ಭಾರಿ ರಿಯಾಯಿತಿ ದರದಲ್ಲಿ ಸಿಸಿಟಿವಿಗಳನ್ನು ಪಡೆಯಲು PMO ಅಧಿಕಾರಿಯಂತೆ ನಟಿಸಿದ ವ್ಯಕ್ತಿ; FIR ದಾಖಲಿಸಿದ CBI!

ಆರೋಪಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ 'ಜಂಟಿ ಕಾರ್ಯದರ್ಶಿ' ಹುದ್ದೆಯಲ್ಲಿದ್ದೇನೆ ಎಂದು ಸುಳ್ಳು ಹೇಳಿಕೊಂಡು, ಆ ಹುದ್ದೆಯ ಪ್ರಭಾವ ಬಳಸಿಕೊಂಡು ಸಿಸಿಟಿವಿ ಕಂಪನಿಯೊಂದರ ಮೇಲೆ ಒತ್ತಡ ಹೇರಿದ್ದಾನೆಂದು ಆರೋಪಿಸಲಾಗಿದೆ.
Representative Image
ಪ್ರಾತಿನಿಧಿಕ ಚಿತ್ರ
Updated on: 

ನವದೆಹಲಿ: ಪ್ರಧಾನ ಮಂತ್ರಿ ಕಾರ್ಯಾಲಯದ (PMO) ಹಿರಿಯ ಅಧಿಕಾರಿಯೊಬ್ಬರಂತೆ ನಟಿಸಿ, ಸಿಸಿಟಿವಿ (CCTV) ಕಂಪನಿಯೊಂದರ ಮೇಲೆ ಒತ್ತಡ ಹೇರಿ, ಅತ್ಯಂತ ಕಡಿಮೆ ದರದಲ್ಲಿ ಉಪಕರಣಗಳು ಮತ್ತು ಸೇವೆಗಳನ್ನು ಪಡೆಯುವಂತೆ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕಾರ್ಯಾಲಯವು ನೀಡಿದ ದೂರಿನ ಆಧಾರದ ಮೇಲೆ, ಮನೀಶ್ ಕುಮಾರ್ (ಈತನನ್ನು ಮನೀಶ್ ಕುಮಾರ್ ಗುಪ್ತಾ ಎಂದೂ ಕರೆಯಲಾಗುತ್ತದೆ) ಎಂಬಾತನ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಆರೋಪಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ 'ಜಂಟಿ ಕಾರ್ಯದರ್ಶಿ' ಹುದ್ದೆಯಲ್ಲಿದ್ದೇನೆ ಎಂದು ಸುಳ್ಳು ಹೇಳಿಕೊಂಡು, ಆ ಹುದ್ದೆಯ ಪ್ರಭಾವ ಬಳಸಿಕೊಂಡು ಸಿಸಿಟಿವಿ ಕಂಪನಿಯೊಂದರ ಮೇಲೆ ಒತ್ತಡ ಹೇರಿದ್ದಾನೆಂದು ಆರೋಪಿಸಲಾಗಿದೆ.

ತಾನು ಪಿಎಂಒ ದಲ್ಲಿ ಜಂಟಿ ಕಾರ್ಯದರ್ಶಿ (ಆಡಳಿತ) ಎಂದು ಪರಿಚಯಿಸಿಕೊಂಡು, ವಾಟ್ಸಾಪ್ ಮೂಲಕ 'ಸಿಪಿ ಪ್ಲಸ್' (CP Plus) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಖೇಮ್ಕಾ ಅವರನ್ನು ಸಂಪರ್ಕಿಸಿದನೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ 'ಗೌರ್ ಗ್ರೀನ್ ಅವೆನ್ಯೂ'ನಲ್ಲಿರುವ ತನ್ನ ಪೋಷಕರ ನಿವಾಸದಲ್ಲಿ, ಒಳಾಂಗಣ ಮತ್ತು ಹೊರಾಂಗಣ ಸಿಸಿಟಿವಿ ಕಣ್ಗಾವಲು ಉಪಕರಣಗಳನ್ನು ಅಳವಡಿಸುವಂತೆ ಆತ ಕಂಪನಿಗೆ ಸೂಚಿಸಿದ್ದಾನೆ. ಆತ ತನ್ನ ಸಹೋದರ ಮುಕೇಶ್ ಕುಮಾರ್ ಗುಪ್ತಾ ಅವರ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ನೀಡಿದ್ದಾನೆ ಎಂದು ದೂರಲಾಗಿದೆ.

