ತಮಿಳುನಾಡು ಸಿಎಂ ವಿಜಯ್ 'ಬಿಜೆಪಿ ಗುಲಾಮ', ಅಂತಿಮವಾಗಿ ಅವರು ಕೇಸರಿ ಪಕ್ಷದೊಂದಿಗೆ ನಿಲ್ಲಲಿದ್ದಾರೆ: DMK ನಾಯಕ

'ತಮ್ಮ ವಿರುದ್ಧ ಹೋರಾಡುವ ಯಾರನ್ನೇ ಆಗಲಿ ಪೀಡಿಸಲು ಅವರು (ಬಿಜೆಪಿ) ಏನು ಬೇಕಾದರೂ ಮಾಡುತ್ತಾರೆ' ಎಂದು ಅವರು ಆರೋಪಿಸಿದರು.
C Joseph Vijay
ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್
Updated on: 

ಚೆನ್ನೈ: ಹಿರಿಯ ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್ ಅವರು ಸೋಮವಾರ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು 'ಬಿಜೆಪಿಯ ಗುಲಾಮ' ಎಂದು ಕರೆದಿದ್ದಾರೆ.

ಪಿಟಿಐ ವಿಡಿಯೋ ಜೊತೆಗೆ ಮಾತನಾಡಿದ ಇಳಂಗೋವನ್, ಮುಖ್ಯಮಂತ್ರಿ ವಿಜಯ್ ಅಂತಿಮವಾಗಿ ರಾಜಕೀಯವಾಗಿ ಬಿಜೆಪಿಯೊಂದಿಗೆ ಮಾತ್ರ ನಿಲ್ಲಲಿದ್ದಾರೆ ಎಂದು ಹೇಳಿದರು.

'ವಿಜಯ್ ಬಿಜೆಪಿಯ ಉತ್ಪನ್ನ. ಹೀಗಾಗಿ, ಅವರು ಬಿಜೆಪಿಯ ಮುಂದೆ ಯಾವ ರೀತಿಯ ಬೇಡಿಕೆಯನ್ನು ಇಟ್ಟಿದ್ದಾರೆ ಮತ್ತು ನಮಗೆ ಯಾವ ರೀತಿಯ ಫಲಿತಾಂಶ ಸಿಗಲಿದೆ ಎಂಬುದು ತಿಳಿದಿಲ್ಲ. ಕಾದು ನೋಡೋಣ' ಎಂದು ಡಿಎಂಕೆ ಮಾಜಿ ಸಂಸದ ಹೇಳಿದರು.

ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮುಂದೆ ಕೊಯಮತ್ತೂರು ಮತ್ತು ಮಧುರೈ ಮೆಟ್ರೋ ರೈಲು ಯೋಜನೆಗಳ ಕುರಿತು ಮುಖ್ಯಮಂತ್ರಿ ವಿಜಯ್ ಮಂಡಿಸಿದ ಪ್ರಸ್ತಾವನೆಗಳ ಬಗ್ಗೆ ಪ್ರಸ್ತಾಪಿಸಿದ ಇಳಂಗೋವನ್, 'ನಾವು ಈ ಬಗ್ಗೆ ಕೇಳಿದಾಗ ಅವರು ನಿರಾಕರಿಸಿದ್ದರು. ಈಗ ಅವರು ಏನು ಮಾಡುತ್ತಾರೆಂದು ನೋಡೋಣ. ಅವರು ಒಪ್ಪಿಕೊಂಡರೆ, ಅದು ತಮಿಳುನಾಡಿಗೆ ಒಳ್ಳೆಯದು' ಎಂದು ಹೇಳಿದರು.

ತಮಿಳುನಾಡಿನ ಭಾಷೆ ಮತ್ತು ಸಂಸ್ಕೃತಿ ಕುರಿತು ರಾಹುಲ್ ಗಾಂಧಿ ಮಾಡಿರುವ ಟೀಕೆಗಳು ಆಧಾರರಹಿತ ಎಂಬ ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿದ ಇಳಂಗೋವನ್, ಕೀಳಡಿ ಪುರಾತತ್ವ ಸಂಶೋಧನೆಗಳ ಅಧಿಕೃತ ಮಾನ್ಯತೆಯನ್ನು ತಡೆಹಿಡಿಯುವ ಮೂಲಕ ರಾಜ್ಯದ ಸಾಂಸ್ಕೃತಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿರುವುದು ಬಿಜೆಪಿ ಎಂದು ಪ್ರತಿಪಾದಿಸಿದರು.

