ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಮೃತ ಮಹಿಳೆಯರಾದ ಗೋಪಿಕಾ ಮತ್ತು ದೇವಿಕಾ ಇಬ್ಬರೂ ಹಿಂದೂಗಳು ತಮ್ಮ ಮುಸ್ಲಿಂ ಸ್ನೇಹಿತ ಇಯಾಸ್ ಜೊತೆ ತಡರಾತ್ರಿ ಯಾಕೆ ಹೊರಗೆ ಇದ್ದರು ಎಂದು ಪ್ರಶ್ನಿಸುತ್ತಿದ್ದಾರೆ.
Gopika
ಗೋಪಿಕಾ
Updated on: 

ಕೊಚ್ಚಿ: ನೆಡುಂಬಸ್ಸೆರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಮೂವರ ಕುಟುಂಬವು ತನಿಖೆಯ ಕುರಿತು ಸ್ಪಷ್ಟನೆ ಕೊಡುತ್ತಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರುದ್ಧವಾಗಿ ಜೋರಾದ ಚರ್ಚೆ ನಡೆಯುತ್ತಿದೆ. ಇದರಲ್ಲಿ ತಡರಾತ್ರಿಯಲ್ಲಿ ಹೊರಗಿದ್ದಿದ್ದಕ್ಕಾಗಿ ಮೃತಪಟ್ಟ ಯುವತಿಯರನ್ನೇ ಪ್ರಶ್ನಿಸಲಾಗುತ್ತಿದೆ. ನೈತಿಕ ಪೊಲೀಸ್‌ಗಿರಿ (moral policing) ಮತ್ತು ಸಂತ್ರಸ್ತರನ್ನೇ ದೋಷಿಸುವ ಪ್ರವೃತ್ತಿಯು ಹೇಗೆ ಮೂಲ ಅಪರಾಧವನ್ನೇ ಮರೆಮಾಚಬಲ್ಲದು ಎಂಬುದನ್ನು ಈ ಚರ್ಚೆ ಎತ್ತಿ ತೋರಿಸಿದೆ. ಯುವಕನೋರ್ವ 'ಮದ್ಯಪಾನ ಮಾಡಿ ವಾಹನ ಚಲಾಯಿಸಿದ' ಆರೋಪದ ಬದಲು, ಈಗ ಚರ್ಚೆಯು ಯುವಕರ ವೈಯಕ್ತಿಕ ಆಯ್ಕೆಗಳ ಕಡೆಗೆ ತಿರುಗಿದೆ.

ಈ ಚರ್ಚೆ ಕೋಮುವಾದಿ ತಿರುವು ಪಡೆದುಕೊಂಡಿದೆ. ಮೃತ ಹಿಂದೂ ಯುವತಿಯಾದ ಗೋಪಿಕಾ ಮತ್ತು ದೇವಿಕಾ ಯಾಕೆ ತಡರಾತ್ರಿ ಮುಸ್ಲಿಂ ಸ್ನೇಹಿತ ಇಯಾಸ್ ಜೊತೆ ಹೊರಗೆ ಹೋಗಿದ್ದರು ಎಂದು ಪ್ರಶ್ನಿಸುತ್ತಿದ್ದಾರೆ. ಆ ಸಮಯದಲ್ಲಿ ಯುವತಿಯರು ಸಾರ್ವಜನಿಕ ಸ್ಥಳದಲ್ಲಿ ಯಾಕಿದ್ದರು? ಎಂದು ಇತರರು ಪ್ರಶ್ನಿಸಿದ್ದಾರೆ.