Representative Image
PMO ಹೆಸರಲ್ಲಿ 4 ಕೋಟಿ ರೂ ವಂಚನೆ; ನಕಲಿ ಅಧಿಕಾರಿ ವಿಜಯ್ ಗುಪ್ತಾ ಜಾಮೀನು ಅರ್ಜಿ ವಜಾ

ಎಫ್‌ಐಆರ್ ಪ್ರಕಾರ, ಮನೀಶ್ ಕುಮಾರ್ ಗುಪ್ತಾ ಅವರು 'ಸಿಪಿ ಪ್ಲಸ್' ಅಧಿಕಾರಿಗಳ ಮೇಲೆ ಒತ್ತಡ ಹೇರಿ, ತಕ್ಷಣವೇ ಸಿಸಿಟಿವಿ ಕ್ಯಾಮೆರಾಗಳನ್ನು ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಬೆಲೆಗೆ ಅಳವಡಿಸುವಂತೆ ಕೇಳಿಕೊಂಡಿದ್ದಾರೆ. ಕಂಪನಿ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ಕೇಳಿದಾಗ, ತನ್ನ ಸಹೋದರ ಐಎಎಸ್ ಅಧಿಕಾರಿಯಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಕಡ್ಡಾಯ "ಪ್ರೋಟೋಕಾಲ್" ಇದೆ. ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

'ಭಯದಿಂದಾಗಿ, ಸಿಪಿ ಪ್ಲಸ್ ಸಿಬ್ಬಂದಿ ಹಾಗೂ ಸಿಆರ್‌ಎಂ ವಿಭಾಗವು, ಸಂಬಂಧಪಟ್ಟ ವೆಂಡರ್ ಆದ ಅನುಪಮ್ ಕುಮಾರ್ ಗುಪ್ತಾ (M/s Secqua Technology) ಅವರಿಗೆ, ಸೈಟ್ ಸಮೀಕ್ಷೆಗೆ ಆದ್ಯತೆ ನೀಡುವಂತೆಯೂ ಮತ್ತು ಭಾರಿ ರಿಯಾಯಿತಿಯೊಂದಿಗೆ ಅಂದಾಜು ವೆಚ್ಚಗಳನ್ನು (estimates) ನೀಡುವಂತೆಯೂ ಸೂಚಿಸಿವೆ' ಎಂದು ತಿಳಿಸಲಾಗಿದೆ.

ವೆಚ್ಚವನ್ನು ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ವೆಂಡರ್ ತಿಳಿಸಿದಾಗ, ಈ ವಿಷಯವನ್ನು ನೇರವಾಗಿ ಸಿಪಿ ಪ್ಲಸ್‌ನ ಮಾಲೀಕರ ಗಮನಕ್ಕೆ ತರುವುದಾಗಿ ಗುಪ್ತಾ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ, ತೀವ್ರ ವಾಣಿಜ್ಯ ಒತ್ತಡ ಮತ್ತು ಕಿರುಕುಳಕ್ಕೆ ಒಳಗಾದ ವೆಂಡರ್ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಮನೀಶ್ ಕುಮಾರ್ ಎಂಬ ಹೆಸರಿನ ಯಾವುದೇ ಅಧಿಕಾರಿ ಪಿಎಂಒ (PMO) ದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಅಥವಾ ಬೇರೆ ಯಾವುದೇ ಅಧಿಕೃತ ಹುದ್ದೆಯಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸಿಲ್ಲ ಎಂಬುದನ್ನು ಪಿಎಂಒ ಸಂಸ್ಥೆಯು ಖಚಿತಪಡಿಸಿದೆ ಎಂದು ಅದರಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X