

ಪಶ್ಚಿಮ ಚಂಪಾರಣ್: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಸೆನ್ಕೋ ಗೋಲ್ಡ್ ಮತ್ತು ಡೈಮಂಡ್ ಶೋ ರೂಂಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು ಹಾಡಹಗಲೇ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಚಂಪಾರಣ್‌ನ ಬೆಟ್ಟಿಯಾದಲ್ಲಿರುವ ಶೋ ರೂಂಗೆ ನುಗ್ಗಿದ ಎಂಟು ದರೋಡೆಕೋರರು, ಗನ್ ತೋರಿಸಿ ಎಲ್ಲಾ ಸಿಬ್ಬಂದಿಯ ಕೈಗಳನ್ನು ಕಟ್ಟಿಹಾಕಿ, ಅವರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು, ಚಿನ್ನ ಹಾಗೂ ವಜ್ರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದರೋಡೆಯ ಸಮಯದಲ್ಲಿ ಇಬ್ಬರು ಸಿಬ್ಬಂದಿ ತಲೆಗೆ ಪೆಟ್ಟು ಬಿದ್ದಿದೆ. ದರೋಡೆಕೋರರು ಅಲ್ಲಿಂದ ಹೊರಡುವಾಗ, "ನಾವು ಮತ್ತೆ ಬರುತ್ತೇವೆ; ಇದೊಂದು ಸಿನಿಮಾ" ಎಂದು ದರೋಡೆಕೋರರು ಹೇಳಿರುವುದಾಗಿ ಶೋರೂಮ್‌ನಲ್ಲಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ.
ಕಾಳಿಭಾಗ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಜನನಿಬಿಡ ರಸ್ತೆಯಲ್ಲಿರುವ ಶೋ ರೂಂನಲ್ಲಿ ಹಗಲೇ ಈ ದರೋಡೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದು ಇದ್ದಕ್ಕಿದ್ದಂತೆ ಶೋ ರೂಂ ಒಳಗೆ ನುಗ್ಗಿದ 8 ಮಂದಿ ಗನ್ ತೋರಿಸಿ ಸಿಬ್ಬಂದಿಯನ್ನು ತಡೆದು ಬ್ಯಾಗಿಗೆ ಆಭರಣ ತುಂಬಿಸಿಕೊಂಡು ಹೊರಟು ಹೋಗಿದ್ದಾರೆ. ಸದ್ಯ ಈ ದರೋಡೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಮಾಹಿತಿ ಪಡೆದ ತಕ್ಷಣ ಡಿಐಜಿ ಹರಕಿಶೋರ್ ರೈ, ಎಸ್ಪಿ ಕುಮಾರ್ ಗೌತಮ್, ಡಿಎಸ್ಪಿ ಅಜಿತ್ ಕುಮಾರ್ ಸೇರಿದಂತೆ ಹಲವು ಠಾಣೆಗಳ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದರು.
ಆರಂಭಿಕ ವರದಿಗಳ ಪ್ರಕಾರ, ದುಷ್ಕರ್ಮಿಗಳು 30 ರಿಂದ 40 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಆದಾಗ್ಯೂ, ಕಳುವಾದ ವಸ್ತುಗಳ ನಿಖರ ಮೌಲ್ಯ ಇನ್ನಷ್ಟೇ ಗೊತ್ತಾಗಬೇಕಿದೆ.
ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.