

ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದೇಶದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲು ಮತ್ತು ಕಪ್ಪುಹಣಕ್ಕೆ ಕಡಿವಾಣ ಹಾಕಲು ₹500 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದ್ದಾರೆ. ದೇಶದಲ್ಲಿ ನಗದು ಚಲಾವಣೆಗೆ ಕೇವಲ ₹100 ಮತ್ತು ₹200 ಮುಖಬೆಲೆಯ ನೋಟುಗಳಿದ್ದರೆ ಸಾಕು ಎಂಬ ಪ್ರಸ್ತಾವನೆಯನ್ನು ಅವರು ಮುಂದಿಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ದೇಶದಲ್ಲಿ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಾದರೆ 1,000 ಮತ್ತು 2,000 ರೂ. ನೋಟುಗಳ ಜೊತೆಗೆ ಪ್ರಸ್ತುತ ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ವರಿಷ್ಠ ಎನ್. ಚಂದ್ರಬಾಬು ನಾಯ್ಡು ಅವರು ನೇರವಾಗಿ ಆಗ್ರಹಿಸಿದ್ದಾರೆ. ಜೊತೆಗೆ, ತಾವೇ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಡಿಜಿಟಲ್ ಕರೆನ್ಸಿ ಉತ್ತೇಜನದ ಕುರಿತು ವರದಿ ನೀಡಿದ್ದನ್ನು ನೆನಪಿಸಿದ ನಾಯ್ಡು, ದೊಡ್ಡ ನೋಟುಗಳ ನಿಷೇಧಕ್ಕಾಗಿ ತಾವು ಪ್ರಧಾನಿ ಮೋದಿಯವರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಲೇ ಇರುವುದಾಗಿ ತಿಳಿಸಿದ್ದಾರೆ.
ಕೇವಲ ₹100 ಮತ್ತು ₹200 ನೋಟುಗಳು ಸಾಕು
ಅಮರಾವತಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ, ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳ ಕುರಿತು ಮಾತನಾಡಿದ ನಾಯ್ಡು ಅವರು, "ರಾಜಕೀಯದಲ್ಲಿ ಹಣದ ಪ್ರಭಾವ ತಗ್ಗಬೇಕು. ₹500 ನೋಟು ರದ್ದಾದರೆ ಚುನಾವಣೆಗಳಲ್ಲಿ ಅಕ್ರಮವಾಗಿ ನಗದು ಹಂಚುವುದನ್ನು ತಡೆಯಬಹುದು. ಜನಪ್ರತಿನಿಧಿಗಳಿಗೆ ಸೇವಾಭಾವವೇ ಮುಖ್ಯ ಗುರಿಯಾಗಬೇಕು" ಎಂದರು. ಇದರೊಂದಿಗೆ, ಮಾರುಕಟ್ಟೆಯಲ್ಲಿ ನಗದು ವ್ಯವಹಾರಕ್ಕೆ ಕೇವಲ ₹100 ಮತ್ತು ₹200 ಮುಖಬೆಲೆಯ ನೋಟುಗಳು ಮಾತ್ರ ಇರಬೇಕು. ಉಳಿದಂತೆ ಇಡೀ ದೇಶವು ಡಿಜಿಟಲ್ ಕರೆನ್ಸಿ ಮತ್ತು ಆನ್‌ಲೈನ್ ವಹಿವಾಟಿಗೆ ಬದಲಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
28ರ ಪೈಕಿ 27ರಲ್ಲಿ ಮೈತ್ರಿಕೂಟದ ಪ್ರಾಬಲ್ಯ
ಒಟ್ಟು 28 ಜಿಲ್ಲೆಗಳಲ್ಲಿ ಅಲ್ಲೂರಿ ಜಿಲ್ಲೆಯನ್ನು ಹೊರತುಪಡಿಸಿ ಉಳಿದ 27 ಜಿಲ್ಲೆಗಳಲ್ಲಿ ಮೈತ್ರಿಕೂಟದ ಪ್ರಾಬಲ್ಯ ಮುಂದುವರೆದಿದೆ ಎಂದ ಸಿಎಂ ಚಂದ್ರಬಾಬು ನಾಯ್ಡು, ಏಳು ಜಿಲ್ಲೆಗಳಲ್ಲಿ ವೈಎಸ್‌ಆರ್‌ಸಿಪಿ ಒಂದೇ ಒಂದು ಜೆಡ್‌ಪಿಟಿಸಿ ಸ್ಥಾನವನ್ನು ಕೂಡ ಗೆಲ್ಲಲು ಸಾಧ್ಯವಾಗಿಲ್ಲ ಮತ್ತು ಎಂಪಿಟಿಸಿ ಸ್ಥಾನಗಳಲ್ಲಿ ಶೇಕಡಾ 90ಕ್ಕೂ ಅಧಿಕ ಜಯ ಸಾಧಿಸಲಾಗಿದೆ. ಅನಕಾಪಲ್ಲಿ, ಕೋನಸೀಮೆ, ಕಾಕಿನಾಡ, ಪಲ್ನಾಡು, ಪಶ್ಚಿಮ ಗೋದಾವರಿ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿ ವೈಎಸ್‌ಆರ್‌ಸಿಪಿಗೆ ಜನರ ಬೆಂಬಲ ಸಿಕ್ಕಿಲ್ಲ. ಇವಿಎಂ, ಬ್ಯಾಲೆಟ್ ಅಥವಾ ಪೋಸ್ಟಲ್ ಬ್ಯಾಲೆಟ್ ಯಾವುದೇ ವಿಧಾನದಲ್ಲಿ ಚುನಾವಣೆ ನಡೆದರೂ ಜನರು ಮೈತ್ರಿಕೂಟಕ್ಕೇ ಬೆಂಬಲ ನೀಡಿದ್ದಾರೆ ಎಂದರು.