

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದ್ದ ತರಬೇತಿ ವಿಮಾನ ಇಂದು ಮಧ್ಯಾಹ್ನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.
ಸುಮಾರು ಏಳು ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ನಡೆದ ವಿಮಾನ ದುರಂತದಲ್ಲಿ ಅಂದಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದರು.
ಈ ಪ್ರಕರಣ ಹಸಿರಾಗಿರುವಂತೆಯೇ ಮಧ್ಯಾಹ್ನ 12.35ರ ಸುಮಾರಿಗೆ ವಿಮಾನ ನಿಲ್ದಾಣದ ಆವರಣದಲ್ಲೇ ಈ ಘಟನೆ ನಡೆದಿದೆ. ರನ್‌ವೇಯಿಂದ ಸ್ವಲ್ಪ ದೂರದಲ್ಲಿ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ.
ಜನವರಿಯಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. 66 ವರ್ಷದ ಎನ್‌ಸಿಪಿ ನಾಯಕ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ, ಸಹಾಯಕ ಹಾಗೂ ಪೈಲಟ್ ಸುಮಿತ್ ಕಪೂರ್ ಮತ್ತು ಸಹ ಪೈಲಟ್ ಶಾಂಭವಿ ಪಾಠಕ್ ಇದ್ದ ಲಿಯರ್‌ಜೆಟ್ 45 ವಿಮಾನ ಜನವರಿ 28ರಂದು ಎರಡನೇ ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸುವ ವೇಳೆ ಪತನಗೊಂಡಿತ್ತು.
ವಿಮಾನ ಅಪಘಾತ ತನಿಖಾ ಸಂಸ್ಥೆ AAIB ಪ್ರಕಾರ, ಅಂದು ವಿಮಾನ ಪತನಗೊಂಡ ಸಮಯದಲ್ಲಿ ಗೋಚರತೆ ಅಗತ್ಯ ಮಟ್ಟಕ್ಕಿಂತ ಕಡಿಮೆಯಾಗಿತ್ತು. ಅಲ್ಲದೆ, ಬಾರಾಮತಿ ರನ್‌ವೇಯಲ್ಲಿನ ಮಸುಕಾಗಿದ್ದ ಗುರುತುಗಳು ಮತ್ತು ಸಡಿಲ ಜಲ್ಲಿಕಲ್ಲುಗಳ ಬಗ್ಗೆಯೂ AAIB ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿತ್ತು.
ನಿಯಂತ್ರಣ ರಹಿತ ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿಯಂತ್ರಣ ಸಂಸ್ಥೆ DGCAಗೆ AAIB ಶಿಫಾರಸು ಮಾಡಿತ್ತು. AAIB ತನ್ನ ಅಂತಿಮ ವರದಿಯನ್ನು ಮುಂದಿನ ವರ್ಷದ ಜನವರಿಯೊಳಗೆ ಸಲ್ಲಿಸುವ ನಿರೀಕ್ಷೆಯಿದೆ.
ಬಾರಾಮತಿಯಲ್ಲಿ ಮೇ ತಿಂಗಳಲ್ಲೂ ತರಬೇತಿ ವಿಮಾನ ಪತನ
ಮೇ 13ರಂದು ಬಾರಾಮತಿಯಲ್ಲಿ ಖಾಸಗಿ ಕಂಪನಿಯ ಮತ್ತೊಂದು ತರಬೇತಿ ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ ಗಂಭೀರ ಗಾಯಗಳಾಗಿರಲಿಲ್ಲ. ವಿಮಾನದಲ್ಲಿದ್ದ ಏಕೈಕ ವ್ಯಕ್ತಿಯಾಗಿದ್ದ ತರಬೇತಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು. ಬಾರಾಮತಿ ಏರ್‌ಸ್ಟ್ರಿಪ್ ಸಮೀಪದ ಗೊಜುಬಾವಿ ಗ್ರಾಮದ ಬಳಿ ಈ ಘಟನೆ ನಡೆದಿತ್ತು. ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳ ಮೊದಲು ವಿಮಾನದ ಒಂದು ಭಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು.
“ಪ್ರತ್ಯಕ್ಷದರ್ಶಿಗಳಿಂದ ದೊರೆತ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನ ಕಡಿಮೆ ಎತ್ತರದಲ್ಲಿ ಹಾರುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತುರ್ತು ಲ್ಯಾಂಡಿಂಗ್ ವೇಳೆ ವಿಮಾನದ ಒಂದು ಬದಿಯು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ನೆಲಕ್ಕೆ ಬಿದ್ದಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಬಾರಾಮತಿ ವಿಮಾನ ನಿಲ್ದಾಣಕ್ಕೆ ಹೊಸ ರೂಪ
ಇದೀಗ ಬಾರಾಮತಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ವಿಮಾನಗಳ ಸಂಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪ್ರತ್ಯೇಕ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ನಿರ್ಮಿಸಲಾಗುತ್ತದೆ. ರನ್‌ವೇಯನ್ನೂ ವಿಸ್ತರಿಸಲಾಗುತ್ತದೆ.
ರಾತ್ರಿ ವೇಳೆ ವಿಮಾನಗಳ ಸುರಕ್ಷಿತ ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗೆ ವಿಶೇಷ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಪ್ರತ್ಯೇಕ ಅಗ್ನಿಶಾಮಕ ಠಾಣೆ ಹಾಗೂ ಬಲಿಷ್ಠ ಭದ್ರತಾ ಗೋಡೆಯನ್ನೂ ನಿರ್ಮಿಸಲು ಯೋಜಿಸಲಾಗಿದೆ.