'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!

ಸಾರ್ವಜನಿಕ ಜೀವನದಲ್ಲಿ ಸುಮಾರು 30 ವರ್ಷಗಳನ್ನು ಕಳೆದಿದ್ದು, ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಹಿನ್ನಡೆಗಳೆರಡನ್ನೂ ಕಂಡಿರುವುದಾಗಿ ನಿತಿನ್ ಗಡ್ಕರಿ ಹೇಳಿದರು.
 Nitin Gadkari
ಕೇಂದ್ರ ಸಚಿವ ನಿತಿನ್ ಗಡ್ಕರಿ
Updated on

ನಾಗಪುರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, '30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಇನ್ನು ಸಾಧ್ಯವಿಲ್ಲ. ಮುಂದಿನ ಯುವ ಪೀಳಿಗೆಗೆ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ಸಿಗಬೇಕು ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಹೊಸ ಊಹಾಪೋಹಗಳಿಗೆ ಕಾರಣವಾಗಿದ್ದಾರೆ.

ನಾಗಪುರದ ಕಟೋಲ್‌ನಲ್ಲಿ ನಡೆದ 'ಏಕಲವ್ಯ ಏಕಲ್ ವಿದ್ಯಾಲಯ ಶಿಕ್ಷಕ-ಮೇಲ್ವಿಚಾರಕ ತರಬೇತಿ ತರಗತಿ'ಯಲ್ಲಿ ಮಾತಾಡಿದ ಕೇಂದ್ರ ಸಚಿವರು, ಸಾರ್ವಜನಿಕ ಜೀವನದಲ್ಲಿ ಸುಮಾರು 30 ವರ್ಷಗಳನ್ನು ಕಳೆದಿದ್ದು, ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಹಿನ್ನಡೆಗಳೆರಡನ್ನೂ ಕಂಡಿರುವುದಾಗಿ ಅವರು ಹೇಳಿದರು.

ನಾನು ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಅನೇಕ ಏಳುಬೀಳುಗಳನ್ನು ಕಂಡಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಆದರೆ ಈಗ ನನಗೆ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ; ಹೊಸ ಪೀಳಿಗೆಗೆ ಕೆಲಸ ಮಾಡುವ ಅವಕಾಶವನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟದ ಸಂಭಾವ್ಯ ವಿಸ್ತರಣೆ ಮತ್ತು ಸಚಿವರ ಜವಾಬ್ದಾರಿಗಳಲ್ಲಿ ಬದಲಾವಣೆಗಳ ಕುರಿತು ಊಹಾಪೋಹಗಳು ನಡೆಯುತ್ತಿರುವ ಸಮಯದಲ್ಲೇ ಈ ಹೇಳಿಕೆಗಳು ಹೊರಬಿದ್ದಿವೆ. ಹೀಗಾಗಿ, ಅವರು ಸಕ್ರಿಯ ರಾಜಕಾರಣದಿಂದ ಕ್ರಮೇಣ ದೂರ ಸರಿಯುವ ಸುಳಿವು ನೀಡುತ್ತಿದ್ದಾರೆಯೇ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಆದಾಗ್ಯೂ, ಗಡ್ಕರಿ ಅವರು ತಮ್ಮ ನಿವೃತ್ತಿಯನ್ನು ಘೋಷಿಸಿಲ್ಲ ಅಥವಾ ರಾಜಕೀಯವನ್ನು ತೊರೆಯುವ ಯೋಜನೆಯ ಬಗ್ಗೆಯೂ ಹೇಳಿಲ್ಲ. ಅವರ ಈ ಹೇಳಿಕೆಗಳನ್ನು ಹುದ್ದೆಯಿಂದ ಕೆಳಗಿಳಿಯುವ ಔಪಚಾರಿಕ ಘೋಷಣೆಗಿಂತ ಹೆಚ್ಚಾಗಿ, ಪೀಳಿಗೆಯ ಬದಲಾವಣೆ'ಗೆ ನೀಡಿದ ಕರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ಆದರೆ, ರಾಜಕೀಯದಿಂದ ನಿವೃತ್ತರಾಗುವ ಬಗ್ಗೆ ಗಡ್ಕರಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ತಮ್ಮ ಭಾಷಣದ ವೇಳೆ, ಕೋವಿಡ್-19 ಸಾಂಕ್ರಾಮಿಕದ ನಂತರ ತಮ್ಮ ದಿನಚರಿ ಮತ್ತು ಜೀವನಶೈಲಿಯಲ್ಲಿ ಆದ ಬದಲಾವಣೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ತಾವು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿದ್ದು, ಶಿಸ್ತುಬದ್ಧ ದೈನಂದಿನ ದಿನಚರಿಯನ್ನು ಅನುಸರಿಸಲು ಪ್ರಾರಂಭಿಸಿರುವುದಾಗಿ ಅವರು ಹೇಳಿದರು.

 Nitin Gadkari
ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಹಿಂದೆ ಪಕ್ಷದ ಕೆಲಸದಲ್ಲಿ ತೊಡಗಿದ್ದಾಗ ನಾನು ಸಮೋಸಾಗಳನ್ನು ತಿನ್ನುತ್ತಿದ್ದೆ. ಎಲ್ಲೆಂದರಲ್ಲಿ ಮಲಗುತ್ತಿದ್ದೆ. ಆದರೆ ಕೊರೊನಾ ಅವಧಿಯ ನಂತರ ನಾನು ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡೆ. ಈಗ ಪ್ರತಿದಿನ ತಪ್ಪದೇ ಯೋಗ ಮಾಡುತ್ತೇನೆ. ಆರೋಗ್ಯ ಚೆನ್ನಾಗಿಲ್ಲದಿದ್ದರೆ ಅಧಿಕಾರ ಮತ್ತು ಹುದ್ದೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗಡ್ಕರಿ ಹೇಳಿದರು.

ಅವರು ಈ ಹಿಂದೆಯೂ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಹಿರಿಯ ನಾಯಕರು ಯುವಕರಿಗೆ ದಾರಿ ಮಾಡಿಕೊಡುವ ಕುರಿತು ಅವರು ಮಾತನಾಡಿರುವುದು ಇದೇ ಮೊದಲ ಬಾರಿಯೇನಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com