

ಮುಂಬೈ: ಯೂಟ್ಯೂಬ್ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ, ಹಾಸ್ಯನಟ ಸಮಯ್ ರೈನಾ ಮತ್ತು ಇತರರ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಯೂಟ್ಯೂಬ್ ರಿಯಾಲಿಟಿ ಶೋ "ಇಂಡಿಯಾಸ್ ಗಾಟ್ ಲ್ಯಾಟೆಂಟ್" ನಲ್ಲಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರೈನಾ, ರಣವೀರ್ ಅಲ್ಹಾಬಾದಿಯಾ ಮತ್ತು ಇತರರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು.
ತಮ್ಮ ವಿರುದ್ಧ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಮತ್ತು ಬಲವಂತದ ಕ್ರಮದಿಂದ ರಕ್ಷಣೆ ಕೋರಿ ರೈನಾ, ರಣವೀರ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎಲ್ಲಾ ಎಫ್ಐಆರ್ ಗಳನ್ನು ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ಜೆ.ವಿ. ಮೋಹನ ಅವರಿದ್ದ ಪೀಠವು, ರೈನಾ ಹಾಗೂ ಇತರರು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸಿದ್ದಾರೆಂದು ಗಮನಿಸಿ, ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿತು.
ಕಳೆದ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ರೈನಾ ಮತ್ತು ಇತರ ನಾಲ್ವರಿಗೆ 3 ಲಕ್ಷ ರೂ. ದಂಡ ವಿಧಿಸಿತ್ತು. ಅಲ್ಲದೆ ನ್ಯಾಯಾಲಯವು ಅವರ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಿತು. ವಾಕ್ ಸ್ವಾತಂತ್ರ್ಯವು ಸಾಮಾಜಿಕ ರೂಢಿಗಳನ್ನು ಉಲ್ಲಂಘಿಸುವ ಭಾಷೆಯನ್ನು ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ.