

ಚೆನ್ನೈ: ಮಾಜಿ ಸಿಎಂ ಜಯಲಲಿತಾ ಅವರ ನಿಧನದ ಬಳಿಕ ಎಐಎಡಿಎಂಕೆ ನಾಯಕರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದು, ಇದೀಗ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನೂ ಕೂಡ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.
ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಯಾವುದೇ ಕೊಡುಗೆ ನೀಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಎಐಪಿಟಿಎಂಎಂಕೆ (ಆಲ್ ಇಂಡಿಯಾ ಪುರುಚ್ಚಿ ತಲೈವರ್ ಮಕ್ಕಳ್ ಮುನ್ನೇಟ್ರ ಕಳಗಂ) (AIPTMMK) ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಅಧ್ಯಕ್ಷ ಪಿ. ಚಕ್ರವರ್ತಿ ಬುಧವಾರ ಘೋಷಿಸಿದ್ದಾರೆ.
ಚೆನ್ನೈನ ವಲಸರವಾಕ್ಕಂನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ, ಶಶಿಕಲಾ ಅವರು ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು. ವಿಧಾನಸಭೆ ಚುನಾವಣೆ ಮುಗಿದ ಬಳಿಕ ಅವರನ್ನು ಭೇಟಿಯಾಗಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
"ನನ್ನನ್ನು ಮಾತ್ರವಲ್ಲ, ಪಕ್ಷದ ಯಾವುದೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಅವರು ಭೇಟಿಯಾಗಿಲ್ಲ. ಪದಾಧಿಕಾರಿಗಳನ್ನೇ ಭೇಟಿಯಾಗದ ವ್ಯಕ್ತಿ ಪಕ್ಷವನ್ನು ಹೇಗೆ ಮುನ್ನಡೆಸಲು ಸಾಧ್ಯ? ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲು ನಿರ್ಧರಿಸಿದ್ದೇವೆ" ಎಂದು ಚಕ್ರವರ್ತಿ ಹೇಳಿದರು.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶಶಿಕಲಾ ಅವರು ಎಸ್. ರಾಮದಾಸ್ ನೇತೃತ್ವದ ಪಿಎಂಕೆ (PMK) ಬಣದೊಂದಿಗೆ ಮೈತ್ರಿ ಮಾಡಿಕೊಂಡು 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಪಕ್ಷದ ಚಟುವಟಿಕೆಗಳಲ್ಲಿ ಶಶಿಕಲಾ ಅವರ ನಿರ್ಲಕ್ಷ್ಯ ಹಾಗೂ ಪದಾಧಿಕಾರಿಗಳೊಂದಿಗೆ ಸಂಪರ್ಕವಿಲ್ಲದಿರುವುದೇ ಉಚ್ಚಾಟನೆ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಚಕ್ರವರ್ತಿ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಹೊಸ ಪಕ್ಷ ಸ್ಥಾಪನೆ
ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಶಶಿಕಲಾ ಈ ವರ್ಷದ ಆರಂಭದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆಲ್ ಇಂಡಿಯಾ ಪುರಟ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ ಎಂಬ ಹೆಸರಿನಲ್ಲಿ ಪಕ್ಷವನ್ನು ಆರಂಭಿಸಿದ್ದರು.
ಪಕ್ಷದ ಚುನಾವಣಾ ಚಿಹ್ನೆಯಾಗಿ ತೆಂಗಿನ ತೋಟವನ್ನು ಆಯ್ಕೆ ಮಾಡಲಾಗಿತ್ತು. ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳಿರುವ ಪಕ್ಷದ ಧ್ವಜವನ್ನೂ ಪರಿಚಯಿಸಲಾಗಿತ್ತು. ಧ್ವಜದಲ್ಲಿ ದ್ರಾವಿಡ ನಾಯಕರಾದ ಸಿ.ಎನ್. ಅಣ್ಣಾದೊರೈ, ಎಂಜಿಆರ್ ಮತ್ತು ಜಯಲಲಿತಾ ಅವರ ಚಿತ್ರಗಳನ್ನು ಅಳವಡಿಸಲಾಗಿತ್ತು.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಶಶಿಕಲಾ ಅವರನ್ನು ಈ ಹಿಂದೆ ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದೀಗ ಅವರು ಸ್ಥಾಪಿಸಿದ್ದ ಹೊಸ ಪಕ್ಷದಿಂದಲೇ ಹೊರಹಾಕಲ್ಪಟ್ಟಿರುವುದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.