

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರ ತಾಯಿ ಮೊಹಿನಿ ಮಣಿ ಅವರು 89ನೇ ವಯಸ್ಸಿನಲ್ಲಿ ನಿಧನರಾದ ಹಿನ್ನೆಲೆಯಲ್ಲಿ, ನಟ ಹಾಗೂ ತಮಿಳುನಾಡು ಸಿಎಂ ಜೋಸೆಫ್ ವಿಜಯ್ (CM Vijay) ಹಾಗೂ ನಟಿ Trisha Krishnan ಸೇರಿದಂತೆ ಹಲವು ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು.
ದುಬೈನಲ್ಲಿ ಇದ್ದ ಅಜಿತ್ ಕುಮಾರ್ ಅವರು ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಶನಿವಾರ ಚೆನ್ನೈಗೆ ಮರಳಿದರು. ಕುಟುಂಬದವರು ದುಃಖದಲ್ಲಿ ಮುಳುಗಿದ್ದ ವೇಳೆ, ಚಿತ್ರರಂಗ ಮತ್ತು ರಾಜಕೀಯ ವಲಯದ ಅನೇಕ ಪ್ರಮುಖರು ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಸಂತಾಪ ಸೂಚಿಸಿದವರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ಕೂಡ ಸೇರಿದ್ದಾರೆ. ಅಜಿತ್ ಅವರ ನಿವಾಸಕ್ಕೆ ಬಂದ ನಟ ವಿಜಯ್ ಅಜಿತ್ ರನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ, ಬಿಗಿ ಭದ್ರತೆಯ ನಡುವೆ ವಿಜಯ್ ಅಜಿತ್ ಅವರ ನಿವಾಸಕ್ಕೆ ಆಗಮಿಸಿರುವುದು ಕಂಡುಬಂದಿದೆ.
ಮಗುವಿನಂತೆ ಅತ್ತ ಅಜಿತ್
ಇನ್ನು ಒಂದು ವಿಡಿಯೊದಲ್ಲಿ ವಿಜಯ್ ಅವರು ಅಜಿತ್ ಅವರನ್ನು ಭೇಟಿ ಮಾಡಿ ಅಪ್ಪಿಕೊಂಡು ಧೈರ್ಯ ತುಂಬುತ್ತಿರುವ ದೃಶ್ಯಗಳು ಕಂಡುಬಂದಿವೆ. ಈ ವೇಳೆ ಅಜಿತ್ ನಟ ವಿಜಯ್ ರನ್ನು ತಬ್ಬಿಕೊಂಡು ಅತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಬಳಿಕ ಅವರು ಮನೆಯೊಳಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಟಿ ತ್ರಿಷಾ ಕೃಷ್ಣನ್ ಕೂಡ ಅಜಿತ್ ಅವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.
ಅನಾರೋಗ್ಯಕ್ಕೆ ತುತ್ತಾಗಿದ್ದ ಮೋಹಿನಿಮಣೆ
ಇನ್ನು ಅಜಿತ್ ಅವರ ತಾಯಿ ಮೊಹಿನಿ ಮಣಿ ಅವರು ಶನಿವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾದರು. ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ನಿದ್ರೆಯಲ್ಲಿಯೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ದುಃಖದ ಸುದ್ದಿಯನ್ನು ಹಂಚಿಕೊಂಡ ಅಜಿತ್ ಕುಮಾರ್ ಅವರ ಕುಟುಂಬವು ಪ್ರಕಟಣೆ ಹೊರಡಿಸಿದ್ದು, "ನಮ್ಮ ತಾಯಿ ಮೊಹಿನಿ ಮಣಿ ಅವರು ಕಳೆದ ಕೆಲವು ಸಮಯದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇಂದು ಮುಂಜಾನೆ ನಿದ್ರೆಯಲ್ಲಿಯೇ ಅವರು ವಿಧಿವಶರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಆರೈಕೆ ಹಾಗೂ ಬೆಂಬಲ ನೀಡಿದ ವೈದ್ಯಕೀಯ ವೃತ್ತಿಪರರಿಗೆ ನಾವು ಕೃತಜ್ಞರಾಗಿದ್ದೇವೆ" ಎಂದು ತಿಳಿಸಿದೆ.
ಖಾಸಗಿತನ ಕಾಪಾಡಿ
ಅಂತೆಯೇ ಕುಟುಂಬವು ಈ ದುಃಖದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದು, ಅಂತ್ಯಕ್ರಿಯೆಯನ್ನು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಖಾಸಗಿಯಾಗಿ ನೆರವೇರಿಸಲಾಗುವುದು ಎಂದು ತಿಳಿಸಿದೆ.
"ತಾಯಿಯ ಅಂತಿಮ ವಿಧಿವಿಧಾನಗಳು ಕುಟುಂಬದವರ ಮಧ್ಯೆಯೇ ಖಾಸಗಿಯಾಗಿ ನಡೆಯಲಿವೆ. ಪೋಷಕರು ಅಥವಾ ಪ್ರೀತಿಪಾತ್ರ ಹಿರಿಯರನ್ನು ಕಳೆದುಕೊಂಡ ನೋವನ್ನು ಅನುಭವಿಸಿದ ಪ್ರತಿಯೊಬ್ಬರೂ ನಮ್ಮ ದುಃಖವನ್ನು ಮೌನವಾಗಿ ಅನುಭವಿಸಲು ಅವಕಾಶ ನೀಡುತ್ತಾರೆ ಎಂದು ನಾವು ನಂಬಿದ್ದೇವೆ. ಅವರು ಜೀವನಪೂರ್ತಿ ನಮಗೆ ತೋರಿದ ಸಮಚಿತ್ತತೆ, ಘನತೆ ಮತ್ತು ಮೃದು ಶಕ್ತಿಯೊಂದಿಗೆ ಅವರ ನೆನಪನ್ನು ಗೌರವಿಸುತ್ತೇವೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement