

ನವದೆಹಲಿ: ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದಾದ್ಯಂತ 38 ಸ್ಥಳಗಳಲ್ಲಿ ತನಿಖಾ ಸಂಸ್ಥೆಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, 18 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, 1,424 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ತಿಳಿಸಿದ್ದಾರೆ.
ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಲು ಶುಕ್ರವಾರ ನಡೆಸಲಾದ 'ಆಪರೇಷನ್ ಟ್ರೈಡೆಂಟ್' ಕಾರ್ಯಾಚರಣೆಯನ್ನು ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶ್ಲಾಘಿಸಿದ್ದಾರೆ.
ಮಾದಕವಸ್ತು ಕಳ್ಳಸಾಗಣೆ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೂ ಭಾರತ ತನ್ನ ಪ್ರಹಾರವನ್ನು ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಹವಾಲಾ ವಹಿವಾಟುಗಳು ಬೆಳಕಿಗೆ ಬಂದಿವೆ. 17.82 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, 500 ಡಿಟೋನೇಟರ್‌ಗಳು ಹಾಗೂ 12 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಗಳ ಮೂಲಕ 'ಡೆತ್ ಟ್ರಯಾಂಗಲ್ ಕಾರಿಡಾರ್' (ಮರಣ ತ್ರಿಕೋನ ಕಾರಿಡಾರ್) ಮಾರ್ಗವನ್ನು ಬಳಸಿಕೊಂಡು ಈ ಜಾಲವು ಮಾದಕವಸ್ತುಗಳ ಕಳ್ಳಸಾಗಣೆ ನಡೆಸುತ್ತಿತ್ತು ಎಂದು ಅವರು ಹೇಳಿದ್ದಾರೆ.
2029ರ ಡಿಸೆಂಬರ್ 31ರೊಳಗೆ ದೇಶದಲ್ಲಿರುವ ಪ್ರತಿಯೊಂದು ಮಾದಕವಸ್ತು ಕಳ್ಳಸಾಗಣೆ ಜಾಲವನ್ನೂ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸರ್ಕಾರದ ದೃಢಸಂಕಲ್ಪವನ್ನು ಈ ಕಾರ್ಯಾಚರಣೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 23ರಂದು ನಡೆದ ದಾಳಿಗಳ ಮೂಲಕ ಸಾಧಿಸಿದ ಪ್ರಗತಿಗಾಗಿ ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಅಸ್ಸಾಂ, ಮಿಜೋರಾಂ ಮತ್ತು ಮಣಿಪುರ ರಾಜ್ಯಗಳ ಪೊಲೀಸ್ ಪಡೆಗಳನ್ನು ಒಳಗೊಂಡ ಮಾದಕವಸ್ತು ನಿಗ್ರಹ ತಂಡವನ್ನು ಅಮಿತ್ ಶಾ ಅಭಿನಂದಿಸಿದ್ದಾರೆ.