

ವಾರಾಣಸಿ: ವಾರಾಣಸಿ ನಗರ ವ್ಯಾಪ್ತಿಯಲ್ಲಿರುವ ಮಾಂಸ ಮತ್ತು ಮೀನು ಅಂಗಡಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ನಿರ್ಧಾರ ಸ್ಥಳೀಯ ಆಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೌದು.. ನಗರದ ಸ್ವಚ್ಛತೆ ಮತ್ತು ಸುಸಂಘಟಿತ ನಗರ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ, ವಾರಾಣಸಿ ಮಹಾನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳನ್ನು ನಗರದ ಹೊರವಲಯದಲ್ಲಿರುವ ನಿಗಧಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಪ್ರಸ್ತಾವನೆಗೆ ಶನಿವಾರ ಮೈದಾಗಿನ್‌ನ ಟೌನ್ ಹಾಲ್ ಕಟ್ಟಡದಲ್ಲಿ ಮೇಯರ್ ಅಶೋಕ್ ಕುಮಾರ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾನಗರ ಪಾಲಿಕೆಯ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.
ನಗರಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಅದರ ಭಾಗವಾಗಿ ಮಾಂಸ ಮತ್ತು ಮೀನು ಮಾರುಕಟ್ಟೆಗಳನ್ನು ವ್ಯವಸ್ಥಿತವಾಗಿ ನಗರದ ಹೊರವಲಯಕ್ಕೆ ಸ್ಥಳಾಂತರಿಸುವ ಯೋಜನೆಗೆ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತ ಹಿಮಾಂಶು ನಾಗಪಾಲ್, ಯೋಜನೆಯ ಮೊದಲ ಹಂತದಲ್ಲಿ ಐದು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದ್ದಾರೆ.
ಈ ಸ್ಥಳಗಳು ನಗರದ ಹೊರಗಿನ ಗಡಿಭಾಗಗಳಿಗೆ ಸಮೀಪದಲ್ಲಿದ್ದು, ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯೋಜನೆಯ ಪ್ರಕಾರ, ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಂಸ ಮತ್ತು ಮೀನು ಅಂಗಡಿಗಳನ್ನು ಮುಂದಿನ ದಿನಗಳಲ್ಲಿ ರಾಮನಗರ, ಸುಜಾಬಾದ್, ಗಣೇಶಪುರ, ಅವ್ಲೇಶ್ಪುರ ಹಾಗೂ ಶಿವಪುರ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಸ್ವಚ್ಛತೆಯನ್ನು ಸುಧಾರಿಸುವುದು, ಇಂತಹ ಮಾರುಕಟ್ಟೆಗಳ ಕಾರ್ಯನಿರ್ವಹಣೆಯನ್ನು ಹೆಚ್ಚು ವ್ಯವಸ್ಥಿತಗೊಳಿಸುವುದು ಹಾಗೂ ಗ್ರಾಹಕರಿಗೆ ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
Advertisement