'ಉಪವಾಸ ಅಂತ್ಯ... ಹೊಣೆಗಾರಿಕೆ ಆರಂಭ': 26 ದಿನಗಳ ನಿರಾಹಾರ ಸತ್ಯಾಗ್ರಹ ಕೊನೆಗೊಳಿಸಿ ಸೋನಂ ವಾಂಗ್ಚುಕ್ ಹೇಳಿದ್ದೇನು? -Video

59 ವರ್ಷದ ವಾಂಗ್ಚುಕ್, ಉಪವಾಸ ಅಂತ್ಯಗೊಳಿಸಿದ ಬಳಿಕ ಮೆದಾಂತಾ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ವಿಡಿಯೊದಲ್ಲಿ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್, ಜೊತೆಗೆ ಲಡಾಖ್ ಏಪೆಕ್ಸ್ ಬಾಡಿಯ ನಾಯಕರು ತಡರಾತ್ರಿ ತಮ್ಮನ್ನು ಭೇಟಿಯಾಗಿ ಸರ್ಕಾರದ ಭರವಸೆಗಳನ್ನು ತಿಳಿಸಿದರು ಎಂದು ಹೇಳಿದ್ದಾರೆ.
Sonam Wangchuk
ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ
Updated on

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ನಿನ್ನೆ ಗುರುವಾರ ರಾತ್ರಿ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

59 ವರ್ಷದ ವಾಂಗ್ಚುಕ್, ಉಪವಾಸ ಅಂತ್ಯಗೊಳಿಸಿದ ಬಳಿಕ ಮೆದಾಂತಾ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ವಿಡಿಯೊದಲ್ಲಿ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್, ಜೊತೆಗೆ ಲಡಾಖ್ ಏಪೆಕ್ಸ್ ಬಾಡಿಯ ನಾಯಕರು ತಡರಾತ್ರಿ ತಮ್ಮನ್ನು ಭೇಟಿಯಾಗಿ ಸರ್ಕಾರದ ಭರವಸೆಗಳನ್ನು ತಿಳಿಸಿದರು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಲಿಖಿತ ಹೇಳಿಕೆಯಲ್ಲಿ, "ದೆಹಲಿ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರು ಹಾಗೂ ಜುಲೈ 20ರಂದು ನಡೆದ 'ಚಲೋ ಸಂಸದ್' ಮೆರವಣಿಗೆಯಲ್ಲಿ ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸದಿರುವ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದೆ" ಎಂದು ತಿಳಿಸಿದೆ.

ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಸುಧಾರಣೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಸುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಇತ್ತೀಚಿನ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಕುರಿತು ಸಹ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸುತ್ತಿದೆ ಎಂದು ಹೇಳಿದೆ.

ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದ್ದೇಕೆ?

ಸ್ವಲ್ಪ ಹೊತ್ತಿನ ಹಿಂದೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಇಲ್ಲಿ ಬಂದಿದ್ದರು. ಲಡಾಖ್ ಏಪೆಕ್ಸ್ ಬಾಡಿಯ ಹಿರಿಯ ನಾಯಕರೂ ಉಪಸ್ಥಿತರಿದ್ದರು, ಎಲ್ಲಾ ಪಕ್ಷಗಳ ಸಂಸದರಿಂದ ದೊರೆತ ಬೆಂಬಲದ ಬಳಿಕ ಈ ಸಭೆ ನಡೆದಿತ್ತು ಎಂದು ವಾಂಗ್ಚುಕ್ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ವಿವಿಧ ರಾಜಕೀಯ ಪಕ್ಷಗಳ ಸುಮಾರು 65 ಸಂಸದರು ಇಲ್ಲಿಗೆ ಬಂದು, ನನ್ನ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ ಪತ್ರಕ್ಕೆ ಸಹಿ ಹಾಕಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ದೇಶದ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಭರವಸೆ ನೀಡಿದರು. ಸರ್ಕಾರದ ಪರವಾಗಿ ಬಂದ ಸಚಿವರೂ ಇದೇ ಭರವಸೆ ನೀಡಿದರು ಎಂದು ಅವರು ಹೇಳಿದ್ದಾರೆ.