C Joseph Vijay
ರಾಹುಲ್ ಗಾಂಧಿ ಜೊತೆ ಕಾಫಿ, ಮೋದಿ ಜೊತೆ ಮೆಟ್ರೋ ಪ್ರಯಾಣ: ರಾಜಕೀಯ ಚದುರಂಗಾಟದಲ್ಲಿ ವಿಜಯ್ ಚತುರ ನಡೆ!

'ಅವರು ಇಲ್ಲಿಯವರೆಗೆ ಕೀಳಡಿ ಸಂಶೋಧನೆಗಳನ್ನು ಒಪ್ಪಿಕೊಂಡಿಲ್ಲ ಮತ್ತು ಅವುಗಳಿಗೆ ಅನುಮೋದನೆಯನ್ನೂ ನೀಡಿಲ್ಲ. ಅವರು ತಟಸ್ಥವಾಗಿದ್ದರೆ, ಆ ಕೆಲಸವನ್ನು ಮಾಡಬೇಕಿತ್ತು. ಏಕೆಂದರೆ, ಈಗ ಅವರೇ ಅಧಿಕಾರದಲ್ಲಿದ್ದಾರೆ' ಎಂದು ಅವರು ಹೇಳಿದರು.

'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಅಜ್ಜಿ ನಿಧನರಾದಾಗ, ಅವರನ್ನು ತಮ್ಮ ಕುಟುಂಬದವರನ್ನು ಸಂಪರ್ಕಿಸದಂತೆ ತಡೆಯಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ, ಅವರೊಂದಿಗೆ ನಡೆದುಕೊಂಡ ರೀತಿಯನ್ನು ಖಂಡಿಸಿದ ಇಳಂಗೋವನ್, ಭಿನ್ನಮತವನ್ನು ದಮನ ಮಾಡುವ ಬಿಜೆಪಿಯ ಧೋರಣೆಯ ಭಾಗವೇ ಇಂತಹ ಕ್ರಮಗಳು ಎಂದು ಅವರು ಬಣ್ಣಿಸಿದರು.

'ತಮ್ಮ ವಿರುದ್ಧ ಹೋರಾಡುವ ಯಾರನ್ನೇ ಆಗಲಿ ಪೀಡಿಸಲು ಅವರು (ಬಿಜೆಪಿ) ಏನು ಬೇಕಾದರೂ ಮಾಡುತ್ತಾರೆ' ಎಂದು ಅವರು ಆರೋಪಿಸಿದರು.

ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ಅವರು ಸುಪ್ರೀಂ ಕೋರ್ಟ್‌ಗೆ ನಡೆಸಲು ಉದ್ದೇಶಿಸಿರುವ ಮೆರವಣಿಗೆಯನ್ನು ಬೆಂಬಲಿಸಿದ ಇಳಂಗೋವನ್, ಡಿಎಂಕೆ ಈ ಹೋರಾಟವನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿದರು.

'ಜ್ಞಾನೇಶ್ ಕುಮಾರ್ ಅವರನ್ನು ಬದಲಾಯಿಸಬೇಕು ಎಂದು ಸ್ವತಃ ನಮ್ಮ ನಾಯಕರೇ ಹೇಳಿಕೆ ನೀಡಿದ್ದರಿಂದ, ಆ ವಿಷಯದಲ್ಲಿ ನಾವು ಅವರೊಂದಿಗೆ ಇದ್ದೇವೆ. ಒಬ್ಬ ವ್ಯಕ್ತಿಯು ಇಡೀ ಪ್ರಜಾಪ್ರಭುತ್ವವನ್ನೇ ನಾಶಪಡಿಸುತ್ತಿದ್ದಾರೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಂಕಷ್ಟವನ್ನು ತಂದೊಡ್ಡುತ್ತಿದ್ದಾರೆ. ವಿರೋಧ ಪಕ್ಷವು ಈ ವಿಷಯದ ಕುರಿತು ಹೋರಾಟವನ್ನು ಮುಂದುವರಿಸಲಿದೆ' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com