

ಕೋಲ್ಕತ್ತಾ: ಕೋಲ್ಕತ್ತಾದ ದುರ್ಗಾ ಪೂಜೆ ಮಂಟಪದಲ್ಲಿ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಭಾನುವಾರ ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪೂಜಾ ಸಮಿತಿಯ ಕಾರ್ಯದರ್ಶಿ ರಾಜ್ ಕುಮಾರ್ ಸೆವ್ಡಾ ಅಲಿಯಾಸ್ ರಾಜಾ (48), ಉಪಾಧ್ಯಕ್ಷ ಸಂತನು ದುಬೆ (55) ಹಾಗೂ ಬಿದಿರಿನ ರಚನೆ ನಿರ್ಮಾಣದಲ್ಲಿ ತೊಡಗಿದ್ದ ಬಿಪ್ಲಬ್ ಮುಖರ್ಜಿ ಅಲಿಯಾಸ್ ಜಾಯ್ (48), ಜನಸಂದಣಿ ನಿರ್ವಹಣೆ ಮತ್ತು ಗಣ್ಯರ ಪ್ರವೇಶಪತ್ರಗಳ ಪರಿಶೀಲನೆಯ ಹೊಣೆ ಹೊತ್ತಿದ್ದ ಕೌಶಿಕ್ ಸಾಹಾ (53), ಜನಸಂದಣಿ ನಿರ್ವಹಣೆಯಲ್ಲಿ ತೊಡಗಿದ್ದ ಪಿಂಟು ದೇ (51) ಹಾಗೂ ಖಾಸಗಿ ಭದ್ರತಾ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ಸುಮನ್ ಚಕ್ರವರ್ತಿ (30) ಮತ್ತು ರಾಜೇಶ್ ಪಾಲ್ (29) ಎಂದು ಗುರುತಿಸಲಾಗಿದೆ.
ಆಯೋಜಕರು ಹಾಗೂ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ಗಳಾದ 105, 110 ಮತ್ತು 3(5) ಅಡಿಯಲ್ಲಿ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರ ರಾತ್ರಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಗಾಗಿ 14 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಶನಿವಾರ ರಾತ್ರಿ ಘಟನಾ ಸ್ಥಳದ ಸಮೀಪದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ, ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಘಟನೆಯ ತನಿಖೆಗಾಗಿ ಕಲ್ಕತ್ತಾ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗುವುದು ಎಂದು ಘೋಷಿಸಿದರು.
ಜನಸಂದಣಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು ತನಿಖೆಯಲ್ಲಿ ಸಾಬೀತಾದರೆ ಚೋರ್ಬಗನ್ ಸರ್ಬಜನಿನ್ ದುರ್ಗೋತ್ಸವ ಸಮಿತಿ ಅಥವಾ ಕೋಲ್ಕತ್ತಾ ಪೊಲೀಸರ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ ಮತ್ತು ಪಶ್ಚಿಮ ಬಂಗಾಳ ಪೊಲೀಸರ ಅಪರಾಧ ತನಿಖಾ ವಿಭಾಗದ (ಸಿಐಡಿ) ಹಿರಿಯ ಅಧಿಕಾರಿಗಳೂ ಎಸ್ಐಟಿಯ ಭಾಗವಾಗಲಿದ್ದಾರೆ ಎಂದು ತಿಳಿಸಿದರು.
ತಂಡದ ನೇತೃತ್ವ ವಹಿಸಲು ಹಾಲಿ ನ್ಯಾಯಮೂರ್ತಿಯೊಬ್ಬರನ್ನು ನೇಮಿಸುವಂತೆ ಕೋರಿ ಕಲ್ಕತ್ತಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆರ್.ವಿ. ಘುಗೆ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು.
ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಲಿದೆ. ಅಲ್ಲದೆ, ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಒದಗಿಸಲಾಗುವುದು ಎಂದು ಘೋಷಿಸಿದರು.
ಗಾಯಗೊಂಡ ಪ್ರತಿಯೊಬ್ಬರಿಗೂ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
ಶನಿವಾರ ಸಂಜೆ ಸಮುದಾಯ ದುರ್ಗಾ ಪೂಜೆ ಮಂಟಪದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಉತ್ತರ ಕೋಲ್ಕತ್ತಾದ ಮುಕ್ತಾರಂಬಾಬು ರಸ್ತೆಯಲ್ಲಿರುವ ಚೋರ್ಬಗನ್ ಸಮುದಾಯ ದುರ್ಗಾ ಪೂಜೆ ಮಂಟಪದಲ್ಲಿ ಸಂಜೆ ಸುಮಾರು 7.30ಕ್ಕೆ ಈ ಘಟನೆ ಸಂಭವಿಸಿದೆ.
ಕೋಲ್ಕತ್ತಾ ಪೊಲೀಸರ ಸಮರ್ಪಕ ಸುರಕ್ಷತಾ ವ್ಯವಸ್ಥೆಗಳ ಕೊರತೆಯೇ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಹಲವರು ಆರೋಪಿಸಿದ್ದಾರೆ.
ಬೌಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಮೀಪದ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸುಮಾರು 45 ಗಾಯಾಳುಗಳನ್ನು ದಾಖಲಿಸಲಾಗಿತ್ತು. ಅವರಲ್ಲಿ ಹಲವರು ಉಸಿರುಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ 17 ಮಂದಿ ಮೃತಪಟ್ಟಿದ್ದರು.
