ದೀದಿಗಾಗಿ ಯೂಸುಫ್ ಪಠಾಣ್ ರಾಜಿನಾಮೆ ಕೇಳಿದ್ರಾ Sourav Ganguly? ಮಾಜಿ ಕ್ರಿಕೆಟಿಗ ಹೇಳಿದ್ದೇನು?

ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ, ಇತ್ತೀಚಿನ ಚುನಾವಣಾ ಸೋಲಿನ ಬಳಿಕ ತಮ್ಮ ಪಕ್ಷವನ್ನು ಪುನರ್‌ವ್ಯವಸ್ಥೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
Sourav Ganguly-Mamaya banerjee
ಮಮತಾ ಬ್ಯಾನರ್ಜಿ ಮತ್ತು ಸೌರವ್ ಗಂಗೂಲಿ
Updated on

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡ ನಂತರ ರಾಜಕೀಯ ಸವಾಲುಗಳನ್ನು ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪರವಾಗಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೋರ್ವ ಮಾಜಿ ಕ್ರಿಕೆಟಿಗ ಹಾಗೂ ಟಿಎಂಸಿ ಸಂಸದ ಯೂಸುಫ್ ಪಠಾಣ್ ರ ರಾಜಿನಾಮೆ ಕೇಳಿದ್ದರು ಎಂಬ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ, ಇತ್ತೀಚಿನ ಚುನಾವಣಾ ಸೋಲಿನ ಬಳಿಕ ತಮ್ಮ ಪಕ್ಷವನ್ನು ಪುನರ್‌ವ್ಯವಸ್ಥೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಈ ಸೋಲಿನಲ್ಲಿ ಅವರು ತಮ್ಮ ಭಬಾನೀಪುರ ಕ್ಷೇತ್ರವನ್ನೂ ಕಳೆದುಕೊಂಡಿದ್ದು, ಪ್ರಸ್ತುತ ಯಾವುದೇ ಶಾಸನಸಭೆ ಅಥವಾ ಸಂಸತ್ತಿನ ಸದಸ್ಯತ್ವ ಹೊಂದಿಲ್ಲ. ಇದೇ ಕಾರಣಕ್ಕೆ ಯೂಸುಫ್ ಪಠಾಣ್ ರಾಜಿನಾಮೆ ಪಡೆದು ಅವರಿಂದ ತೆರವಾದ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸ್ಪರ್ಧಿಸಲು ಕಸರತ್ತು ನಡೆಯುತ್ತಿದೆ ಎಂಬ ಚರ್ಚೆಗಳೂ ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಇದರ ನಡುವೆಯೇ ಮಮತಾ ಬ್ಯಾನರ್ಜಿಗಾಗಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಯೂಸುಫ್ ಪಠಾಣ್ ಗೆ ರಾಜಿನಾಮೆ ನೀಡುವಂತೆ ಮನವೊಲಿಕೆಗೆ ಮುಂದಾಗಿದ್ದರು ಎನ್ನಲಾಗಿದೆ.

Sourav Ganguly-Mamaya banerjee
ರೆಬೆಲ್ ಶಾಸಕರ ಸಂಪರ್ಕದಲ್ಲಿ 23 TMC ಸಂಸದರು! ಮಮತಾ ಬ್ಯಾನರ್ಜಿಗೆ ಹೆಚ್ಚಿದ ಸಂಕಷ್ಟ- ಮೂಲಗಳು

ಆರೋಪ ಅಲ್ಲಗಳೆದ ಗಂಗೂಲಿ

ಇನ್ನು ಲೋಕಸಭಾ ಸಂಸದ ಯೂಸುಫ್ ಪಠಾಣ್ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮನವೊಲಿಸಲು ತಾನು ಪ್ರಯತ್ನಿಸಿದ್ದೇನೆ ಎಂಬ ವರದಿಯನ್ನು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮತ್ತೊಂದೆಡೆ, ಯೂಸುಫ್ ಪಠಾಣ್ ಕೂಡ ಇಂತಹ ಸುದ್ದಿಗಳು "ಸಂಪೂರ್ಣ ಸುಳ್ಳು" ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ವರದಿ ಸಂಚಲನ

ಕಳೆದ ವಾರ ಬಂಗಾಳದ ಒಂದು ದಿನಪತ್ರಿಕೆ, ಮಮತಾ ಬ್ಯಾನರ್ಜಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಲು ಲೋಕಸಭೆಯ ಉಪಚುನಾವಣೆಯ ಮೂಲಕ ಪ್ರವೇಶಿಸುವ ಸಾಧ್ಯತೆ ಇದೆ ಎಂದು ವರದಿ ಮಾಡಿತ್ತು. ಆದರೆ ಅದಕ್ಕಾಗಿ ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿಯಾಗಬೇಕಾಗುತ್ತದೆ.

ಆ ವರದಿಯ ಪ್ರಕಾರ, ಬಹರಂಪುರ ಲೋಕಸಭಾ ಕ್ಷೇತ್ರದ ಸಂಸದ ಯೂಸುಫ್ ಪಠಾಣ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮನವೊಲಿಸಲು ತೃಣಮೂಲ ಕಾಂಗ್ರೆಸ್, ಸೌರವ್ ಗಂಗೂಲಿ ಅವರ ಸಹಾಯ ಕೋರಿತ್ತು. ಆದರೆ ಪಠಾಣ್ ಈ ಪ್ರಸ್ತಾವವನ್ನು ನಿರಾಕರಿಸಿದ್ದಾರೆ ಎಂದು ವರದಿ ಹೇಳಿತ್ತು.

