

ನವದೆಹಲಿ: ಭಾರತೀಯ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅವರನ್ನು "ಚುನಾಯಿತರಾಗಲು ಸಾಧ್ಯವಾಗದ ರಾಜಕುಮಾರ" ಎಂದು ಕರೆದಿರುವ ಸ್ಮತಿ, ರಾಹುಲ್ ಗಾಂಧಿ ಚಕ್ರವರ್ತಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಗಾಂಧಿಯವರ ಈ ನಡೆಯನ್ನು "ರಾಜಕೀಯ ತಂತ್ರ" ಎಂದಿದ್ದಾರೆ. ಚುನಾವಣೆಗಳ ಮೂಲಕವಲ್ಲದೆ ಬೇರೆ ಮಾರ್ಗದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಉಚ್ಚಾಟಿಸಲು ಕಾಂಗ್ರೆಸ್ ಸಂಸದರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವವರು ಈ ದೇಶವನ್ನು ಆಳುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದಾರೆ. ಅದನ್ನು ಈಡೇರಿಸಿಕೊಳ್ಳಲು ಅವರು ಕಾನೂನನ್ನು ಉಲ್ಲಂಘಿಸಬಹುದೇ? ಹಿಂಸಾಚಾರವನ್ನು ಪ್ರಚೋದಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧ ವಿರೋಧ ಪಕ್ಷದ ಪ್ರತಿಭಟನೆಗಳ ಕುರಿತು ಎನ್ಡಿಎಟಿ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ಸರ್ಕಾರದೊಂದಿಗೆ ಮಾತನಾಡಲು ಬಯಸುವುದಿಲ್ಲ. ಬದಲಾಗಿ ಮೊಬಾಕ್ರಸಿ(ಜನಸಮೂಹದ) ಮೂಲಕ ಆಡಳಿತವನ್ನೇ ಬದಲಾಯಿಸಲು ಬಯಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
2025ರಲ್ಲಿ ರಾಹುಲ್ ಗಾಂಧಿಯವರು ಇನ್ನು ಮುಂದೆ ನಾನು ಬಿಜೆಪಿ ವಿರುದ್ಧ ಹೋರಾಡುವುದಿಲ್ಲ, ಬದಲಾಗಿ ಇಂಡಿಯನ್ ಸ್ಟೇಟ್ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದರು. ಇಂಡಿಯನ್ ಸ್ಟೇಟ್ ಎಂದರೇನು? ಎಲ್ಲರಿಗೂ ತಿಳಿದಿದೆ. ಈಗ ಅವರು ಭಾರತದ ರಾಷ್ಟ್ರದ ವಿರುದ್ಧ ಯುದ್ಧ ಮಾಡಲು ಬಯಸುತ್ತಾರೆ. ಸಂಸತ್ತಿನ ಸದಸ್ಯರಾಗಿದ್ದು, ಬೀದಿ ಹೋರಾಟವನ್ನು ಆರಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ರಾಹುಲ್ ಗಾಂಧಿ ಅವರನ್ನು ಟೀಕಿಸಲು ಸ್ಮೃತಿ ಇರಾನಿ ಬಾಲಿವುಡ್ನ ಜನಪ್ರಿಯ 'ಭೂತ್ನಾಥ್ ರಿಟರ್ನ್ಸ್' ಸಿನಿಮಾದ ಎಐ (AI) ಎಡಿಟೆಡ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ನ 'ಭೂತ್ನಾಥ್ ರಿಟರ್ನ್ಸ್' ಸಿನಿಮಾದಲ್ಲಿ ಬೋಮನ್ ಇರಾನಿ ಮತ್ತು ಅಮಿತಾಬ್ ಬಚ್ಚನ್ ನಟಿಸಿರುವ ಪ್ರಸಿದ್ಧ ದೃಶ್ಯವೊಂದನ್ನು ಎಐ (AI) ಮೂಲಕ ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದಲ್ಲಿದ್ದ ಬೋಮನ್ ಇರಾನಿ ಅವರ ಮುಖದ ಬದಲಿಗೆ ರಾಹುಲ್ ಗಾಂಧಿ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸತ್ತ ವ್ಯಕ್ತಿಯೊಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಇನ್ನೂ ಹೇಗೆ ಉಳಿದುಕೊಂಡಿದೆ ಎಂಬ ಸಂಭಾಷಣೆ ಇದೆ.
ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರ ಮುಖವಿರುವ ಪಾತ್ರ, 'ಸಬ್ಕೋ ಪತಾ ಹೈ ಯೆ ಮರಾ ಹುವಾ ಹೈ, ಔರ್ ವೋಟ್ ನಹೀ ಕರ್ ಸಕ್ತಾ...' (ಎಲ್ಲರಿಗೂ ಗೊತ್ತು ಇವರು ಸತ್ತಿದ್ದಾರೆ ಮತ್ತು ವೋಟ್ ಮಾಡಲು ಸಾಧ್ಯವಿಲ್ಲ) ಎನ್ನುತ್ತದೆ. ಇದಕ್ಕೆ ಪ್ರತಿಕ್ರಿಯಿಸುವ ಅಮಿತಾಬ್ ಬಚ್ಚನ್ ಪಾತ್ರ, ತಮ್ಮ ಸಾವಿನ ನಂತರವೂ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿಲ್ಲ ಮತ್ತು ಹಿಂದಿನ ಚುನಾವಣೆಯಲ್ಲಿ ತಮ್ಮ ಹೆಸರಿನಲ್ಲಿ ಬೇರೆ ಯಾರೋ ಕಳ್ಳವೋಟ್ ಹಾಕಿದ್ದಾರೆ ಎಂದು ಆರೋಪಿಸುವ ದೃಶ್ಯ ಇದರಲ್ಲಿದೆ.
ಈ ವಿಡಿಯೋವನ್ನು 'X' (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಮೃತಿ ಇರಾನಿ, ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ನಿಜವಾಗಿಯೂ ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸಬಹುದು, ಆದರೆ ದೇಶವನ್ನು ದಾರಿ ತಪ್ಪಿಸಲು ಕುರುಡರಂತೆ ನಟಿಸುತ್ತಿರುವವರನ್ನು ಎಬ್ಬಿಸಲು ಸಾಧ್ಯವಿಲ್ಲ! SIR Explain!' ಎಂದು ಸವಾಲು ಹಾಕುವ ಮೂಲಕ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.