಾಪತ್ತೆಯಾಗಿರುವ ನಾವಿಕರನ್ನು ಪತ್ತೆಹಚ್ಚುವಂತೆ ಸೂಚಿಸಿತ್ತು.
ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ರೊಮೇನಿಯಾದ ಬುಚಾರೆಸ್ಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಮಾಹಿತಿ ಪಡೆದು ದೀಪಕ್ ಗುಪ್ತಾ ಅವರ ಇರುವಿಕೆಯ ಬಗ್ಗೆ ವಿಚಾರಿಸುವಂತೆ ಮೆಹ್ತಾಗೆ ನ್ಯಾಯಪೀಠ ಸೂಚಿಸಿತ್ತು.
ಕುಟುಂಬದ ಸದಸ್ಯರ ಪ್ರಕಾರ, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭರತೌಲ್ ಗ್ರಾಮದ ನಿವಾಸಿಯಾಗಿರುವ ದೀಪಕ್ ಗುಪ್ತಾ ಎಂವಿ ಎಜಿಎನ್ ರಾಗ್ನರ್ ಎಂಬ ವ್ಯಾಪಾರಿ ಹಡಗಿನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ದೀಪಕ್ ಅವರ ಕುಟುಂಬ ಮೂಲತಃ ಬಿಹಾರದ ಸಿವಾನ್ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಬರೇಲಿಯ ಭರತೌಲ್ ಗ್ರಾಮದಲ್ಲಿ ವಾಸಿಸುತ್ತಿದೆ.