

ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದವನ್ನು “ಈ ಶತಮಾನದ ಅತಿದೊಡ್ಡ ಘಟನೆ” ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇದು ಭಾರತದ ಹೆಚ್ಚುತ್ತಿರುವ ಪ್ರತಿಷ್ಠೆ ಮತ್ತು ಜಾಗತಿಕ ವೇದಿಕೆಯಲ್ಲಿ ವೃದ್ಧಿಸುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಈ ವ್ಯಾಪಾರ ಒಪ್ಪಂದದಡಿ, ಅಮೆರಿಕ ಭಾರತೀಯ ಸರಕುಗಳ ಮೇಲೆ ವಿಧಿಸಲಾಗಿದ್ದ ಪರಸ್ಪರ ತೆರಿಗೆಯನ್ನು ಪ್ರಸ್ತುತ 25 ಶೇಕಡದಿಂದ 18 ಶೇಕಡ ಇಳಿಸಲು ಒಪ್ಪಿಕೊಂಡಿದೆ.
ದೇಶೀಯ ರಾಜಕಾರಣದ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಇತ್ತೀಚಿನ ಸಾಧನೆಯನ್ನು ಉಲ್ಲೇಖಿಸಿ ಪ್ರತಿಪಕ್ಷ ವಿರುದ್ಧ ಟೀಕಿಸಿದರು.
ಅಮೆರಿಕದೊಂದಿಗೆ ಕೈಗೂಡಿಸಿದ ವ್ಯಾಪಾರ ಒಪ್ಪಂದಕ್ಕಾಗಿ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಎನ್‌ಡಿಎ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.
ಇಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತವು ವಿಶ್ವ ವ್ಯವಹಾರಗಳಲ್ಲಿ ವೇಗವಾಗಿ ಪ್ರಮುಖ ಪಾತ್ರಧಾರಿಯಾಗಿ ಹೊರಹೊಮ್ಮುತ್ತಿದೆ ಮತ್ತು ಜಾಗತಿಕ ಸಮತೋಲನವನ್ನು ಕಾಪಾಡುವಲ್ಲಿ ಅದರ ಪಾತ್ರ ದಿನೇದಿನೇ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ ಎಂದರು.
“ಈ ಶತಮಾನದ ಅತಿದೊಡ್ಡ ಘಟನೆ ಎಂದರೆ ಭಾರತವು ಜಾಗತಿಕ ವೇದಿಕೆಯಲ್ಲಿ ನಿರ್ಣಾಯಕ ಶಕ್ತಿಯಾಗಿ ರೂಪುಗೊಳ್ಳುತ್ತಿರುವುದು,” ಎಂದು ಅವರು ಎನ್‌ಡಿಎ ಸಂಸದರಿಗೆ ತಿಳಿಸಿದರು.
ಭಾರತ ಮತ್ತು ಅಮೆರಿಕವು ನಿನ್ನೆ ಸೋಮವಾರ ಒಂದು ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಒಂದು ವರ್ಷ ಕಾಲ ಮುಂದುವರಿದ ತೀವ್ರ ತೆರಿಗೆ ವಿವಾದಕ್ಕೆ ಈ ಮೂಲಕ ತೆರೆ ಬಿದ್ದಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ರಫ್ತುಗಳ ಮೇಲೆ ವಿಧಿಸಲಾಗಿದ್ದ ಪರಸ್ಪರ ತೆರಿಗೆಯನ್ನು ಹಿಂದಿನ 25 ಶೇಕಡಾದಿಂದ 18 ಶೇಕಡಾಕ್ಕೆ ಇಳಿಸುವುದಾಗಿ ಘೋಷಿಸಿದರು. ಇದರಿಂದ ಭಾರತೀಯ ರಫ್ತುದಾರರಿಗೆ ಬಹುಕಾಲದ ನಿರೀಕ್ಷಿತ ಪರಿಹಾರ ದೊರಕಿದೆ.
ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವಿನ ದೂರವಾಣಿ ಸಂಭಾಷಣೆಯ ನಂತರ ಈ ಮಹತ್ವದ ಬೆಳವಣಿಗೆ ದೃಢಪಟ್ಟಿದ್ದು, ಹಲವು ತಿಂಗಳುಗಳ ಸಂಘರ್ಷ ಬಳಿಕ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಲ್ಲಿ ದೊಡ್ಡ ಮರುಹೊಂದಾಣಿಕೆಯನ್ನು ಸೂಚಿಸುತ್ತದೆ.
Advertisement