ಈ ಸುದ್ದಿ, ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮ ಪಕ್ಷದ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ದೆಹಲಿಯಲ್ಲಿ ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಲು ಸಜ್ಜಾಗಿದ್ದ ಸಮಯದಲ್ಲೇ ಹರಿದಾಡಿತ್ತು.

ಗಂಗೂಲಿ ಏನು ಹೇಳಿದರು?

ಈ ವರದಿಯನ್ನು ಸೌರವ್ ಗಂಗೂಲಿ "ತಪ್ಪು ಮತ್ತು ಸಂಪೂರ್ಣ ಸುಳ್ಳು" ಎಂದು ತಳ್ಳಿಹಾಕಿದ್ದಾರೆ. "ನಾನು ಮಮತಾ ಬ್ಯಾನರ್ಜಿ ಅವರ ಪರವಾಗಿ ಯೂಸುಫ್ ಪಠಾಣ್ ಅವರನ್ನು ಸಂಪರ್ಕಿಸಿ, ಅವರು ಆಯ್ಕೆಯಾದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದ್ದೇನೆ ಹಾಗೂ ಅದರಿಂದ ಮಮತಾ ಬ್ಯಾನರ್ಜಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಾಗುತ್ತದೆ ಎಂದು ಲೇಖನದಲ್ಲಿ ಆರೋಪಿಸಲಾಗಿದೆ.

ಜೊತೆಗೆ, ನನ್ನ ಮೂಲಕ ಬಂದ ಈ ಸಂದೇಶಕ್ಕೆ ಯೂಸುಫ್ ಪಠಾಣ್ ಒಪ್ಪಲಿಲ್ಲ ಎಂದು ಕೂಡ ವರದಿ ಮಾಡಲಾಗಿದೆ. ಈ ಎಲ್ಲಾ ಆರೋಪಗಳು ಸಂಪೂರ್ಣ ಸುಳ್ಳು." ಎಂದು ಹೇಳಿದ್ದಾರೆ.

ಇನ್ನೂ ಅವರು, ತಮ್ಮ ವಿರುದ್ಧ ಮಾಡಲಾದ ಆರೋಪಗಳು "ಸತ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾಡಲಾದ ನಿರ್ಲಕ್ಷ್ಯದ ವರದಿ" ಎಂದು ಹೇಳಿದ್ದಾರೆ.

"ಮಮತಾ ಬ್ಯಾನರ್ಜಿ ಅವರು ಯೂಸುಫ್ ಪಠಾಣ್ ಅವರಿಗೆ ಯಾವುದೇ ಸಂದೇಶವನ್ನು ತಲುಪಿಸಲು ನನ್ನನ್ನು ಎಂದಿಗೂ ಕೇಳಿಲ್ಲ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವಾಗಲಿ ಅಥವಾ ಬೇರೆ ಯಾವುದೇ ವಿಷಯವಾಗಲಿ, ನಾನು ಯೂಸುಫ್ ಪಠಾಣ್ ಅವರನ್ನು ಈ ಕುರಿತು ಸಂಪರ್ಕಿಸಿಲ್ಲ. ಆದ್ದರಿಂದ, ಅವರು ಆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ," ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ತಾನು ಯಾವುದೇ ರಾಜಕೀಯ ವಿಷಯಗಳಲ್ಲಿ ಭಾಗಿಯಾಗಿಲ್ಲ ಎಂದು ಮಾಜಿ ಕ್ರಿಕೆಟಿಗರು ತಿಳಿಸಿದ್ದಾರೆ.

ಯೂಸುಫ್ ಪಠಾಣ್ ಪ್ರತಿಕ್ರಿಯೆ

ಐಪಿಎಲ್‌ನಲ್ಲಿ ಸೌರವ್ ಗಂಗೂಲಿ ಜೊತೆ ಕೆಲಕಾಲ ಆಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಯೂಸುಫ್ ಪಠಾಣ್ ಕೂಡ ಈ ವರದಿಯನ್ನು ತಳ್ಳಿಹಾಕಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಯೂಸುಫ್ ಪಠಾಣ್, "ಕಳೆದ ಕೆಲವು ದಿನಗಳಿಂದ, ಮಮತಾ ಬ್ಯಾನರ್ಜಿ ಅವರು ನನ್ನ ಬಹರಂಪುರ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿದ್ದಾರೆ.

ಇದರಿಂದ ಅವರು ಅಲ್ಲಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ. ಈ ವಿಷಯದ ಬಗ್ಗೆ ಮಮತಾ ಬ್ಯಾನರ್ಜಿ ಅವರು ನನ್ನೊಂದಿಗೆ ಎಂದಿಗೂ ಮಾತನಾಡಿಲ್ಲ. ಈ ಸುದ್ದಿ ಸಂಪೂರ್ಣ ಸುಳ್ಳು. ಮಮತಾ ಬ್ಯಾನರ್ಜಿ ಆಗಲಿ ಅಥವಾ ಪಕ್ಷದ ಯಾವುದೇ ನಾಯಕ ಆಗಲಿ, ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನನ್ನನ್ನು ಕೇಳಿಲ್ಲ." ಎಂದು ಸ್ಪಷ್ಟಪಡಿಸಿದ್ದಾರೆ.

ಯೂಸುಫ್ ಪಠಾಣ್ 2024ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದರು. ಬಹರಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನು ಸೋಲಿಸುವ ಮೂಲಕ ಅವರು ರಾಜಕೀಯ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com