

ಹೈದರಾಬಾದ್: ತೆಲಂಗಾಣದ ಮಹಬೂಬ್ನಗರ ಜಿಲ್ಲೆಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ 26 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಅತ್ತೆಮಾವನ ಮನೆಯವರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮಹಿಳೆಯನ್ನು ಮಾರಕಾಸ್ತ್ರಗಳಿಂದ ಕೊಂದು, ಬಳಿಕ ಶಿರಚ್ಛೇದ ಮಾಡಿರುವ ಘಟನೆ ಚಿಂತಲ್ ತಾಂಡಾ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ. ಮೃತ ಮಹಿಳೆಯನ್ನು ಕಟ್ರಾವತ್ ಸುನೀತಾ (26) ಎಂದು ಗುರುತಿಸಲಾಗಿದೆ.
ಆಕೆಯ ಹೆಸರಿನಲ್ಲಿದ್ದ ಕೃಷಿ ಜಮೀನಿನ ವಿಚಾರವಾಗಿ ಕುಟುಂಬದಲ್ಲಿ ವಿವಾದ ಉಂಟಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸುನೀತಾ ಸುಮಾರು 10 ವರ್ಷಗಳ ಹಿಂದೆ ಚಿಂತಲ್ ತಾಂಡಾ ಗ್ರಾಮದ ಕಟ್ರಾವತ್ ಬಲರಾಮ್ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗೆ ರಿಷಿಕಾ ಮತ್ತು ಶೈಲಜಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಲರಾಮ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಸುಮಾರು ಒಂದು ವರ್ಷದ ಹಿಂದೆ ಬಲರಾಮ್ ಅವರ ಹಿರಿಯ ಸಹೋದರರಾದ ಮಾನ್ಯ ನಾಯಕ್ ಮತ್ತು ಪಾಂಡು ನಾಯಕ್, ಅವರನ್ನು ಹೈದರಾಬಾದ್ಗೆ ಕರೆದೊಯ್ದಿದ್ದರು. ಈ ವೇಳೆ ಗ್ರಾಮದ ಹಿರಿಯರು ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸಿದ್ದರು. ಬಲರಾಮ್ ಅವರಿಗೆ ಸೇರಿದ ಸುಮಾರು 1.5 ಎಕರೆ ಕೃಷಿ ಜಮೀನನ್ನು ಸುನೀತಾ ಹೆಸರಿಗೆ ನೋಂದಣಿ ಮಾಡಿಸಲಾಗಿತ್ತು. ಆಕೆಯ ಭವಿಷ್ಯದ ಭದ್ರತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ.
ಇದಾದ ಬಳಿಕ ಸುನೀತಾ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ತೆರಳಿ ವಾಸವಿದ್ದರು. ಇತ್ತೀಚೆಗೆ ಚಿಂತಲ್ ತಾಂಡಾಕ್ಕೆ ಮರಳಿದ್ದ ಅವರು, ತಮ್ಮ ಹೆಸರಿನಲ್ಲಿದ್ದ ಕೃಷಿ ಜಮೀನಿನ ಬಳಿ ಹೋಗಿದ್ದರು. ಈ ವೇಳೆ ಮಾನ್ಯ ನಾಯಕ್ ಆಕೆಯನ್ನು ತಡೆದು ತನ್ನ ಮನೆಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಅಲ್ಲಿ ಪಾಂಡು ನಾಯಕ್, ಆತನ ಪತ್ನಿ ಪಾರ್ವತಿ ಮತ್ತು ಮತ್ತೊಬ್ಬ ಸಂಬಂಧಿ ಮಾಣಿಕ್ಯ ನಾಯಕ್ ಸೇರಿಕೊಂಡು ಸುನೀತಾ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಆಕೆ ಮೃತಪಟ್ಟಿದ್ದು, ಆರೋಪಿಗಳು ಶಿರಚ್ಛೇದ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀತಾ ಅವರ ತಂದೆ ವಲ್ಯ ನಾಯಕ್ ನೀಡಿದ ದೂರಿನ ಮೇರೆಗೆ ಕೊಯಿಲ್ಕೊಂಡ ಪೊಲೀಸರು ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾನ್ಯ ನಾಯಕ್, ಪಾಂಡು ನಾಯಕ್, ಪಾರ್ವತಿ ಮತ್ತು ಮಾಣಿಕ್ಯ ನಾಯಕ್ ಆರೋಪಿಗಳಾಗಿದ್ದಾರೆ.
ಕೊಯಿಲ್ಕೊಂಡ ವೃತ್ತ ನಿರೀಕ್ಷಕ ಗಾಂಧಿ ನಾಯಕ್ ಮತ್ತು ಸಬ್ಇನ್ಸ್ಪೆಕ್ಟರ್ ನಾಗರಾಜು ಪ್ರಾಥಮಿಕ ತನಿಖೆಯಲ್ಲಿ ಜಮೀನು ವಿವಾದವೇ ಕೊಲೆಗೆ ಕಾರಣವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.