ಟ್ರಂಪ್ ಸೂಚನೆಗೆ ಕ್ಯಾರೆ ಎನ್ನದ ಇಸ್ರೇಲ್: ಇರಾನ್ ಮೇಲೆ ವೈಮಾನಿಕ ದಾಳಿ; ಟೆಹ್ರಾನ್ ವಾಯುಪ್ರದೇಶ ಬಂದ್, ಯುದ್ಧ ಪುನರಾರಂಭ ಸಾಧ್ಯತೆ

ಇರಾನ್ ದಾಳಿಯ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ನೇರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕರೆ ಮಾಡಿ ತಕ್ಷಣದ ಪ್ರತಿದಾಳಿ ನಡೆಸದಂತೆ ಮನವಿ ಮಾಡಿದ್ದರು.
Donald Trump, Benjamin Netanyahu
ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹುAssociated Press
Updated on

ದುಬೈ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿಯನ್ನು ಕಡೆಗಣಿಸಿ ಇಸ್ರೇಲ್ ಸೋಮವಾರ ಮುಂಜಾನೆ ಇರಾನ್‌ನ ಮಧ್ಯ ಮತ್ತು ಪಶ್ಚಿಮ ಭಾಗಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತಿಯಾಗಿ ನಡೆದಿರುವ ಈ ಕಾರ್ಯಾಚರಣೆಯಿಂದ ಎರಡೂ ದೇಶಗಳ ನಡುವಿನ ಸಂಘರ್ಷ ಮತ್ತೆ ಪೂರ್ಣ ಪ್ರಮಾಣದ ಯುದ್ಧದತ್ತ ಸಾಗುವ ಆತಂಕ ಹೆಚ್ಚಿದೆ.

ದಾಳಿಯ ಬೆನ್ನಲ್ಲೇ ಟೆಹ್ರಾನ್‌ನ ಇಮಾಮ್ ಖಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ವಾಯುಪ್ರದೇಶವನ್ನು ಬಂದ್ ಮಾಡಲಾಗಿದ್ದು, ಭದ್ರತಾ ಎಚ್ಚರಿಕೆಯನ್ನು ಹೆಚ್ಚಿಸಿದೆ.

ಇಸ್ರೇಲ್ ಸೇನೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಇರಾನ್‌ನ ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿರುವ ಸೇನಾ ಗುರಿಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಇರಾನ್ ಆಡಳಿತಕ್ಕೆ ಸೇರಿದ ಸೇನಾ ಮೂಲಸೌಕರ್ಯಗಳ ಮೇಲೆ ನಿಖರ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದರೂ, ಯಾವ ಪ್ರದೇಶಗಳನ್ನು ಹೊಡೆದುರುಳಿಸಲಾಗಿದೆ ಎಂಬ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ದಾಳಿಯ ಬಳಿಕ ಇರಾನ್‌ನ ಇಸ್ಫಹಾನ್, ಕರಾಜ್, ತಬ್ರೀಜ್ ಹಾಗೂ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಟೆಹ್ರಾನ್‌ನ ಪಶ್ಚಿಮ ಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆದರೆ, ದಾಳಿಯಿಂದ ಉಂಟಾದ ಹಾನಿ ಅಥವಾ ಸಾವುನೋವುಗಳ ಬಗ್ಗೆ ಇರಾನ್ ಅಧಿಕಾರಿಗಳು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಇರಾನ್‌ನ ರೆವಲ್ಯೂಷನರಿ ಗಾರ್ಡ್, ಇಸ್ರೇಲ್ ಈ ದಾಳಿಯಲ್ಲಿ ವಾಯುಮಾರ್ಗದಿಂದ ಉಡಾಯಿಸುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದೆ ಎಂದು ಆರೋಪಿಸಿದೆ. ಆದರೆ, ದಾಳಿಯ ಪ್ರಮಾಣ ಮತ್ತು ಗುರಿಗಳ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

Donald Trump, Benjamin Netanyahu
ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರ ಬಂದ್; ‘ಪ್ರತಿದಾಳಿ ಬೇಡ’- ನೆತನ್ಯಾಹುಗೆ ಟ್ರಂಪ್ ಖಡಕ್ ಸಂದೇಶ

ಈ ಬೆಳವಣಿಗೆಗೆ ಮುನ್ನ ಭಾನುವಾರ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟೆಹ್ರಾನ್ ಹೇಳಿತ್ತು. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಬಹುತೇಕ ಕ್ಷಿಪಣಿಗಳನ್ನು ತಡೆದಿದ್ದರೂ, ಈ ದಾಳಿ ಕದನ ವಿರಾಮದ ಬಳಿಕದ ಅತ್ಯಂತ ಗಂಭೀರ ಬೆಳವಣಿಗೆಯಾಗಿ ಪರಿಗಣಿಸಲ್ಪಟ್ಟಿತ್ತು.

ಇರಾನ್ ದಾಳಿಯ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ನೇರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕರೆ ಮಾಡಿ ತಕ್ಷಣದ ಪ್ರತಿದಾಳಿ ನಡೆಸದಂತೆ ಮನವಿ ಮಾಡಿದ್ದರು.

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ನಿರ್ಣಾಯಕ ಹಂತದಲ್ಲಿದ್ದು, ಹೊಸ ಸೇನಾ ಕ್ರಮಗಳು ಮಾತುಕತೆಗಳನ್ನು ವಿಫಲಗೊಳಿಸಬಹುದು ಎಂದು ಅವರು ಎಚ್ಚರಿಸಿದ್ದರು. “ಇರಾನ್ ತನ್ನ ಕ್ಷಿಪಣಿಗಳನ್ನು ಹಾರಿಸಿದೆ, ಈಗ ಮತ್ತೊಂದು ದಾಳಿ ಅಗತ್ಯವಿಲ್ಲ” ಎಂದು ಟ್ರಂಪ್ ಹೇಳಿದ್ದರು.

ಅಮೆರಿಕದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಟ್ರಂಪ್ ದೂರವಾಣಿ ಸಂಭಾಷಣೆಯಲ್ಲಿ ನೆತನ್ಯಾಹು ಅವರನ್ನು ಸ್ವಲ್ಪ ಸಮಯದ ಮಟ್ಟಿಗೆ ತಾಳ್ಮೆ ವಹಿಸುವಂತೆ ಮನವೊಲಿಸಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಇಸ್ರೇಲ್ ದಾಳಿ ನಡೆಸಿರುವುದು ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಇದರ ನಡುವೆ ಸೌದಿ ಅರೇಬಿಯಾದ ಅಲ್ ಖರ್ಜ್ ಪ್ರದೇಶದಲ್ಲಿ ಕ್ಷಿಪಣಿ ಅಪಾಯದ ಎಚ್ಚರಿಕೆ ಸೈರನ್‌ಗಳು ಮೊಳಗಿದ್ದು, ಪ್ರಾದೇಶಿಕ ಭದ್ರತಾ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಈ ಪ್ರದೇಶದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯಲ್ಲಿ ಅಮೆರಿಕ ಸೇನಾ ಪಡೆಗಳು ನೆಲೆಸಿವೆ. ಬಳಿಕ ಅಪಾಯ ದೂರವಾಗಿದೆ ಎಂದು ಸೌದಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ಸ್ಥಗಿತಗೊಂಡಿದ್ದವು. ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಘರ್ಷಣೆಗಳು ಹಾಗೂ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಸೇನಾ ಚಟುವಟಿಕೆಗಳು ಮಾತುಕತೆಗಳಿಗೆ ಅಡ್ಡಿಯಾಗಿದ್ದವು. ಈಗ ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ದಾಳಿಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ.

ಇರಾನ್‌ನ ಕ್ಷಿಪಣಿ ದಾಳಿ, ಇಸ್ರೇಲ್‌ನ ಪ್ರತಿದಾಳಿ, ಟೆಹ್ರಾನ್ ವಾಯುಪ್ರದೇಶ ಬಂದ್ ಮತ್ತು ಶಾಂತಿ ಮಾತುಕತೆಗಳ ಅನಿಶ್ಚಿತತೆಯ ನಡುವೆ ಮಧ್ಯಪ್ರಾಚ್ಯ ಮತ್ತೊಮ್ಮೆ ಸ್ಫೋಟಕ ಸ್ಥಿತಿಗೆ ತಲುಪಿದೆ.

ಮುಂದಿನ ಕೆಲ ದಿನಗಳಲ್ಲಿ ಎರಡೂ ರಾಷ್ಟ್ರಗಳು ಯಾವ ನಿರ್ಧಾರ ಕೈಗೊಳ್ಳುತ್ತವೆ ಎಂಬುದರ ಮೇಲೆ ಪ್ರದೇಶದ ಭದ್ರತೆ ಮತ್ತು ಶಾಂತಿಯ ಭವಿಷ್ಯ ನಿರ್ಧಾರವಾಗಲಿದೆ.

ಮತ್ತೆ ಪ್ರತಿದಾಳಿಗಳು ಮುಂದುವರಿದರೆ ಕದನ ವಿರಾಮ ಸಂಪೂರ್ಣ ಕುಸಿದು, ಸಂಘರ್ಷ ಮತ್ತೆ ವ್ಯಾಪಕ ಪ್ರಾದೇಶಿಕ ಯುದ್ಧವಾಗಿ ಮಾರ್ಪಡುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com