ಟಿಐಎಸ್ಎಸ್ ಸಂಶೋಧಕಿ ದಿವ್ಯಾ ಜಿಎಸ್, ಅತ್ಯಾಚಾರ ಮತ್ತು ಕಿರುಕುಳದ ಪ್ರಕರಣಗಳಲ್ಲಿಯೂ ಸಹ ಪಿತೃಪ್ರಧಾನ ಮತ್ತು ಹಿಂದೂ ಮೂಲಭೂತವಾದಿ ದೃಷ್ಟಿಕೋನಗಳು ಸಂತ್ರಸ್ತರನ್ನು ದೂಷಿಸುವುದರಲ್ಲಿಯೇ ಇರುತ್ತವೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಸಂತ್ರಸ್ತರ ಬಗ್ಗೆ ಸಹಾನುಭೂತಿ ಇತ್ತು. ತದನಂತರ ಮೂವರು ಯಾಕೆ ತಡರಾತ್ರಿ ಜೊತೆಯಲ್ಲಿದ್ದರು. ಅವರು ಹೆಲ್ಮೆಟ್‌ಗಳನ್ನು ಯಾಕೆ ಧರಿಸಿರಲಿಲ್ಲ, ಅವರು ರಾತ್ರಿಯಲ್ಲಿ ಯಾಕೆ ಪ್ರಯಾಣಿಸುತ್ತಿದ್ದರು ಎಂಬ ಚರ್ಚೆಗೆ ಹೊರಳಿದ್ದು, ಕೋಮುವಾದಿ ತಿರುವು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಚರ್ಚೆಗೆ ಉತ್ತರಿಸುವುದು ಕುಟುಂಬಗಳಿಗೆ ಕಷ್ಟಕರವಾಗಿದೆ. ಎಫ್‌ಐಆರ್‌ನಿಂದ ಆರೋಪಿಯ ಹೆಸರನ್ನು ಕೈಬಿಡುವುದು ಮತ್ತು ಮರಣೋತ್ತರ ಪರೀಕ್ಷೆಯ ನಂತರ ಗೋಪಿಕಾ ಅವರ ದೇಹದಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸುವುದು ಸೇರಿದಂತೆ ತನಿಖೆಯ ಕುರಿತು ಉತ್ತರಗಳನ್ನು ಅನುಸರಿಸುವಾಗ ಸಂತ್ರಸ್ತರ ಕಡೆಯೇ ಬೆರಳು ಮಾಡಿ ತೋರಿಸಲಾಗುತ್ತಿದೆ.

“ಈ ಇಬ್ಬರೂ ಯುವತಿಯರಿಗೆ ಬೆಳಿಗ್ಗೆ ತರಗತಿಗಳಿದ್ದವು ಮತ್ತು ಅವರು 'ಸುಕೋಯೋ' (Sukoyo) ಎಂಬ ಲೇಖನ ಸಾಮಗ್ರಿಗಳ ಅಂಗಡಿಯಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದರು. ಅಂಗಡಿಯು ರಾತ್ರಿ 10 ಗಂಟೆಗೆ ಮುಚ್ಚಿದರೂ, ಕೆಲಸ ಮುಗಿಸಿ ಹೊರಬರಲು ಅವರಿಗೆ ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು. ಆ ನಂತರವೇ ಅವರು ತಾವು ಉಳಿದುಕೊಂಡಿರುವ ಪಿಜಿ (PG) ಗಳಿಗೆ ತಲುಪುತ್ತಿದ್ದರು. ಹಾಗಾದರೆ, ಅವರು ಬೇರೆ ಯಾವಾಗ ಹೊರಗೆ ಹೋಗಿ ಊಟ ಮಾಡಬೇಕು ಅಥವಾ ತಮ್ಮದೇ ಆದ ಸಮಯವನ್ನು ಕಳೆಯಬೇಕು? ಗೋಪಿಕಾ ನಮಗೆ ಎಲ್ಲವನ್ನೂ ತಿಳಿಸಿದ್ದಾಳೆ. ಇಂತಹ ಗಂಭೀರ ಅಪರಾಧದ ಸಂದರ್ಭದಲ್ಲಿ ಇಂತಹ ಕ್ಷುಲ್ಲಕ ವಾದಗಳನ್ನು ಮಂಡಿಸುವುದು ಸರಿಯಲ್ಲ. ಸಮಾಜವು ಇಂತಹ ಸಂಕುಚಿತ ಮನಸ್ಥಿತಿಯ ಅಭಿಪ್ರಾಯಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಗೋಪಿಕಾ ಅವರ ತಂದೆ ಎಂ.ಆರ್. ಪ್ರದೀಪ್ ಕುಮಾರ್ ಅವರು 'ಟಿಎನ್‌ಐಇ' (TNIE) ಗೆ ತಿಳಿಸಿದರು.

