'ನಾವೇನು ತಿನ್ನಬೇಕು-ಬೇಡ ಎಂದು ಹೇಳುವ ಹಕ್ಕಿಲ್ಲ': ದುರ್ಗಾ ಪೂಜೆ ವೇಳೆ ಮಾಂಸಾಹಾರ ತ್ಯಜಿಸುವ ಕರೆಗೆ ಬಂಗಾಳ ಬಿಜೆಪಿ ಮುಖ್ಯಸ್ಥ!

ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇತ್ತೀಚೆಗೆ ಹೌರಾಗೆ ಭೇಟಿ ನೀಡಿದ್ದಾಗ, ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸದಂತೆ ಜನರಿಗೆ ಮನವಿ ಮಾಡಿದ್ದರು.
West Bengal BJP chief Samik Bhattacharya
ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ
Updated on

ಕೋಲ್ಕತ್ತಾ: ಬಂಗಾಳಿಗಳು ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸಬಾರದು ಎಂದು ಬಾಗೇಶ್ವರ ಧಾಮ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಾಡಿರುವ ಮನವಿಯನ್ನು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಸೋಮವಾರ ತಳ್ಳಿಹಾಕಿದ್ದು, ಯಾವುದೇ ಧಾರ್ಮಿಕ ವ್ಯಕ್ತಿ ಅಥವಾ ರಾಜಕೀಯ ಪಕ್ಷವು ರಾಜ್ಯದ ಜನರು ಏನು ತಿನ್ನಬೇಕು ಅಥವಾ ಏನು ಧರಿಸಬೇಕು ಎಂದು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಭಟ್ಟಾಚಾರ್ಯ, ಆಹಾರದ ಆಯ್ಕೆಗಳು ವೈಯಕ್ತಿಕ ಸ್ವಾತಂತ್ರ್ಯದ ವಿಷಯ ಮತ್ತು ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಭೇಟಿ ನೀಡುವ ಧಾರ್ಮಿಕ ವ್ಯಕ್ತಿಯ ಆಜ್ಞೆಯ ಮೇರೆಗೆ ಬದಲಾಯಿಸಲು ಆಗುವುದಿಲ್ಲ. ನಾವೇನು ತಿನ್ನಬೇಕೋ ಅದನ್ನೇ ನಾವು ತಿನ್ನುತ್ತೇವೆ ಎಂದು ಅವರು ಹೇಳಿದರು.

'ಒಬ್ಬರು ಏನು ತಿನ್ನಬೇಕು ಅಥವಾ ಧರಿಸಬೇಕು ಎಂಬುದು ವೈಯಕ್ತಿಕ ಆಯ್ಕೆ. ಬಂಗಾಳದ ಆಹಾರ ಸಂಸ್ಕೃತಿ ವೈವಿಧ್ಯಮಯವಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಆದ್ಯತೆಗಳನ್ನು ಅನುಸರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಬಂಗಾಳಿಗಳು ಮೀನು ಅಥವಾ ಮಾಂಸವನ್ನು ತಿನ್ನುವುದಿಲ್ಲವೇ? ಸ್ವಾಮಿ ವಿವೇಕಾನಂದರು ಸಹ ಅದನ್ನು ಅನುಮೋದಿಸಿದರು. ನೀವು ಏನು ತಿನ್ನಬೇಕೆಂದು ನಿರ್ಧರಿಸುವ ಹಕ್ಕು ಯಾವುದೇ ಸಂತ, ನಾಯಕ ಅಥವಾ ಬೇರೆ ಯಾರಿಗೂ ಇಲ್ಲ. ವೈಯಕ್ತಿಕ ಆಯ್ಕೆ ವೈಯಕ್ತಿಕವಾಗಿರಬೇಕು' ಎಂದು ಭಟ್ಟಾಚಾರ್ಯ ಹೇಳಿದರು.

ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಶಾಸ್ತ್ರಿ ಅವರು ಇತ್ತೀಚೆಗೆ ಹೌರಾಗೆ ಭೇಟಿ ನೀಡಿದ್ದಾಗ, ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸದಂತೆ ಜನರಿಗೆ ಮನವಿ ಮಾಡಿದ್ದರು ಮತ್ತು ಹಬ್ಬದ ಸಮಯದಲ್ಲಿ ಅದನ್ನು ಸೇವಿಸುವವರನ್ನು ಪಖಂಡಿಗಳು (ಕಪಟಿಗಳು) ಎಂದು ಬಣ್ಣಿಸಿದ್ದರು.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಭಟ್ಟಾಚಾರ್ಯ, ಶಾಸ್ತ್ರಿ ಅವರಿಗೆ ಸಸ್ಯಾಹಾರವನ್ನು ಪ್ರತಿಪಾದಿಸುವ ಹಕ್ಕಿದೆ. ಆದರೆ, ಅವರ ಅಭಿಪ್ರಾಯಗಳನ್ನು ಬಂಗಾಳಿ ಸಮಾಜದ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.

'ನಾವು ಒಬ್ಬ ಸಂತ ವ್ಯಕ್ತಿಯ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಅವರ ಕಥೆಗಳು ದೇಶದಾದ್ಯಂತ ಪ್ರಸಿದ್ಧವಾಗಿವೆ ಮತ್ತು ಲಕ್ಷಾಂತರ ಜನರು ಅವರ ಮಾತುಗಳನ್ನು ಕೇಳಲು ಹೌರಾಗೆ ಹೋಗುತ್ತಿದ್ದರು. ಯಾರು ಬೇಕಾದರೂ ಸಸ್ಯಾಹಾರ ಸೇವನೆಯನ್ನು ಪ್ರತಿಪಾದಿಸಬಹುದು. ಅದು ಅಪರಾಧ ಅಥವಾ ಪಾಪವಲ್ಲ. ಆದಾಗ್ಯೂ, ಯಾರಾದರೂ ಕಪಟಿ ಎಂಬ ಪದವನ್ನು ಬಳಸಿದರೆ, ನಾವು ಅದನ್ನು ಒಪ್ಪುವುದಿಲ್ಲ' ಎಂದು ಅವರು ಹೇಳಿದರು.

West Bengal BJP chief Samik Bhattacharya
ಮಹಾ ಅಷ್ಟಮಿಯಂದು ಮದ್ಯದಂಗಡಿ ಮತ್ತು ಬಾರ್‌ಗಳು ಬಂದ್; ದುರ್ಗಾ ಪೂಜೆ ವೇಳೆ ಡಿಜೆ ಸಂಗೀತ ನಿಷೇಧ!

'ಬಂಗಾಳಿ ಸಾಂಪ್ರದಾಯಿಕ ಆಹಾರ ಪದ್ಧತಿಗಳಲ್ಲಿ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಮಾಂಸಾಹಾರ ಮತ್ತು ಊಟಗಳು ಸೇರಿವೆ. ನಾನು ರಾಜಕೀಯ ಕಾರ್ಯಕರ್ತ. ಇಲ್ಲಿ ಸಾಧು ಅಥವಾ ಮೌಲ್ವಿ ಏನು ಹೇಳುತ್ತಾರೆ ಎಂಬುವುದಕ್ಕೂ ನಮಗೂ ಏನು ಸಂಬಂಧ?. ದುರ್ಗಾ ಪೂಜೆ ಸಮೀಪಿಸುತ್ತಿದೆ ಮತ್ತು ಬಂಗಾಳಿಗಳು ಸಾಂಪ್ರದಾಯಿಕವಾಗಿ ಅಷ್ಟಮಿಯಂದು ಲುಚಿ (ಪೂರಿ) ಮತ್ತು ನವಮಿಯಂದು ಕೊಚ್ಚಿ ಪಾತ (ಮೇಕೆ ಮಾಂಸ) ತಿನ್ನುತ್ತಾರೆ' ಎಂದರು.

