ಡಿ-ಕಂಪನಿ ನಮ್ಮದಲ್ಲ, Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್, ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!

ವಾಸ್ತವಾಂಶಗಳಲ್ಲಿನ ತಪ್ಪುಗಳಿದ್ದರೂ ವಿಶೇಷ ವರದಿಗಾರರು ವರದಿಗಳನ್ನು ಬಿಡುಗಡೆ ಮಾಡುತ್ತಿರುವುದು ಮತ್ತು ಅದಕ್ಕೆ ಅವರ ಹೊಣೆಗಾರಿಕೆಯನ್ನು ನಿಗದಿಪಡಿಸದಿರುವುದು ಸ್ವೀಕಾರಾರ್ಹವಲ್ಲ. ಇದರಿಂದ ಸದಸ್ಯ ರಾಷ್ಟ್ರಗಳ ಮುಂದೆ ಈಗಾಗಲೇ ನಿರ್ಧಾರವಾದ ಪರಿಸ್ಥಿತಿಯನ್ನು ಒಡ್ಡಿದಂತಾಗುತ್ತದೆ.
Indian diplomat Raghoo Puri addressing the UN.
ಭಾರತೀಯ ರಾಜತಾಂತ್ರಿಕ ಅಧಿಕಾರಿ ರಘು ಪುರಿ
Updated on: 

ನ್ಯೂಯಾರ್ಕ್: ಭಯೋತ್ಪಾದನೆ ನಿಗ್ರಹ ವರದಿಯಲ್ಲಿ ತೀವ್ರ ತಪ್ಪು ಮಾಹಿತಿ ಮತ್ತು ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಭಾರತವು ವಿಶ್ವಸಂಸ್ಥೆಯ (UN) ವಿಶೇಷ ವರದಿಗಾರ ಬೆನ್ ಸಾಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವರದಿಗಳಲ್ಲಿ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗ್ರಹಿಸಿರುವ ಭಾರತ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ಪುನರುಚ್ಚರಿಸಿದೆ.

ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಅಪರಾಧಿ ಜಾಲವಾದ 'ಡಿ-ಕಂಪನಿ'ಯನ್ನು ವರದಿಯಲ್ಲಿ "ಭಾರತ ಮೂಲದ" ಸಿಂಡಿಕೇಟ್ ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ವಿಶೇಷ ವರದಿಗಾರ ಬೆನ್ ಸಾಲ್ ಅವರು ತಮ್ಮ ವರದಿಯಲ್ಲಿ ದಾವೂದ್ ಇಬ್ರಾಹಿಂನನ್ನು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ, ಭಾರತ ಮೂಲದ ಡಿ-ಕಂಪನಿ ಅಪರಾಧ ಜಾಲದ ಮುಖ್ಯಸ್ಥ ಎಂದು ಉಲ್ಲೇಖಿಸಿದ್ದರು. ಈ ಉಲ್ಲೇಖಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಅಧಿಕಾರಿ ರಘು ಪುರಿ, ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯಾವುದೇ ಹೊಣೆಗಾರಿಕೆಯಿಲ್ಲದೆ ತಪ್ಪು ಹೇಳಿಕೆಗಳನ್ನು ನೀಡುವುದು ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದ್ದಾರೆ.

ವರದಿಗಾರರು ವಾಸ್ತವಾಂಶಗಳಿಗೆ ವಿರುದ್ಧವಾದ ಮಾಹಿತಿಯುಳ್ಳ ವರದಿಗಳನ್ನು ಬಿಡುಗಡೆ ಮಾಡುತ್ತಿದ್ದರೂ ಅವರ ಹೊಣೆಗಾರಿಕೆಯನ್ನು ನಿಗದಿಪಡಿಸದಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು.

ವಾಸ್ತವಾಂಶಗಳಲ್ಲಿನ ತಪ್ಪುಗಳಿದ್ದರೂ ವಿಶೇಷ ವರದಿಗಾರರು ವರದಿಗಳನ್ನು ಬಿಡುಗಡೆ ಮಾಡುತ್ತಿರುವುದು ಮತ್ತು ಅದಕ್ಕೆ ಅವರ ಹೊಣೆಗಾರಿಕೆಯನ್ನು ನಿಗದಿಪಡಿಸದಿರುವುದು ಸ್ವೀಕಾರಾರ್ಹವಲ್ಲ. ಇದರಿಂದ ಸದಸ್ಯ ರಾಷ್ಟ್ರಗಳ ಮುಂದೆ ಈಗಾಗಲೇ ನಿರ್ಧಾರವಾದ ಪರಿಸ್ಥಿತಿಯನ್ನು ಒಡ್ಡಿದಂತಾಗುತ್ತದೆ. ವಿಶ್ವಾಸಾರ್ಹತೆಯ ಸವಾಲುಗಳನ್ನು ಎದುರಿಸುತ್ತಿರುವ ಈ ಸಂಸ್ಥೆಗೆ ಇದು ವಿಷಾದನೀಯ.

ದಾವೂದ್ ಇಬ್ರಾಹಿಂ ಭಾರತಕ್ಕೆ ಬೇಕಾಗಿರುವ ಅಪರಾಧಿಯಾಗಿದ್ದು, ಆತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ. ಒಸಾಮಾ ಬಿನ್ ಲಾಡೆನ್ ಪತ್ತೆಯಾಗಿ ಹತ್ಯೆಗೀಡಾದ ದೇಶವೂ ಪಾಕಿಸ್ತಾನವೇ ಎಂದು ಅವರು ಉಲ್ಲೇಖಿಸಿದ್ದಾರೆ.

2003ರಲ್ಲಿ ಡಿ-ಕಂಪನಿ ಎಂಬ ಅಪರಾಧ ಸಂಘಟನೆಯ ನಾಯಕನನ್ನು ಅಲ್‌ಖೈದಾದೊಂದಿಗಿನ ಸಂಬಂಧದ ಕಾರಣಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಟ್ಟಿಗೆ ಸೇರಿಸಿತ್ತು. ಈ ಸಾಲನ್ನು ಪ್ರತ್ಯೇಕವಾಗಿ ಓದಿದರೆ ನೈಜ ಪರಿಸ್ಥಿತಿಯ ಬಗ್ಗೆ ತಪ್ಪು ಚಿತ್ರಣ ಮೂಡುತ್ತದೆ. 1993ರಿಂದಲೇ ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಈ ಸಂಘಟನೆ ಮತ್ತು ಅದರ ನಾಯಕ ದಾವೂದ್ ಇಬ್ರಾಹಿಂ ಭಾರತಕ್ಕೆ ಬೇಕಾಗಿದ್ದಾರೆ.

Indian diplomat Raghoo Puri addressing the UN.
ಮೂರ್ಖತನದ ಮಾತು: ಪಾಕಿಸ್ತಾನ-ಬಾಂಗ್ಲಾದಂತೆ, ಭಾರತದ ಪ್ರಜಾಪ್ರಭುತ್ವ ಅಸ್ಥಿರಗೊಳಿಸಲು ಸಾಧ್ಯವಿಲ್ಲ; ಪ್ರಹ್ಲಾದ್ ಜೋಶಿ

ವಿಶ್ವಸಂಸ್ಥೆಯ 1267 ನಿರ್ಬಂಧಗಳ ವ್ಯವಸ್ಥೆಯಡಿ ದಾವೂದ್‌ನನ್ನು ಪಟ್ಟಿಗೆ ಸೇರಿಸಲು ನೀಡಲಾದ ಕಾರಣಗಳ ವಿವರಣೆಯಲ್ಲಿಯೂ ಈ ಅಂಶ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಈ ಪ್ರಮುಖ ಸಂಗತಿಯನ್ನು ವರದಿಯಲ್ಲಿ ಉಲ್ಲೇಖಿಸದಿರುವುದು ವಿಷಾದನೀಯ ಎಂದರು.

ಈ ವ್ಯಕ್ತಿ 2003ರಲ್ಲಿ ಪಟ್ಟಿಗೆ ಸೇರ್ಪಡೆಯಾಗುವುದಕ್ಕೂ ಬಹಳ ಹಿಂದೆಯೇ ಭಾರತದಿಂದ ಪರಾರಿಯಾಗಿದ್ದ. ದೇಶದ ಹೊರಗಿದ್ದ ಅವಧಿಯಲ್ಲಿಯೇ ಅಲ್‌ಖೈದಾ ಮತ್ತು ಒಸಾಮಾ ಬಿನ್ ಲಾಡೆನ್ ಜೊತೆಗಿನ ಸಂಬಂಧದ ಹಿನ್ನೆಲೆಯಲ್ಲಿ ಆತನನ್ನು ಪಟ್ಟಿಗೆ ಸೇರಿಸಲಾಗಿತ್ತು. ಇಂದಿಗೂ ಆತ ಭಾರತಕ್ಕೆ ಬೇಕಾಗಿರುವ ಅಪರಾಧಿಯಾಗಿದ್ದಾನೆ. ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ ಮಾಹಿತಿಯ ಪ್ರಕಾರ, ಒಸಾಮಾ ಬಿನ್ ಲಾಡೆನ್ ಪತ್ತೆಯಾಗಿ ಹತ್ಯೆಗೀಡಾದ ಅದೇ ದೇಶದಲ್ಲಿ ಆತ ನೆಲೆಸಿದ್ದಾನೆ ಎಂದು ತಿಳಿಸಿದರು.