ಇಂತಹ ಹೇಳಿಕೆಗಳನ್ನು ತಡೆಯಲು ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರು ಮಧ್ಯಪ್ರವೇಶಿಸಬೇಕೆಂದು ಗೋಪಿಕಾ ಅವರ ಚಿಕ್ಕಪ್ಪ ಎಂ.ಆರ್. ಅನಿಲ್ ಕುಮಾರ್ ಆಗ್ರಹಿಸಿದ್ದಾರೆ. “ರಾತ್ರಿ ವೇಳೆ ಹೊರಗೆ ಹೋಗುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಇರುವ ಬಗ್ಗೆ ನನಗೆ ತಿಳಿದಿಲ್ಲ. ರಾತ್ರಿ ಹೊರಗೆ ಹೋಗುವುದನ್ನು ಅನೈತಿಕ ಚಟುವಟಿಕೆಗಳಿಗೆ ಜೋಡಿಸುವುದು ಸರಿಯಲ್ಲ. ಹಿಂದೂ ಐಕ್ಯ ವೇದಿಕೆಯ ನಾಯಕಿ ಶಶಿಕಲಾ ಸೇರಿದಂತೆ ಅನೇಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಏಕೆಂದರೆ ನಮ್ಮ ಸಾಮಾಜಿಕ ವ್ಯವಸ್ಥೆಯು ಅವರಿಗೆ ಇಂತಹ ಮಾತುಗಳನ್ನಾಡಲು ಅವಕಾಶ ನೀಡುತ್ತಿದೆ. ಡಿಜಿಪಿ (DGP) ಅವರು ಸ್ವತಃ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೆ ಅಂತ್ಯ ಹಾಡಬೇಕು ಎಂದು ಅವರು ಹೇಳಿದ್ದಾರೆ.

ವಕೀಲೆ ಸಂಧ್ಯಾ ರಾಜು ಜಾರ್ಜ್ ಮಾತನಾಡಿ, ಈ ವಿವಾದವು ಮೂಲ ಅಪರಾಧದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಹೇಳಿದರು. ಈ ಸಂಪೂರ್ಣ ಪ್ರಕರಣವು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಯುವಕನೊಬ್ಬ ಮೂವರು ಯುವಜನರ ಸಾವಿಗೆ ಕಾರಣವಾದದ್ದಕ್ಕೆ ಸಂಬಂಧಿಸಿದೆ. ಒಂದು ವೇಳೆ ಆ ಯುವತಿಯರು ಅಲ್ಲಿ ಇಲ್ಲದಿದ್ದರೂ, ರಸ್ತೆಯಲ್ಲಿದ್ದ ಬೇರೆ ಯಾರಾದರೂ ಬಲಿಯಾಗಬಹುದಿತ್ತು. ಇಲ್ಲಿ ಮುಖ್ಯವಾದ ವಿಷಯ ಯಾರು ರಾತ್ರಿ ಹೊರಗೆ ಹೋದರು ಎಂಬುದಲ್ಲ, ಬದಲಾಗಿ ಜೀವಗಳನ್ನು ಬಲಿ ತೆಗೆದುಕೊಂಡ ಅಪರಾಧ ಯಾವುದು ಎಂಬುದು. ಯುವಜನರ ನಡತೆ ಅಥವಾ ವ್ಯಕ್ತಿತ್ವದ ಕಡೆಗೆ ಗಮನವನ್ನು ತಿರುಗಿಸುವುದು, ಮೂಲ ಘಟನೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಪ್ರಕರಣದ ಎಫ್‌ಐಆರ್ (FIR) ನಲ್ಲಿ ಆರೋಪಿಯ ಹೆಸರೇ ಇಲ್ಲ ಎಂದು ಸಂಧ್ಯಾ ಹೇಳಿದರು.

Gopika
'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಕ್ರಮ ಕೈಗೊಳ್ಳುವುದಾಗಿ ಉನ್ನತ ಪೊಲೀಸ್ ಅಧಿಕಾರಿಯ ಭರವಸೆ: ಅಂತಹ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ರವಾಡ ಚಂದ್ರಶೇಖರ್ ತಿಳಿಸಿದ್ದಾರೆ. ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ದೂರು ದಾಖಲಿಸುವಂತೆ ಕೋರಲು ಸೂಚನೆ ನೀಡಲಾಗುವುದು. ತನಿಖೆಯನ್ನು ಪ್ರಾರಂಭಿಸಲು ದೂರು ಅತ್ಯಗತ್ಯ. ದೂರು ದಾಖಲಾದ ನಂತರ, ನಾವು ಅಂತಹ ಪೋಸ್ಟ್‌ಗಳನ್ನು ತೆಗೆದುಹಾಕಬಹುದು, ಅವುಗಳ ಮೂಲವನ್ನು ಪತ್ತೆಹಚ್ಚಬಹುದು ಮತ್ತು ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಇಂತಹ ಘಟನೆಯ ನಂತರ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ," ಎಂದು ಅವರು 'ಟಿಎನ್‌ಐಇ' (TNIE) ಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com