ಪ್ರಜಾಪ್ರಭುತ್ವದ ಸಂಕೇತವೆಂದೇ Red Fort ಗುರಿಯಾಗಿಸಿದ್ದ ಉಗ್ರರು: ಕೆಂಪು ಕೋಟೆ ದಾಳಿ ಇಂಚಿಂಚು ಮಾಹಿತಿ ಬಿಚ್ಚಿಟ್ಟ NIA..!

ಆರೋಪಿ ಮುಜಮಿಲ್‌ ಶೇಖ್‌ ಕೆಂಪುಕೋಟೆಗೆ ಭೇಟಿ ನೀಡುವ ವೇಳೆ ತನ್ನ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡುತ್ತಿದ್ದ. ಮತ್ತೊಂದೆಡೆ, ಗುಂಪಿನ ಸದಸ್ಯರು ಆರೋಪಿ ಡಾ. ಶಹೀನ್‌ ಅವರ ಮೊಬೈಲ್‌ ಬಳಸಿ ಅಂತರ್ಜಾಲದಲ್ಲಿ ಮಾಹಿತಿ ಹುಡುಕುತ್ತಿದ್ದರು.
File photo
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತದ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವದ ಪ್ರಮುಖ ಸಂಕೇತವಾಗಿರುವ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನೇ ಉಗ್ರರು ಉದ್ದೇಶಪೂರ್ವಕವಾಗಿ ಬಾಂಬ್ ದಾಳಿಗೆ ಆಯ್ಕೆ ಮಾಡಿಕೊಂಡಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ.

ಕಳೆದ 2025ರ ನವೆಂಬರ್‌ನಲ್ಲಿ ನಡೆದ ಕೆಂಪು ಕೋಟೆ ಸ್ಫೋಟದ ತನಿಖೆ ನಡೆಸುತ್ತಿರುವ ಎನ್‌ಐಎ, 'ಅನ್ಸಾರ್ ಗಜ್ವತುಲ್ ಹಿಂದ್' (AGuH) ಉಗ್ರ ಸಂಘಟನೆಯ ಸಂಚನ್ನು ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ವಿವರಿಸಿದೆ.

‘ಅನ್ಸಾರ್‌-ಉಲ್‌-ಗಜ್ವಾತ್‌-ಉಲ್‌-ಹಿಂದ್‌’ ಉಗ್ರ ಸಂಘಟನೆಯ ಘಟಕದ ಪ್ರಮುಖ ಸಂಚುಕೋರ ಹಾಗೂ ಕಾರ್ಯಾಚರಣೆ ಮುಖ್ಯಸ್ಥ ಎಂದು ಎನ್‌ಐಎ ಹೆಸರಿಸಿರುವ ಡಾ. ಉಮರ್‌ ಉನ್‌ ನಬಿ, 2023ರ ಡಿಸೆಂಬರ್‌ನಿಂದ 12 ಬಾರಿ ಕೆಂಪುಕೋಟೆಗೆ ಭೇಟಿ ನೀಡಿದ್ದ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಈ ಭೇಟಿಗಳಲ್ಲಿ ಕೆಲವು ಸಂದರ್ಭಗಳಲ್ಲಿ ಆತನ ಸಹಚರರೂ ಜಾಗದ ಪರಿಶೀಲನೆ ನಡೆಸಲು ಜೊತೆಯಾಗಿದ್ದರು ಎಂದು ಹೇಳಲಾಗಿದೆ.

