ಕ್ಷೇತ್ರ ಮರುವಿಂಗಡಣೆ ಮಸೂದೆ: ಶೇ. 50ರಷ್ಟು ಸೀಟುಗಳ ಹೆಚ್ಚಳದಿಂದ ದಕ್ಷಿಣ ಭಾರತಕ್ಕೆ'ದೊಡ್ಡ ಗೆಲುವು'- KTR ಬೆಂಬಲ

ಹೈದರಾಬಾದ್: ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯ ಪರಿಷ್ಕೃತ ಪ್ರಸ್ತಾವನೆಯನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (KTR) ಭಾನುವಾರ ಸ್ವಾಗತಿಸಿದ್ದಾರೆ. ಲೋಕಸಭಾ ಸ್ಥಾನಗಳಲ್ಲಿ ಶೇ. 50ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಅವರು ಹೇಳಿದ್ದು, ತಮ್ಮ ಪಕ್ಷವು ಈ ಮಸೂದೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
'ಎಎನ್ಐ' (ANI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕೆಟಿಆರ್, ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯಿಂದ ಸಂಸತ್ತಿನಲ್ಲಿ ತಮ್ಮ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ದಕ್ಷಿಣ ರಾಜ್ಯಗಳ ಕಳವಳವನ್ನು ಕೇಂದ್ರ ಸರ್ಕಾರ ಅಂತಿಮವಾಗಿ ಒಪ್ಪಿಕೊಂಡಿದೆ. ದಕ್ಷಿಣ ರಾಜ್ಯಗಳು ನಿರಂತರವಾಗಿ ವ್ಯಕ್ತಪಡಿಸಿದ ವಿರೋಧ ಮತ್ತು ಬೇಡಿಕೆಗಳು, ಈ ವಿಷಯವನ್ನು ಪರಿಗಣಿಸಲು ಹಾಗೂ ಸಂಸದೀಯ ಪ್ರಾತಿನಿಧ್ಯದಲ್ಲಿ ದಕ್ಷಿಣ ರಾಜ್ಯಗಳ ಪಾಲನ್ನು ರಕ್ಷಿಸಲು ಅಗತ್ಯ ಭರವಸೆಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಪ್ರೇರೇಪಿಸಿವೆ ಎಂದು ಅವರು ತಿಳಿಸಿದರು.
"ದಕ್ಷಿಣ ಭಾರತಕ್ಕೆ ಅನ್ಯಾಯವಾಗಬಾರದು ಎಂದು ನಾವು ಬಲವಾಗಿ ಧ್ವನಿ ಎತ್ತಿದಾಗ, ಭಾರತ ಸರ್ಕಾರವು ಅಂತಿಮವಾಗಿ ನಮ್ಮ ಸಲಹೆಯನ್ನು ಆಲಿಸಿತು. ಈಗ ಸರ್ಕಾರವು ಸಂಸದೀಯ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವುದಾಗಿ ಹೇಳುತ್ತಿರುವುದು ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ ಎಂದು ಕೆಟಿಆರ್ ಹೇಳಿದರು.
ಈ ಪ್ರಸ್ತಾವನೆಯನ್ನು ದಕ್ಷಿಣ ಭಾರತಕ್ಕೆ ಸಿಕ್ಕ ಮಹತ್ವದ ಸಾಧನೆ ಎಂದು ಹೇಳಿದ ಬಿಆರ್ಎಸ್ ಕಾರ್ಯಾಧ್ಯಕ್ಷರು, ಇದು ದಕ್ಷಿಣ ಭಾರತದಾದ್ಯಂತ ಇರುವ ಜನರು ಹೆಮ್ಮೆಪಡುವಂತಹ ಬೆಳವಣಿಗೆಯಾಗಿದೆ ಎಂದರು. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ರಾಜ್ಯಗಳಿಗೆ ಶಿಕ್ಷೆ ನೀಡುವ ಬದಲು, ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವನ್ನು ಬಲಪಡಿಸುವುದೇ ಕ್ಷೇತ್ರ ಮರುವಿಂಗಡಣೆಯ ಉದ್ದೇಶವಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಈ ಪ್ರಸ್ತಾವಿತ ಸೂತ್ರವನ್ನು ವಿರೋಧಿಸುತ್ತಿರುವವರಿಗೆ ಸವಾಲು ಹಾಕಿದ ಕೆಟಿಆರ್, ದಕ್ಷಿಣ ರಾಜ್ಯಗಳ ಹಿತಾಸಕ್ತಿಗಳನ್ನು ಸಮರ್ಪಕವಾಗಿ ರಕ್ಷಿಸಬಲ್ಲ ಪರ್ಯಾಯ ಮಾರ್ಗವನ್ನು ಸೂಚಿಸುವಂತೆ ಕೇಳಿದರು. "ಇದು ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು. ಯಾರಾದರೂ ಇದನ್ನು ಒಪ್ಪದಿದ್ದರೆ, ನಾನು ಒಂದೇ ಮಾತು ಹೇಳುತ್ತೇನೆ - ನಿಮ್ಮ ಬಳಿ ಉತ್ತಮ ಸೂತ್ರ ಅಥವಾ ಉತ್ತಮ ಪರಿಹಾರವಿದ್ದರೆ, ಮುಂದೆ ಬನ್ನಿ ಮತ್ತು ಅದನ್ನು ನಮಗೆ ವಿವರಿಸಿ ಎಂದು ಅವರು ಹೇಳಿದರು.
ಪಕ್ಷದ ನಿಲುವನ್ನು ಪುನರುಚ್ಚರಿಸಿದ ಕೆಟಿಆರ್, ಬಿಆರ್ಎಸ್ ಈ ಮಸೂದೆಯನ್ನು ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಬಂಧಪಟ್ಟ ಪಾಲುದಾರರು ಈ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