'ಇಲ್ಲಿ ಕಾಳಿ ಮಾತೆಗೆ ಮೇಕೆ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಪಶ್ಚಿಮ ಬಂಗಾಳದ ಧಾರ್ಮಿಕ ಸಂಪ್ರದಾಯಗಳು ಸ್ವತಃ ಸಸ್ಯಾಹಾರಿ ಪಾಕವಿಧಾನಕ್ಕೆ ಅನುಗುಣವಾಗಿಲ್ಲ' ಎಂದು ವಾದಿಸಿದರು.

ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಶಾಸ್ತ್ರಿ ರಾಜ್ಯದಾದ್ಯಂತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಹಿಂದಿನ ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಅನುಮತಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಿದ್ದರು ಎಂಬ ಆರೋಪಗಳ ಹೊರತಾಗಿಯೂ ಬಾಗೇಶ್ವರ ಧಾಮ ಮುಖ್ಯಸ್ಥರು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾದ ಕಾರಣ, ಅವರ ಭೇಟಿ ರಾಜಕೀಯ ಮಹತ್ವವನ್ನು ಪಡೆದುಕೊಂಡಿತ್ತು.

'ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸಬೇಡಿ' ಎಂದು ಶಾಸ್ತ್ರಿ ಕರೆ ನೀಡುವ ಮೊದಲು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪಶ್ಚಿಮ ಬಂಗಾಳದ ದುರ್ಗಾ ಪೂಜೆಯ ಆಯೋಜಕರನ್ನು ಸಾಂಪ್ರದಾಯಿಕ ಪದ್ಧತಿಗಳನ್ನು ಸಂರಕ್ಷಿಸುವಂತೆ ಮತ್ತು ಮಾಂಸಾಹಾರಿ ಆಹಾರವನ್ನು ಪೆಂಡಾಲ್‌ಗಳಿಂದ ದೂರವಿಡುವಂತೆ ಒತ್ತಾಯಿಸಿತು. ಆದರೆ, ಮಾಂಸಾಹಾರಿ ಆಹಾರವನ್ನು ನಿಷೇಧಿಸಲು ತಾನು ಪ್ರಯತ್ನಿಸುತ್ತಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ರಾಜ್ಯ ಸಚಿವ ದಿಲೀಪ್ ಘೋಷ್ ಭಟ್ಟಾಚಾರ್ಯರ ಹೇಳಿಕೆಗಳನ್ನು ಪ್ರತಿಧ್ವನಿಸುತ್ತಾ, ಕಾಳಿ ದೇವಿಗೆ ಮಾಂಸವನ್ನು ಅರ್ಪಿಸುವುದು ದಶಕಗಳಿಂದ ನಡೆದು ಬಂದಿರುವ ಸಂಪ್ರದಾಯವಾಗಿದೆ ಎಂದು ಹೇಳಿದರು.

'ಬಂಗಾಳದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿನ ಜನರು ಕಾಳಿ ದೇವಿಯ ಭಕ್ತರು ಮತ್ತು ಅವಳಿಗೆ ಪ್ರಾಣಿ ಬಲಿಗಳನ್ನು ಅರ್ಪಿಸಲಾಗುತ್ತದೆ. ಹಾಗೆಯೇ ಇತರ ಅನೇಕ ದೇವತೆಗಳಿಗೂ ಸಹ. ನವಮಿಯಂದು ದುರ್ಗಾ ದೇವಿಗೆ ಬಲಿಗಳನ್ನು ಅರ್ಪಿಸಲಾಗುತ್ತದೆ ಮತ್ತು ಮಾಂಸವನ್ನು ಪ್ರಸಾದವಾಗಿ ಸೇವಿಸಲಾಗುತ್ತದೆ. ಮೀನನ್ನು ದೇವರಿಗೆ ಪ್ರಸಾದವಾಗಿಯೂ ಅರ್ಪಿಸಲಾಗುತ್ತದೆ. ಇದು ಯುಗಯುಗಗಳಿಂದಲೂ ನಡೆದು ಬಂದಿರುವ ದೀರ್ಘಕಾಲೀನ ಸಂಪ್ರದಾಯವಾಗಿದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com