

ಚೆನ್ನೈ: ಕಾಲಿವುಡ್ ನ ಮತ್ತೋರ್ವ ನಟ ರಾಜಕೀಯಕ್ಕೆ ಧುಮುಕ್ಕುವುದು ಬಹುತೇಕ ನಿಶ್ಚಿತವಾಗಿದೆ. ಸಿಎಂ ವಿಜಯ್ ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ನಟ ಧನುಷ್ ಪ್ಯಾನ್ ಕ್ಲಬ್ ತಯಾರಿ ಆಗ್ತಿದೆ. ಅವರ ಅಧಿಕೃತ ಅಭಿಮಾನಿ ಸಂಘವನ್ನು ಇನ್ನು ಮುಂದೆ 'ಧನುಷ್ ನರ್ಪಣಿ ಇಯಕ್ಕಂ' (ಧನುಷ್ ಕಲ್ಯಾಣ ಚಳುವಳಿ) ಎಂದು ಮರುನಾಮಕರಣ ಮಾಡಲಾಗಿದೆ.
ಅಕ್ಟೋಬರ್ 15, ಬುಧವಾರದಂದು ಕೊಯಮತ್ತೂರಿನಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಪುನರ್ ರಚನೆಗೆ ಅನುಮೋದನೆ ನೀಡಲಾಗಿದೆ. ಈ ಬದಲಾವಣೆ ಘೋಷಣೆ ಜೊತೆಗೆ ಸಂಸ್ಥೆಯು ಹೊಸದಾಗಿ ವಿನ್ಯಾಸಗೊಳಿಸಿದ ಲಾಂಛನ ಮತ್ತು ಹೊಸ ಧ್ವಜವನ್ನೂ ಅನಾವರಣಗೊಳಿಸಿದೆ.
ಈ ಹೊಸ ಲಾಂಛನದಲ್ಲಿ ದೊಡ್ಡ ಕೆಂಪು ಬಣ್ಣದ ನಕ್ಷತ್ರವಿದ್ದು, ಅದರ ಸುತ್ತಲೂ ಕೆಂಪು ಮತ್ತು ಬಿಳಿ ಬಣ್ಣದ ವೃತ್ತಾಕಾರದ ಅಂಚು ಇದೆ. ನಕ್ಷತ್ರದ ಮಧ್ಯಭಾಗದಲ್ಲಿ ನಟ ಧನುಷ್ ಅವರ ಫೋಟೋವಿದೆ. ಈ ಚಿತ್ರದಲ್ಲಿ ಧನುಷ್, ಕೈಮುಗಿದು ನಮಸ್ಕರಿಸುವ ಭಂಗಿಯಲ್ಲಿದ್ದು, ಲಾಂಛನದೊಳಗೆ ತಮಿಳು ಅಕ್ಷರಗಳನ್ನು ಕೂಡ ಸೇರಿಸಲಾಗಿದೆ.
ಈ ಸಂಸ್ಥೆಯು ತನ್ನ ಸ್ಥಳೀಯ ಚಟುವಟಿಕೆಯನ್ನು ವಿಸ್ತರಿಸಲು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಕೊಯಮತ್ತೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಕಲ್ಯಾಣ ಘಟಕಗಳನ್ನು ರಚಿಸಲು ಕರೆ ನೀಡಲಾಗಿದ್ದು, ಹೊಸ ಸದಸ್ಯರನ್ನು ಸೇರ್ಪಡೆಗೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಸದಸ್ಯತ್ವ ಅಭಿಯಾನ ಮತ್ತು ಪ್ರಸ್ತಾಪಿತ ಸ್ಥಳೀಯ ಘಟಕಗಳು, ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಒಂದು ಸಾಂಸ್ಥಿಕ ರಚನೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ. ಆದರೆ, ಯಾವ ರೀತಿಯ ಕಲ್ಯಾಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಅಥವಾ ಈ ಸ್ಥಳೀಯ ಘಟಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಯಾವುದೇ ವಿವರಗಳನ್ನು ಈ ಘೋಷಣೆಯಲ್ಲಿ ನೀಡಿಲ್ಲ.