

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯ ನಾಗರಿಕರು ಸಾಧ್ಯವಾದಷ್ಟು ಬೇಗ ದೇಶ ತೊರೆಯುವಂತೆ ಭಾರತ ಸರ್ಕಾರ ಸಲಹೆ ನೀಡಿದೆ. ಅಲ್ಲದೆ, ಭಾರತೀಯರು ಅನಗತ್ಯವಾಗಿ ಇರಾನ್‌ಗೆ ಪ್ರಯಾಣಿಸದಂತೆ ಎಚ್ಚರಿಕೆ ವಹಿಸುವಂತೆಯೂ ಮನವಿ ಮಾಡಿದೆ.
ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ಹೊಸ ಪ್ರಯಾಣ ಸಲಹೆ (Travel Advisory) ಬಿಡುಗಡೆ ಮಾಡಿದ್ದು, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನೀಡಲಾಗಿರುವ ಎಂಟನೇ ಸಲಹೆ ಇದಾಗಿದೆ.
ಪ್ರದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯ ನಾಗರಿಕರು ಇರಾನ್‌ಗೆ ಯಾವುದೇ ರೀತಿಯ ಪ್ರಯಾಣ ಕೈಗೊಳ್ಳಬಾರದು. ಈಗಾಗಲೇ ಇರಾನ್‌ನಲ್ಲಿ ಇರುವವರು ಲಭ್ಯವಿರುವ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ಆದಷ್ಟು ಬೇಗ ದೇಶ ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೇಲ್ ಸೋಮವಾರ ಮುಂಜಾನೆ ಇರಾನ್‌ನ ಮಧ್ಯ ಮತ್ತು ಪಶ್ಚಿಮ ಭಾಗಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಈ ಎಚ್ಚರಿಕೆ ನೀಡಲಾಗಿದೆ.
ಇರಾನ್ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್ ಈ ದಾಳಿ ನಡೆಸಿದ್ದು, ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಆತಂಕ ಹೆಚ್ಚಾಗಿದೆ.
ವಿದ್ಯಾರ್ಥಿಗಳು, ಉದ್ಯಮಿಗಳು, ಯಾತ್ರಿಕರು, ಪ್ರವಾಸಿಗರು ಸೇರಿದಂತೆ ಇರಾನ್‌ನಲ್ಲಿರುವ ಎಲ್ಲಾ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಈ ಹಿಂದೆ ಏಪ್ರಿಲ್ 7ರಂದು ಕೂಡ ಭಾರತ ಸರ್ಕಾರ ಮುನ್ನೆಚ್ಚರಿಕಾ ಸಲಹೆ ನೀಡಿತ್ತು. ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿದ್ದ ಭಾರತೀಯರು 48 ಗಂಟೆಗಳ ಕಾಲ ಸುರಕ್ಷಿತ ಸ್ಥಳದಲ್ಲೇ ಉಳಿಯುವಂತೆ ಸೂಚಿಸಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ ನಿರ್ಬಂಧದ ವಿಚಾರವಾಗಿ ಇರಾನ್‌ಗೆ ಗಡುವು ನೀಡಿದ್ದ ವೇಳೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಬಳಿಕ ಏಪ್ರಿಲ್‌ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದಾಗಲೂ ಭಾರತೀಯರಿಗೆ ಶೀಘ್ರವಾಗಿ ದೇಶ ತೊರೆಯುವಂತೆ ರಾಯಭಾರ ಕಚೇರಿ ಸಲಹೆ ನೀಡಿತ್ತು.
ಅಧಿಕೃತ ಮಾಹಿತಿಯ ಪ್ರಕಾರ, ಫೆಬ್ರವರಿ ಅಂತ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಗಳ ನಂತರ ಸಂಘರ್ಷ ತೀವ್ರಗೊಂಡಾಗ ಸುಮಾರು 9,000 ಭಾರತೀಯರು ಇರಾನ್‌ನಲ್ಲಿ ನೆಲೆಸಿದ್ದರು.
ಇವರಲ್ಲಿ ಸುಮಾರು 1,800 ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದು, ಇನ್ನೂ ಸುಮಾರು 7,500 ಭಾರತೀಯರು ಅಲ್ಲಿಯೇ ಉಳಿದಿದ್ದಾರೆ ಎಂದು ಅಂದಾಜಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತನ್ನ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ.
ಇಸ್ರೇಲ್-ಇರಾನ್ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯರಿಗೆ ಎಚ್ಚರಿಕೆಯಿಂದ ವರ್ತಿಸುವಂತೆ ಸೂಚಿಸಲಾಗಿದೆ.
Advertisement