

ಬೆಂಗಳೂರು: ದೇಶದಲ್ಲಿ ಒಂದೆಡೆ ಮುಂಗಾರು ಮಳೆಯ ಕೊರತೆಯಿಂದಾಗಿ ಭೀಕರ ಬರಗಾಲ ತಲೆದೋರಿದ್ದರೆ, ಇನ್ನೊಂದೆಡೆ ಅಕಾಲಿಕ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಕೃಷಿ ವಲಯ ಸಂಪೂರ್ಣ ನಲುಗಿಹೋಗಿದೆ. ಎಲ್ ನಿನೋ (El Niño) ಪ್ರಭಾವದಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ಐದು ರಾಜ್ಯಗಳನ್ನು ಬರಪೀಡಿತ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಮಳೆಯ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, 6.11 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರಬಿ 2026-27ರ ಸಮ್ಮೇಳನದ ಎರಡನೇ ದಿನದಂದು ಮಾತನಾಡಿದ ಚೌಹಾಣ್ ಅವರು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಕೆಲವು ಭಾಗಗಳು, ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಎಲ್ ನಿನೊ ಹವಾಮಾನ ವೈಪರೀತ್ಯದಿಂದ ಸಾಮಾನ್ಯ ಮುಂಗಾರು ದುರ್ಬಲಗೊಂಡಿದ್ದು, ಇದರಿಂದ ಬರ ಪರಿಸ್ಥಿತಿ ಉಂಟಾಗಿದೆ. ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರದ ನೀರಿನ ಅಸಾಮಾನ್ಯ ತಾಪಮಾನ ಏರಿಕೆಯಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನವೇ ಎಲ್ ನಿನೊ.
ಮುಂಗಾರು ಅವಧಿ ಅಂತ್ಯಗೊಳ್ಳುವ ವೇಳೆಗೆ ದೇಶದಲ್ಲಿ ಸುಮಾರು ಶೇ.12.3ರಷ್ಟು ಮಳೆ ಕೊರತೆ ದಾಖಲಾಗಿದೆ. ಮಳೆ ಕೊರತೆಯಿಂದ ಮುಂಗಾರು ಬೆಳೆಗಳ ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ ಶೇ.1ರಷ್ಟು ಇಳಿಕೆಯಾಗಿದೆ. ಭತ್ತದ ಬಿತ್ತನೆ ಪ್ರದೇಶ 16.32 ಲಕ್ಷ ಹೆಕ್ಟೇರ್‌ನಷ್ಟು ಕಡಿಮೆಯಾಗಿದ್ದು, ನಂತರ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳ ಪ್ರದೇಶವೂ ಕುಸಿದಿದೆ. ಮತ್ತೊಂದೆಡೆ, ಸಜ್ಜೆ ಸೇರಿದಂತೆ ಸಿರಿಧಾನ್ಯಗಳು ಹಾಗೂ ಉದ್ದು ಮತ್ತು ಸೂರ್ಯಕಾಂತಿ ಸೇರಿದಂತೆ ಕೆಲವು ಬೇಳೆ ಮತ್ತು ಎಣ್ಣೆಕಾಳುಗಳ ಬಿತ್ತನೆ ಪ್ರದೇಶ ಹೆಚ್ಚಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ರಾಯಲಸೀಮೆ ಭಾಗಗಳು, ತೆಲಂಗಾಣ ಮತ್ತು ರಾಜಸ್ಥಾನವನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ದೇಶದ ಇತರ ಕೆಲವು ಭಾಗಗಳಲ್ಲೂ ಶೀಘ್ರದಲ್ಲೇ ಬರ ಪರಿಸ್ಥಿತಿಯ ಮೌಲ್ಯಮಾಪನ ನಡೆಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಕೇಂದ್ರ ತಂಡವನ್ನು ಕಳುಹಿಸುವಂತೆ ಮನವಿ ಮಾಡಿದ್ದು, ಅಕ್ಟೋಬರ್ 3ರಂದು ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಕೂಡ ಕೇಂದ್ರ ಮೌಲ್ಯಮಾಪನ ತಂಡಕ್ಕೆ ಮನವಿ ಮಾಡಿದ್ದು, ಅಲ್ಲಿಗೂ ತಂಡವನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.