ಆರೋಪಿ ಮುಜಮಿಲ್‌ ಶೇಖ್‌ ಕೆಂಪುಕೋಟೆಗೆ ಭೇಟಿ ನೀಡುವ ವೇಳೆ ತನ್ನ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡುತ್ತಿದ್ದ. ಮತ್ತೊಂದೆಡೆ, ಗುಂಪಿನ ಸದಸ್ಯರು ಆರೋಪಿ ಡಾ. ಶಹೀನ್‌ ಅವರ ಮೊಬೈಲ್‌ ಬಳಸಿ ಅಂತರ್ಜಾಲದಲ್ಲಿ ಮಾಹಿತಿ ಹುಡುಕುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಭೇಟಿಗಳನ್ನು ಸ್ಥಳ ಪರಿಶೀಲನೆ ಹಾಗೂ ಸುಧಾರಿತ ಸ್ಫೋಟಕ ಸಾಧನ ತಯಾರಿಕೆಗೆ ಬೇಕಾದ ವಸ್ತುಗಳ ಸಂಗ್ರಹಕ್ಕೆ ಸಂಬಂಧಿಸಿದ ಚಟುವಟಿಕೆಗಳೆಂದು ತನಿಖೆ ವೇಳೆ ಗುರುತಿಸಲಾಗಿದೆ.

2025ರ ನವೆಂಬರ್‌ 10ರಂದು ನಡೆದ ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ 17 ಮಂದಿಗೆ ಗಂಭೀರ ಗಾಯಗಳಾಗಿದ್ದವು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

2022ರಿಂದಲೇ ಉಮರ್‌ ಉನ್‌ ನಬಿ ಉಗ್ರ ಘಟಕವನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿದ್ದ ಎಂದು ಎನ್‌ಐಎ ಆರೋಪಿಸಿದೆ.

File photo
ವಿದ್ಯಾವಂತರು 'ಟೆರರಿಸ್ಟ್' ಆಗ್ತಿರೋದು ಹೆಚ್ಚು ಅಪಾಯಕಾರಿ: 'ಸುಪ್ರೀಂ' ನಲ್ಲಿ ಕೆಂಪು ಕೋಟೆ ಸ್ಫೋಟ ಘಟನೆ ಉಲ್ಲೇಖಿಸಿದ ದೆಹಲಿ ಪೊಲೀಸರು!

ಸದಸ್ಯರನ್ನು ಉಗ್ರರನ್ನಾಗಿ ಪರಿವರ್ತಿಸುವುದು, ಜಿಹಾದಿ ಪ್ರಚಾರಾಂಶಗಳನ್ನು ಹರಡುವುದು, ರಹಸ್ಯ ಸಭೆಗಳನ್ನು ಆಯೋಜಿಸುವುದು, ಶಸ್ತ್ರಾಸ್ತ್ರ ಸಂಗ್ರಹ, ತರಬೇತಿ ಹಾಗೂ ಇತರ ವ್ಯವಸ್ಥೆಗಳನ್ನು ಜಮ್ಮು-ಕಾಶ್ಮೀರ ಮತ್ತು ದೆಹಲಿ ಪ್ರದೇಶಗಳಲ್ಲಿ ನಡೆಸಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.

ಜಮ್ಮು-ಕಾಶ್ಮೀರದ ಅರಣ್ಯ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ಪರೀಕ್ಷೆ ನಡೆಸಿದ್ದ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಾಜಿಗುಂಡ್‌ ಅರಣ್ಯದಲ್ಲಿ ಸುಧಾರಿತ ರಾಕೆಟ್‌ ಸ್ಫೋಟಕ ಸಾಧನವನ್ನು ಪರೀಕ್ಷಿಸಲು ಆರೋಪಿಗಳು ಯತ್ನಿಸಿದ್ದರು. ಆದರೆ, ಪರೀಕ್ಷೆಯನ್ನು ಕೈಬಿಟ್ಟು ಸಾಧನವನ್ನು ನಾಶಪಡಿಸಿದ್ದರು. ಬಳಿಕ ಅದರ ಅವಶೇಷಗಳು ಹಾಗೂ ಡ್ರೋನ್‌ಗಳ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಆರೋಪಿ ಜಸೀರ್‌ ಬಿಲಾಲ್‌ ವಾನಿಗೆ ಉಮರ್‌ ಉನ್‌ ನಬಿ ಎರಡು ಡ್ರೋನ್‌ಗಳನ್ನು ನೀಡಿದ್ದು, ಅವುಗಳ ವ್ಯಾಪ್ತಿ ಮತ್ತು ಸಾಮರ್ಥ್ಯ ಹೆಚ್ಚಿಸುವಂತೆ ಸೂಚಿಸಿದ್ದ ಎಂದು ಎನ್‌ಐಎ ಆರೋಪಿಸಿದೆ.