ಉಪವಾಸ ಅಂತ್ಯಗೊಳಿಸುವ ಮೊದಲು ಸರ್ಕಾರದಿಂದ ಲಿಖಿತ ಭರವಸೆ ಬೇಕೆಂದು ತಾವು ಪಟ್ಟು ಹಿಡಿದಿದ್ದಾಗಿ ವಾಂಗ್ಚುಕ್ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಕಠಿಣ ಮಾತುಕತೆ ನಡೆಯುತ್ತಿತ್ತು. ನನಗೆ ಲಿಖಿತ ಭರವಸೆ ಬೇಕಿತ್ತು. ಅದಕ್ಕಾಗಿ ಇನ್ನೆರಡು ದಿನ ಉಪವಾಸ ಮುಂದುವರಿಸಬೇಕಾಯಿತು. ಅಗತ್ಯವಿದ್ದರೆ ಇನ್ನೂ ಹೆಚ್ಚು ದಿನ ಉಪವಾಸ ಮುಂದುವರಿಸಲು ಸಿದ್ಧನಿದ್ದೆ. ಆದರೆ ಇಂದು ಅಂತಿಮವಾಗಿ ಸರ್ಕಾರ ಭರವಸೆ ನೀಡಿದೆ ಎಂದು ಅವರು ಹೇಳಿದ್ದಾರೆ.

Sonam Wangchuk
'ಮೋದಿ ಸರ್ಕಾರ ವಿದ್ಯಾರ್ಥಿಗಳನ್ನು ದೇಶದ ಶತ್ರುಗಳು ಎಂಬಂತೆ ನಡೆಸಿಕೊಳ್ಳುತ್ತಿದೆ': ಸೋನಿಯಾ ಗಾಂಧಿ

'ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಕ್ರಮವಿಲ್ಲ'

"ಸರ್ಕಾರದ ಹೇಳಿಕೆಯಲ್ಲಿ, ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರು ಹಾಗೂ ಜುಲೈ 20ರ 'ಚಲೋ ಸಂಸದ್' ಮೆರವಣಿಗೆಯಲ್ಲಿ ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸದಿರುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಹೇಳಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದೆ. ಜೊತೆಗೆ, ಇತ್ತೀಚಿನ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ವಿಚಾರವನ್ನೂ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸುತ್ತಿದೆ. ಈ ಮಕ್ಕಳಿಗೆ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರಿಗೆ ಸರ್ಕಾರ ಸ್ಪಂದಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ವಾಂಗ್ಚುಕ್ ಹೇಳಿದರು.

Sonam Wangchuk
'ಮಂಗಳ ಗ್ರಹಕ್ಕೆ ಹೋಗಿದ್ದಕ್ಕೂ ಕ್ರೆಡಿಟ್ ತೆಗೆದುಕೊಳ್ಳುವ ಪ್ರಧಾನಿ ಮೋದಿ, ನೀಟ್ ಅಕ್ರಮ ಸೋರಿಕೆಯ ಹೊಣೆ ಹೊತ್ತುಕೊಳ್ಳಲಿ': ಪ್ರಿಯಾಂಕಾ ಗಾಂಧಿ-Video

'ಉಪವಾಸ ಅಂತ್ಯ... ಹೊಣೆಗಾರಿಕೆಯ ಆರಂಭ'

ಎಕ್ಸ್‌ನಲ್ಲಿ ಉಪವಾಸ ಅಂತ್ಯ ಘೋಷಿಸಿದ ವಾಂಗ್ಚುಕ್, "END OF HUNGER... BEGINNING OF ACCOUNTABILITY...!" (ಉಪವಾಸ ಅಂತ್ಯ... ಹೊಣೆಗಾರಿಕೆಯ ಆರಂಭ!) ಎಂದು ಬರೆದಿದ್ದಾರೆ.

ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ವೈಫಲ್ಯಗಳಿಗೆ ಹೊಣೆಗಾರಿಕೆ ನಿಗದಿಪಡಿಸುವ ವಿಷಯವನ್ನು ಭಾರತೀಯ ಸಂಸತ್ತಿನಲ್ಲಿ ಚರ್ಚಿಸಲಾಗುವುದು ಎಂಬ ಭರವಸೆಯನ್ನು ಸರ್ಕಾರ ಹಾಗೂ ವಿವಿಧ ಪಕ್ಷಗಳ ಸಂಸದರಿಂದ ಪಡೆದ ನಂತರ ನಾನು ಉಪವಾಸ ಅಂತ್ಯಗೊಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಣೆಗಾರಿಕೆ ನಿಗದಿಪಡಿಸುವುದು ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂಬ ಬೇಡಿಕೆಯೊಂದಿಗೆ ವಾಂಗ್ಚುಕ್ ಜೂನ್ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಉಪವಾಸ ಸತ್ಯಾಗ್ರಹಕ್ಕೆ ಪ್ರತಿಪಕ್ಷ ನಾಯಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿವಿಧ ನಾಗರಿಕ ಸಮಾಜ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com