

ಮೀರತ್: ಬ್ಲೂಡ್ರಮ್ ಕೊಲೆ ಪ್ರಕರಣದಲ್ಲಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಗೆ ಗಲ್ಲು ಶಿಕ್ಷೆ ವಿಧಿಸಿದ ಕೆಲವೇ ದಿನಗಳ ಬೆನ್ನಲ್ಲೇ ಮತ್ತೊಂದು ಜೋಡಿಗೆ ಮೀರತ್ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮೀರತ್ನಲ್ಲಿ ಗಂಡನನ್ನು ಹತ್ಯೆಗೈದು, ಹಾವು ಕಚ್ಚಿ ಸಾವಾಗಿದೆ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್ದೀಪ್ಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ADJ-12) ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಅಕ್ಬರ್ಪುರ ಸಾದಾತ್ ಗ್ರಾಮದ ನಿವಾಸಿ ಅಮಿತ್ ಕಶ್ಯಪ್ ಎಂಬುವವರು 2025 ರ ಏಪ್ರಿಲ್ 12 ರಂದು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಮಿತ್ ದೇಹದ ಅಡಿಯಲ್ಲಿ ಹಾವೊಂದು ಸಿಕ್ಕಿದ್ದರಿಂದ, ಹಾವು ಕಚ್ಚಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರಂಭದಲ್ಲಿ ಶಂಕಿಸಿದ್ದರು.
ಆದರೆ ಕತ್ತಿನ ಭಾಗದಲ್ಲಿ ಗಾಯಗಳು ಕಂಡುಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ, ಅಮಿತ್ರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿದುಬಂದಿತ್ತು.
ಪತಿ ಕೊಲೆಯಲ್ಲಿ ಪತ್ನಿ ಕೈವಾಡ
ಇನ್ನು ಈ ಪ್ರಕರಣವನ್ನು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಅಮಿತ್ ಪತ್ನಿ ರವಿತಾ ಮತ್ತು ಅಮರ್ದೀಪ್ ನಡುವೆ ಅನೈತಿಕ ಸಂಬಂಧವಿರುವುದು ಬೆಳಕಿಗೆ ಬಂದಿತ್ತು. ಇಬ್ಬರೂ ಸೇರಿ ಅಮಿತ್ನನ್ನು ಕೊಲೆ ಮಾಡಿ, ನಂತರ ಅಪರಾಧವನ್ನು ಮರೆಮಾಚಲು ಹಾವನ್ನು ತಂದು ಆತನ ದೇಹದ ಮೇಲಿಟ್ಟು ಹಾವಿನ ನಾಟಕವಾಡಿದ್ದರು ಎಂದು ತಿಳಿದುಬಂದಿತ್ತು.
ಪ್ರಕರಣದ ವಿಚಾರಣೆ ವೇಳೆ ಕೊಲೆಗೆ ಬಳಸಲಾಗಿದ್ದ ಹಾವನ್ನು ಹಿಡಿದು ಪರಿಶೀಲಿಸಿದಾಗ, ಅದರ ವಿಷದ ಗ್ರಂಥಿಯನ್ನು ಮುಂಚಿತವಾಗಿಯೇ ತೆಗೆದುಹಾಕಲಾಗಿತ್ತು ಎಂಬುದು ತಿಳಿದುಬಂದಿದೆ.
ಹಾವು ಪೂರೈಸಿದ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ ಪೊಲೀಸರು, ಆತ ನೀಡಿದ ಮಾಹಿತಿ ಮೇರೆಗೆ ರವಿತಾ ಹಾಗೂ ಅಮರ್ದೀಪ್ನನ್ನು ಬಂಧಿಸಿದ್ದರು. ತನಿಖಾಧಿಕಾರಿಗಳು ಸುಮಾರು 500 ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು, 12 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಪ್ರಿಯಕರನಿಗೆ 70ಕ್ಕೂ ಹೆಚ್ಚು ಕರೆ
ಅಲ್ಲದೆ, ಅಮಿತ್ ಸಾವನ್ನಪ್ಪಿದ ನಂತರ 4 ದಿನಗಳಲ್ಲಿ ಆರೋಪಿಗಳಿಬ್ಬರು 70 ಕ್ಕೂ ಹೆಚ್ಚು ಬಾರಿ ಫೋನ್ನಲ್ಲಿ ಮಾತನಾಡಿದ್ದು ಮತ್ತು ಒಟ್ಟು 500 ಕ್ಕೂ ಹೆಚ್ಚು ಕರೆಗಳನ್ನು ಮಾಡಿರುವುದು ಮೊಬೈಲ್ ಕರೆ ದಾಖಲೆಗಳಿಂದ ಸಾಬೀತಾಗಿತ್ತು.
ಪ್ರಾಸಿಕ್ಯೂಷನ್ ಪರ ಜಿಲ್ಲಾ ಸರ್ಕಾರಿ ಅಭಿಯೋಜಕ ಕೆ.ಕೆ. ಚೌಬೆ, ಸರ್ಕಾರಿ ಅಭಿಯೋಜಕಿ ಫರ್ಜಾನಾ ಹಾಗೂ ಸಂತ್ರಸ್ತ ಕುಟುಂಬದ ಪರ ವಕೀಲ ಬಲ್ರಾಜ್ ಸಿಂಗ್ ಅವರು ಯೋಜಿತ ಕೊಲೆ ಮತ್ತು ಸಾಕ್ಷ್ಯ ನಾಶದ ಯತ್ನವನ್ನು ಎತ್ತಿಹಿಡಿದು ಗರಿಷ್ಠ ಶಿಕ್ಷೆಗೆ ಮನವಿ ಮಾಡಿದ್ದರು.
ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳು, "ನ್ಯಾಯಾಲಯ ನೀಡುವ ಯಾವುದೇ ಶಿಕ್ಷೆಯನ್ನು ನಾವು ಶಿರಸಾವಹಿಸಿ ಸ್ವೀಕರಿಸುತ್ತೇವೆ" ಎಂದು ಹೇಳಿಕೆ ನೀಡಿದ್ದರು.
ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಪರಾಧದ ಸ್ವರೂಪವನ್ನು ಪರಿಗಣಿಸಿ ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.