ಪವನ್ ಕಲ್ಯಾಣ್‌ ವಿಚ್ಚೇದನ: ಘೋಷಣೆಗೂ ತಿಂಗಳ ಹಿಂದಷ್ಟೇ ಹೆಸರು ಬದಲಿಸಿಕೊಂಡಿದ್ದ ಅನ್ನಾ, ಕೊನಿಡೆಲಾ ಮನೆತನದ ಹೆಸರು ಸೇರ್ಪಡೆ!

ಪವನ್ ಕಲ್ಯಾಣ್ ಅವರನ್ನು ಮದುವೆಯಾದ ಬಳಿಕ ತಮ್ಮ ಹೆಸರಿನ ಜೊತೆ ಪತಿಯ ಕುಟುಂಬದ ಹೆಸರನ್ನು ಸೇರಿಸಿಕೊಂಡಿದ್ದೇಕೆ ಎಂಬುದನ್ನು ಅನ್ನಾ ಈ ಪೋಸ್ಟ್‌ನಲ್ಲಿ ವಿವರಿಸಿದ್ದರು.
Anna Konidala revealed why she took Pawan Kalyans surname
ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜೆನೋವಾ
Updated on: 

ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡೆಲಾ 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಅನ್ನಾ ಅವರು ಕೆಲ ತಿಂಗಳ ಹಿಂದಷ್ಟೇ ತಮ್ಮ ಹೆಸರಿನ ಬಗ್ಗೆ ಹಂಚಿಕೊಂಡಿದ್ದ ಹಳೆಯ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಮತ್ತೆ ಚರ್ಚೆಗೆ ಬಂದಿದೆ.

ಪವನ್ ಕಲ್ಯಾಣ್ ಅವರನ್ನು ಮದುವೆಯಾದ ಬಳಿಕ ತಮ್ಮ ಹೆಸರಿನ ಜೊತೆ ಪತಿಯ ಕುಟುಂಬದ ಹೆಸರನ್ನು ಸೇರಿಸಿಕೊಂಡಿದ್ದೇಕೆ ಎಂಬುದನ್ನು ಅನ್ನಾ ಈ ಪೋಸ್ಟ್‌ನಲ್ಲಿ ವಿವರಿಸಿದ್ದರು.

ಅನ್ನಾ ಲೆಜಿನೋವಾ ಎಂದೇ ಬಹುತೇಕ ಜನರಿಗೆ ಪರಿಚಿತರಾಗಿರುವ ಅವರು, ತಮ್ಮನ್ನು ಇನ್ನು ಮುಂದೆ 'ಅನ್ನಾ ಕೊನಿಡೆಲಾ' ಎಂದೇ ಕರೆಯುವಂತೆ ಮನವಿ ಮಾಡಿದ್ದರು. 2013ರಲ್ಲಿ ಪವನ್ ಕಲ್ಯಾಣ್ ಅವರನ್ನು ಮದುವೆಯಾದ ದಿನದಿಂದ ತಮ್ಮ ಅಧಿಕೃತ ಹೆಸರು ಅನ್ನಾ ಕೊನಿಡೆಲಾ ಆಗಿದೆ ಎಂದು ತಿಳಿಸಿದ್ದರು.

Anna Konidala revealed why she took Pawan Kalyans surname
'ಗಂಡು ಎಷ್ಟು ಮದುವೆಯಾದರೂ ತಪ್ಪಿಲ್ಲ, ಹೆಣ್ಣು ಮರುಮದುವೆಯಾಗಬಾರದಾ?': ಟ್ರೋಲಿಗರಿಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಖಡಕ್ ತಿರುಗೇಟು!

'ಅನ್ನಾ ಕೊನಿಡೆಲಾ ಎಂದೇ ಕರೆಯಿರಿ'

ಪವನ್ ಕಲ್ಯಾಣ್ ಜೊತೆಗಿನ ಆರಂಭಿಕ ಪ್ರವಾಸವೊಂದರ ಫೋಟೋವನ್ನು ಹಂಚಿಕೊಂಡಿದ್ದ ಅನ್ನಾ, ತಮ್ಮ ಹೆಸರಿನ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದರು.

