

ಲಖನೌ: ಉತ್ತರ ಪ್ರದೇಶ ಸಮಾಜವಾದಿ ಪಕ್ಷದ(ಎಸ್‌ಪಿ) ನಾಯಕರೊಬ್ಬರು, ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ವಾಟ್ಸಾಪ್ ಮೂಲಕಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ.
ಮಹಿಳಾ ಬ್ಯಾಂಕ್ ಉದ್ದೋಗಿಗೆ ಎಸ್ ಪಿ ನಾಯಕ ಕಳುಹಿಸಿದ ವಾಟ್ಸಾಪ್ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ "ಮುಖ್ಯಮಂತ್ರಿಯವರ ಕೋಟಾದಡಿ" ನಿಮಗೆ ಐಎಎಸ್ (IAS) ಅಧಿಕಾರಿ ಮಾಡುವುದಾಗಿ ಎಸ್‌ಪಿಯ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜನ್ ರಿಜ್ವಿ ತಮಗೆ ಭರವಸೆ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಪಾಯಲ್ ಎನ್ನುವ ಮಹಿಳೆಯನ್ನು ಉದ್ದೇಶಿಸಿ ಮಾಡಲಾಗಿರುವ ಈ ಮೆಸೇಜ್‌ನಲ್ಲಿ, ರಾಜನ್ ರಿಜ್ವಿ ತಮ್ಮ ಮಾತುಗಳಿಂದ ಆಕೆಯ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಆಕೆಯ ಸೌಂದರ್ಯ ಹಾಗೂ ವ್ಯಕ್ತಿತ್ವವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಸಂದೇಶದಲ್ಲಿ, 'ಹಲೋ ಮೇಡಂ, ನನ್ನ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಕ್ಷಮಿಸಿ. ನೀವು ಅಸಾಧಾರಣ ವ್ಯಕ್ತಿತ್ವ ಹೊಂದಿರುವ ಮಹಿಳೆ. ಸುಂದರವಾಗಿರುವುದರ ಜೊತೆಗೆ ನೀವು ಒಳ್ಳೆಯ ಸ್ವಭಾವದವರು ಮತ್ತು ನಿಮ್ಮ ಕೆಲಸದಲ್ಲಿ ಬಹಳ ನುರಿತವರು. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಪರಿಪೂರ್ಣ ಮಹಿಳೆ. ಈ ಉದ್ಯೋಗವು ನಿಮ್ಮ ವ್ಯಕ್ತಿತ್ವಕ್ಕೆ ಸರಿಹೋಗುವುದಿಲ್ಲ ಎಂದು ನನಗೆನಿಸುತ್ತದೆ. ಭವಿಷ್ಯದಲ್ಲಿ ನಾನು ರಾಜಕೀಯದಲ್ಲಿ ಮುಂದುವರಿದು, ಎಸ್‌ಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಮುಖ್ಯಮಂತ್ರಿಗಳ ಮೂಲಕ ಡೆಪ್ಯುಟೇಶನ್‌ನಲ್ಲಿ ನಿಮ್ಮನ್ನು IAS ಅಧಿಕಾರಿಯನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಬಗ್ಗೆ ಸಕಾರಾತ್ಮಕ ಭಾವನೆ ಇಟ್ಟುಕೊಂಡು ನಮ್ಮ ಕೆಲಸವನ್ನು ಮಾಡಿಕೊಡುತ್ತೀರಿ ಎಂದು ನಂಬಿದ್ದೇನೆ' ಎಂದು ಬರೆಯಲಾಗಿದೆ.
ಎಸ್ ಪಿ ನಾಯಕನ ನಡೆಯಿಂದ ಆಕ್ರೋಶಗೊಂಡ ಮಹಿಳೆ, ರಾಜನ್ ರಿಜ್ವಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅನಗತ್ಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.