

ನವದೆಹಲಿ: ತಿರಂಗಾ ಮೆರವಣಿಗೆ ನಡೆಸಲು ಸಜ್ಜಾಗುತ್ತಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರು ಶಾಕ್ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸದಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಶುಕ್ರವಾರ 'ಕಾಕ್ರೋಚ್ ಜನತಾ ಪಾರ್ಟಿ'ಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ತಂಗಿದ್ದ ಎನ್ಸಿಪಿ-ಎಸ್ಸಿಪಿ (NCP-SCP) ವಕ್ತಾರ ಅನೀಶ್ ಗವಾಂಡೆ ಅವರ ನಿವಾಸಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಪೊಲೀಸರು, ಕನ್ನಾಟ್ ಪ್ಲೇಸ್ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಅವರಿಗೆ ನೋಟಿಸ್ ನೀಡಿದ್ದಾರೆ. ಈ ಪ್ರತಿಭಟನಾ ಮೆರವಣಿಗೆ ಆರಂಭವಾಗಲು ಕೆಲವೇ ಗಂಟೆಗಳು ಇರುವಂತೆಯೇ ಈ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ದೀಪ್ಕೆಗೆ ನೀಡಲಾದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಮೆರವಣಿಗೆಗೆ ನವದೆಹಲಿ ಪುರಸಭೆ ಮಂಡಳಿ (NDMC) ಅನುಮತಿ ನೀಡಿಲ್ಲ. ಒಂದು ವೇಳೆ ಈ ಪ್ರತಿಭಟನೆಯನ್ನು ಮುಂದುವರಿಸಿದರೆ, ಅದು ನಿರ್ಬಂಧಗಳ ಉಲ್ಲಂಘನೆಯಾಗುತ್ತದೆ ಮತ್ತು ಕಾನೂನು ಕ್ರಮಕ್ಕೆ ಎಡೆಮಾಡಿಕೊಡುತ್ತದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
'ತಿರಂಗ ಯಾತ್ರೆ'ಗೆ ಮುನ್ನ ಪೊಲೀಸರು ತಮ್ಮ ನಿವಾಸಕ್ಕೆ ಆಗಮಿಸಿದಾಗ ಪ್ರತಿಕ್ರಿಯಿಸಿದ ಎನ್ಸಿಪಿ-ಎಸ್ಸಿಪಿ (NCP-SCP) ವಕ್ತಾರ ಅನೀಶ್ ಗವಾಂಡೆ, "ನಾನು ಊಟಕ್ಕೆ ಹೊರಗೆ ಹೋಗಿದ್ದೆ, ಹಿಂತಿರುಗಿ ಬರುವಷ್ಟರಲ್ಲಿ ದೆಹಲಿ ಪೊಲೀಸರು ನನ್ನ ನಿವಾಸಕ್ಕೆ ಬಂದಿರುವುದು ತಿಳಿಯಿತು. ಇಲ್ಲಿ ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ಡಿಪ್ಕೆ ಕೂಡ ತಂಗಿದ್ದಾರೆ. ಅವರು ನಮ್ಮ ಅತಿಥಿಗಳು; ನಾನು ಅವರಿಗೆ ಚಹಾ ನೀಡಿ, ಅವರು ಇಲ್ಲಿಗೆ ಏಕೆ ಬಂದಿದ್ದಾರೆ ಎಂದು ಕೇಳುತ್ತೇನೆ. ಮೊದಲು ಆ ನೋಟಿಸ್ ಓದಿಕೊಳ್ಳಲಿ. ನಾವೆಲ್ಲರೂ 'ತಿರಂಗ ಯಾತ್ರೆ'ಯಲ್ಲಿ ಭಾಗವಹಿಸಬೇಕು, ನಾವು ಖಂಡಿತ ಹೋಗುತ್ತೇವೆ ಎಂದು ಹೇಳಿದರು.
'ತಿರಂಗ ಯಾತ್ರೆ'ಯಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಖಂಡಿತವಾಗಿಯೂ. ನಾವೆಲ್ಲರೂ 'ತಿರಂಗ ಯಾತ್ರೆ'ಯಲ್ಲಿ ಭಾಗವಹಿಸುತ್ತೇವೆ ಎಂದರು.
ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ತಡೆಯುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಎನ್ಸಿಪಿ (ಎಸ್ಸಿಪಿ) ವಕ್ತಾರರು, "ಪೊಲೀಸರು ನಮಗೆ ಹೋಗಲು ಅನುಮತಿ ನೀಡದಿದ್ದರೆ, ಅದು ಸರ್ಕಾರದ ಹೇಡಿತನವನ್ನು ತೋರಿಸುತ್ತದೆ. 'ಹರ್ ಘರ್ ತಿರಂಗ' (ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಬಗ್ಗೆ ಮಾತನಾಡುವವರು ತ್ರಿವರ್ಣ ಧ್ವಜಕ್ಕೆ ಹೆದರಬಾರದು ಎಂದು ಹೇಳಿದರು.