ಅನಂತನಾಗ್‌ನ ಮತ್ತನ್‌ ಸಮೀಪದ ಯೂಶ್ಮರ್ಗ್‌ ಅರಣ್ಯದಲ್ಲಿ ಸಿಲಿಂಡರ್‌ ಆಧಾರಿತ ಸುಧಾರಿತ ಸ್ಫೋಟಕ ಸಾಧನವನ್ನು ಪರೀಕ್ಷಿಸಲಾಗಿತ್ತು ಎಂದು ಹೇಳಲಾಗಿದೆ.

ಸ್ಫೋಟದ ಸ್ಥಳದಿಂದ ಸಂಗ್ರಹಿಸಿದ ವಸ್ತುಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಟಿಎಟಿಪಿ ಮುಖ್ಯ ಸ್ಫೋಟಕ ವಸ್ತುವಾಗಿರುವುದು ಪತ್ತೆಯಾಗಿದ್ದು, ಅಮೋನಿಯಂ ನೈಟ್ರೇಟ್‌ ಕೂಡ ಪತ್ತೆಯಾಗಿದೆ.

ವಾಹನದೊಳಗೆ ಅಳವಡಿಸಲಾಗಿದ್ದ ಸ್ಫೋಟಕ ಸಾಧನವನ್ನು ಉಮರ್‌ ಉನ್‌ ನಬಿಯೇ ಸಕ್ರಿಯಗೊಳಿಸಿದ್ದ ಎಂದು ಎನ್‌ಐಎ ಆರೋಪಿಸಿದೆ.

ಎರಡು ವರ್ಷಗಳಿಂದ ಸಂಚು, ಹನ್ನೆರಡು ಬಾರಿ ಭೇಟಿ

ಈ ದಾಳಿಗಾಗಿ ಉಗ್ರರ ಜಾಲವು ಸುಮಾರು ಎರಡು ವರ್ಷಗಳ ಕಾಲ ನಿರಂತರ ಸಿದ್ಧತೆ ನಡೆಸಿತ್ತು. ಡಾ. ಉಮರ್ ಉನ್ ನಬಿ ಮತ್ತು ಆತನ ಸಹಚರರು ಡಿಸೆಂಬರ್ 2023 ರಿಂದ ಮೇ 2025 ರ ನಡುವೆ ಒಟ್ಟು 12 ಬಾರಿ ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಕಣ್ಗಾವಲು (ರೇಖಿ) ನಡೆಸಿದ್ದರು.

ನವೆಂಬರ್ 10, 2025 ರಂದು ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ತನ್ನ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ತಲಾಷ್ ಆರಂಭಿಸುತ್ತಿದ್ದಂತೆ ಆತಂಕಗೊಂಡ ನಬಿ, ಸಿಕ್ಕಿಬೀಳುವ ಭಯದಿಂದ ತರಾತುರಿಯಲ್ಲಿ ಸ್ಫೋಟಕ ತುಂಬಿದ ಹ್ಯುಂಡೈ i20 ಕಾರನ್ನು ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಗೇಟ್ ನಂ. 1ರ ಬಳಿ ತಂದು ತನ್ನ ಶೂನಲ್ಲಿದ್ದ ತಂತ್ರಜ್ಞಾನದ ಮೂಲಕ ಸ್ಫೋಟಿಸಿದ್ದ. ಈ ಆತ್ಮಹತ್ಯಾ ದಾಳಿಯಲ್ಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com