ಆಸ್ಪತ್ರೆ ಮತ್ತು ಪೊಲೀಸ್ ಮೂಲಗಳ ಪ್ರಕಾರ, ಆರಂಭದಲ್ಲಿ ಮೃತಪಟ್ಟವರಲ್ಲಿ ಮೂವರು ಪುರುಷರು, 13 ಮಹಿಳೆಯರು ಹಾಗೂ ಒಂದು ಮಗು ಸೇರಿತ್ತು. ಇತರ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿತ್ತು. ಘಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರ 18003455678 ಎಂಬ ಉಚಿತ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ.
ಚೋರ್ಬಗನ್ ಸರ್ಬಜನಿನ್ ದುರ್ಗೋತ್ಸವ ಸಮಿತಿಯ ಮಂಟಪದಲ್ಲಿ ಸಾವಿರಾರು ಜನರು ಸೇರಿದ್ದರು. ಈ ಸಂದರ್ಭದಲ್ಲಿ ದಿಢೀರ್ ಮಳೆ ಆರಂಭವಾದ ಕಾರಣ ಸ್ಥಳದಲ್ಲಿದ್ದವರು ಮಳೆಯಿಂದ ರಕ್ಷಿಸಿಕೊಳ್ಳಲು, ಒಮ್ಮೆಲೆ ಮಂಟಪದತ್ತ ನುಗ್ಗಿದ್ದರು. ಈ ವೇಳೆ ಒಳಗಿದ್ದವರು ಹೊರಬರಲು ಪರದಾಡಿದರು. ಮಳೆಯಿಂದ ತಪ್ಪಿಸಿಕೊಳ್ಳಲು ಹೊರಗಿದ್ದವರೂ ಪ್ರವೇಶದ್ವಾರದತ್ತ ನುಗ್ಗಿದರು. ಈ ವೇಳೆ ಉಂಟಾದ ನೂಕುನುಗ್ಗಲಿನಿಂದ ತಾತ್ಕಾಲಿಕ ಮೆಟ್ಟಿಲುಗಳ ಮೇಲೆ ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಜೋರಾಸಾಂಕೊ ಕ್ಷೇತ್ರದ ಬಿಜೆಪಿ ಶಾಸಕ ಬಿಜೋಯ್ ಓಜಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿಯ ಸೋದರಳಿಯ ದೇಬ್ದೀಪ್ ಅಧಿಕಾರಿ ಕೂಡ ಸಮಿತಿಯ ಸದಸ್ಯರಾಗಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಘಟನೆಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಮಿತಿ ಸದಸ್ಯ ಬಿಕಾಶ್ ದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆ ಹೇಗೆ ಸಂಭವಿಸಿತು ಎಂಬುದು ನಮಗೆ ಇನ್ನೂ ತಿಳಿದಿಲ್ಲ. ಇದು ಕಾಲ್ತುಳಿತದ ಘಟನೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಘಟನೆಯ ಬಳಿಕ ಕೋಲ್ಕತ್ತಾ ಪೊಲೀಸರು ಚೋರ್ಬಗನ್ ಮಂಟಪದಲ್ಲಿ ಪೂಜಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಏತನ್ಮಧ್ಯೆ ದುರ್ಘಟನೆಯಲ್ಲಿ ಮೃತರ ಗುರುತು ಪತ್ತೆಯಾಗಿದ್ದು, ಮೃತರನ್ನು ಶ್ರೀಪರ್ಣಾ ಪೊದ್ದಾರ್ (26), ಮಿಥು ಮಂಡಲ್ (45), ಆಕೃತಿ ಕುಮಾರಿ (17), ಬರ್ಣಾಲಿ ಹಲ್ದಾರ್ (17), ಶುಭಂ ಶಂಕರ್ (33), ಆರತಿ ಸರ್ಕಾರ್ ಬಿಸ್ವಾಸ್ (45), ಟಾಗರ್ ಬೈಜ್ (37), ತಾನಿಯಾ ಬಿಸ್ವಾಸ್ (18), ಕಲ್ಪನಾ ಜನಾ (46), ಬಿಕಾಶ್ ಭಟ್ಟಾಚಾರ್ಯ (66), ಸ್ನೇಹಾ ಭಂಡಾರಿ (20), ಸಂದೀಪ್ ಬೈಜ್ (14), ಪಿಯಾಲಿ ಪ್ರಮಾಣಿಕ್ (25), ಪ್ರಿಯಾ ಸಮದ್ದಾರ್ (18), ಪ್ರಾಂಜಲ್ ಸರ್ಕಾರ್ (13), ದಿಲೀಪ್ ಘೋಷ್ (59), ದೀಪಾಲಿ ಘೋಷ್, ಅಭಿಷೇಕ್ ಶ್ರೀವಾಸ್ತವ (38) ಮತ್ತು ಆಯಾಂಶ್ ಕುಮಾರ್ ಶ್ರೀವಾಸ್ತವ (7) ಎಂದು ಗುರುತಿಸಲಾಗಿದೆ.
ಇದೇ ವೇಳೆ, ಕೋಲ್ಕತ್ತಾದ ಪ್ರಮುಖ ದುರ್ಗಾ ಪೂಜೆ ಮಂಟಪಗಳಲ್ಲಿನ ಮೂಲಸೌಕರ್ಯ, ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ಜನಸಂದಣಿ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ಪ್ರತ್ಯೇಕ ತಪಾಸಣಾ ತಂಡವೊಂದನ್ನು ರಚಿಸಿದೆ.
ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ರಾಜೇಶ್ ಸಿಂಘಾ, ರಾಜ್ಯ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ಅನುಜ್ ಶರ್ಮಾ ಹಾಗೂ ವಿಶೇಷ ಕಾರ್ಯಪಡೆಯ ಹೆಚ್ಚುವರಿ ಮಹಾನಿರ್ದೇಶಕ ಜಾವೇದ್ ಶಮೀಮ್ ಈ ತಂಡದಲ್ಲಿದ್ದಾರೆ.