"ಒಬ್ಬ ವ್ಯಕ್ತಿಯ ಹೆಸರು ಬಹಳ ವೈಯಕ್ತಿಕವಾದದ್ದು. ನನ್ನ ಜನ್ಮದಿನ ಹತ್ತಿರ ಬರುತ್ತಿರುವುದರಿಂದ ಈ ವಿಷಯವನ್ನು ಹೇಳಲು ಇದೇ ಸರಿಯಾದ ಸಮಯ ಎಂದು ಅನಿಸುತ್ತಿದೆ. ನಾನು ಇನ್‌ಸ್ಟಾಗ್ರಾಂ ಖಾತೆ ಆರಂಭಿಸಿದಾಗಿನಿಂದ ಈ ವಿಚಾರವನ್ನು ಹೇಳಬೇಕೆಂದುಕೊಂಡಿದ್ದೆ. ಆದರೆ ಹೇಗೆ ಹೇಳಬೇಕು ಎಂಬುದು ತಿಳಿಯದೆ ಹಲವು ಬಾರಿ ಬರೆದು ಅಳಿಸಿದ್ದೆ" ಎಂದು ತಿಳಿಸಿದ್ದರು.

"ನಮ್ಮ ಮದುವೆಯ ಸುದ್ದಿ ಹೊರಬಂದಾಗ ಬಹುತೇಕ ಜನರು ನನ್ನನ್ನು ಅನ್ನಾ ಲೆಜಿನೋವಾ ಎಂದೇ ಗುರುತಿಸಿದ್ದರು. ಆದರೆ ಆ ಹೆಸರು ನನ್ನ ಮದುವೆಗೂ ಮುನ್ನ ಇದ್ದ ಕೊನೆಯ ಅಧಿಕೃತ ದಾಖಲೆಯಲ್ಲಿ ಮಾತ್ರ ಇತ್ತು.

ಪವನ್ ಅವರನ್ನು ಮದುವೆಯಾದ ದಿನ ನಾನು ಅವರ ಕುಟುಂಬದ ಹೆಸರನ್ನು ಸ್ವೀಕರಿಸಿ ಅನ್ನಾ ಕೊನಿಡೆಲಾ ಆದೆ. ಹಾಗಾಗಿ ದಯವಿಟ್ಟು ನನ್ನನ್ನು ಅನ್ನಾ ಕೊನಿಡೆಲಾ ಎಂದೇ ಕರೆಯಿರಿ. ಆ ಹೆಸರಿನಲ್ಲಿಯೇ ನನಗೆ ನನ್ನತನ ಕಾಣಿಸುತ್ತದೆ" ಎಂದು ಬರೆದುಕೊಂಡಿದ್ದರು.

ಈ ಮೂಲಕ ಕೊನಿಡೆಲಾ ಎಂಬ ಕುಟುಂಬದ ಹೆಸರಿನೊಂದಿಗೆ ತಮಗೆ ವಿಶೇಷ ಭಾವನಾತ್ಮಕ ಸಂಬಂಧವಿದೆ ಎಂಬುದನ್ನು ಅವರು ವ್ಯಕ್ತಪಡಿಸಿದ್ದರು. ಸದ್ಯ ಈ ಇನ್‌ಸ್ಟಾಗ್ರಾಂ ಖಾತೆ ನಿಷ್ಕ್ರಿಯಗೊಂಡಿದೆ ಎಂದು ವರದಿಯಾಗಿದೆ.

Anna Konidala revealed why she took Pawan Kalyans surname
ಅನ್ನಾ ಲೆಜೆನೋವಾ ಪೋಸ್ಟ್

ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧಾರ

ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡೆಲಾ ಮಂಗಳವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

"ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ ನಾವು ಉತ್ತಮ ಸ್ನೇಹಿತರಾಗಿ ಮತ್ತು ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಮೊದಲ ಆದ್ಯತೆಯಾಗಿರಲಿದೆ" ಎಂದು ಹೇಳಿದ್ದಾರೆ.

ಈ ವೈಯಕ್ತಿಕ ವಿಚಾರದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಈವರೆಗೆ ತಮ್ಮೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X