ಇದೇ ವೇಳೆ ಭಯೋತ್ಪಾದನೆಗೆ ಬೆಂಬಲ ನೀಡುವವರು ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಮಾನವ ಹಕ್ಕುಗಳು ಮತ್ತು ಭಯೋತ್ಪಾದನೆ ನಿಗ್ರಹದ ಚೌಕಟ್ಟನ್ನು ಬಳಸುತ್ತಿರುವುದಕ್ಕೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವವರು ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಮಾನವ ಹಕ್ಕುಗಳು ಮತ್ತು ಭಯೋತ್ಪಾದನೆ ನಿಗ್ರಹದ ಚೌಕಟ್ಟನ್ನು ಬಳಸುವುದು ಫ್ಯಾಷನ್ ಆಗುತ್ತಿರುವಂತೆ ಕಾಣುತ್ತಿದೆ. ಮಾನವ ಹಕ್ಕುಗಳ ಚೌಕಟ್ಟು ಭಯೋತ್ಪಾದಕರಿಗೆ, ಮೂಲಭೂತವಾದ ಮತ್ತು ಉಗ್ರವಾದವನ್ನು ಹರಡುವವರಿಗೆ ಆಶ್ರಯ ತಾಣವಾಗಬಾರದು. ಭಯೋತ್ಪಾದನೆಯನ್ನು ಎಂದಿಗೂ ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ಪ್ರತಿನಿಧಿ ಮಾಡಿದ ಹೇಳಿಕೆಗೂ ಭಾರತ ತಿರುಗೇಟು ನೀಡಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ಪುನರುಚ್ಚರಿಸಿದ ಪುರಿ, ಪಾಕಿಸ್ತಾನದ ಹೇಳಿಕೆಗಳು ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತಿರುವ ಪ್ರಚಾರ ಎಂದು ಟೀಕಿಸಿದೆ.

ನನ್ನ ದೇಶದ ವಿರುದ್ಧ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಕುರಿತು ಪಾಕಿಸ್ತಾನದ ಪ್ರತಿನಿಧಿ ಮಾಡಿರುವ ಹೇಳಿಕೆಗಳು ಸಂಕುಚಿತ ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಪ್ರಚಾರ ಎಂಬುದು ಇಲ್ಲಿರುವ ಎಲ್ಲರಿಗೂ ತಿಳಿದಿದೆ.

ಪಾಕಿಸ್ತಾನದ ನೈಜ ಆಡಳಿತಗಾರರಾದ ಅದರ ಸೇನೆಯ ಕಾರಣದಿಂದ ಇಂತಹ ಹೇಳಿಕೆಗಳು ಬರುತ್ತಿವೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗಗಳಾಗಿವೆ, ಹಿಂದೆಯೂ ಹಾಗೆಯೇ ಇದ್ದವು, ಮುಂದೆಯೂ ಹಾಗೆಯೇ ಉಳಿಯಲಿವೆ ಎಂಬುದನ್ನು ದಾಖಲೆಯಲ್ಲಿ ಪುನರುಚ್ಚರಿಸಲು ಬಯಸುತ್ತೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಂಗಳವಾರ, ಮಾನವ ಹಕ್ಕುಗಳನ್ನು ರಾಜಕೀಯ ಒತ್ತಡ ಹೇರುವ ಅಥವಾ ಆಯ್ದ ದೇಶಗಳನ್ನು ಗುರಿಯಾಗಿಸುವ ಸಾಧನವಾಗಿ ಬಳಸಬಾರದು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿತ್ತು.

ಬಲವಂತದ ಅಥವಾ ಅನೈಚ್ಛಿಕ ನಾಪತ್ತೆಗಳ ಸಮಸ್ಯೆಯನ್ನು ಪರಿಹರಿಸಲು ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸಹಕಾರದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿಯಲ್ಲಿ ಭಾರತ ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com