ಬರದಿಂದ ಹಾನಿಗೊಳಗಾದ ರಾಜ್ಯಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿಯೂ ಚೌಹಾಣ್ ಹೇಳಿದರು.
ಕೃಷಿ ಭೂಮಿಗಳು ಪಾಳು ಬೀಳದಂತೆ ನೋಡಿಕೊಳ್ಳುವುದು ತಕ್ಷಣದ ಆದ್ಯತೆಯಾಗಿದೆ. ಮುಂಬರುವ ರಬಿ ಬೆಳೆ ಹಂಗಾಮಿನಲ್ಲಿ ಕಡಿಮೆ ನೀರು ಬೇಕಾಗುವ, ಕಡಿಮೆ ಅವಧಿಯಲ್ಲಿ ಪಕ್ವವಾಗುವ ಹಾಗೂ ಸ್ಥಳೀಯ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗೆ ಸೂಕ್ತವಾದ ಬೀಜಗಳು ಮತ್ತು ಬೆಳೆ ತಳಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೆರವು ನೀಡಲಿದೆ. ಬರ ಪರಿಸ್ಥಿತಿಯ ನಡುವೆಯೂ ರೈತರು ಕೃಷಿ ಮುಂದುವರಿಸಲು ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಈ ವರ್ಷ ದೇಶದಲ್ಲಿ ಒಟ್ಟು 37.393 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯನ್ನು ಸರ್ಕಾರ ನಿರೀಕ್ಷಿಸಿದ್ದು, 2025-26ರಲ್ಲಿ ಉತ್ಪಾದನೆಯಾಗಿದ್ದ 37.6 ಎಲ್‌ಎಂಟಿಗೆ ಹೋಲಿಸಿದರೆ ಇದು ಕೊಂಚ ಕಡಿಮೆಯಾಗಿದೆ. ರಬಿ ಬೆಳೆಗಳ ಉತ್ಪಾದನೆ 17.72 ಎಲ್‌ಎಂಟಿ ಇರಲಿದೆ ಎಂದು ಅಂದಾಜಿಸಲಾಗಿದ್ದು, ಹಿಂದಿನ ವರ್ಷ ಇದು ಸುಮಾರು 18 ಎಲ್‌ಎಂಟಿ ಇತ್ತು.
ಮಣ್ಣಿನ ತೇವಾಂಶ ಮತ್ತು ಜಲಾಶಯಗಳಲ್ಲಿನ ನೀರಿನ ಮಟ್ಟ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಬಿ ಬಿತ್ತನೆಗೆ ಉತ್ತೇಜನ ನೀಡಲು, ರೈತರು ರಸಗೊಬ್ಬರ ಹಾಗೂ ಗುಣಮಟ್ಟದ ಬೀಜಗಳನ್ನು ವಿವೇಚನೆಯಿಂದ ಬಳಸುವಂತೆ ಪ್ರೋತ್ಸಾಹಿಸಲು ಚೌಹಾಣ್ ‘ಖೇತ್ ಬಚಾವೋ ಅಭಿಯಾನ’ ಉಪಕ್ರಮ ಜಾರಿಗೊಳಿಸಲಿದ್ದಾರೆ.
ವಿವಿಧ ಮುಕ್ತ ವ್ಯಾಪಾರ ಒಪ್ಪಂದಗಳಿಂದ ರೈತರಿಗೆ ದೊರೆಯಬಹುದಾದ ಪ್ರಯೋಜನಗಳ ಕುರಿತು ಪ್ರಧಾನಮಂತ್ರಿಯವರ ಸಂದೇಶವನ್ನೂ ಚೌಹಾಣ್ ರೈತರಿಗೆ ತಲುಪಿಸಲಿದ್ದಾರೆ.