ರಾಜಕೀಯ

ನೋಡು ಗುರು.. ತುಮಕೂರು

Published On :

ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 4ರಲ್ಲಿ ಜೆಡಿಎಸ್, ತಲಾ ಮೂರರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಿದ್ದಾರೆ. ಈ ಬಾರಿ ಕೆಜೆಪಿ ಎಂಟ್ರಿಯಿಂದ ಚಿತ್ರಣ ಬದಲಾಗುವ ಸಾಧ್ಯತೆ ಇದೆ. ಯಾವ ಪಕ್ಷದ ಸ್ಥಿತಿಗತಿ ಹೇಗಿದೆ, ಸಂಭಾವ್ಯ ಅಭ್ಯರ್ಥಿಗಳ್ಯಾರು ಎಂಬುದರ ಮಾಹಿತಿ ಇಲ್ಲಿದೆ..

ಗುಬ್ಬಿ ಮೇಲೆ ಯಾರ ಬ್ರಹ್ಮಾಸ್ತ್ರ?
'ಗುಬ್ಬಿ ನಾಟಕ ಕಂಪನಿ'ಯಿಂದ ಪ್ರಸಿದ್ಧಿಯಾದ ಕ್ಷೇತ್ರ. ಕಸಬಾ, ಕಡಬ, ನಿಟ್ಟೂರು, ಚೇಳೂರು, ಹಾಗಲವಾಡಿ ಹೋಬಳಿಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಎಸ್.ಆರ್. ಶ್ರೀನಿವಾಸ್ ಹ್ಯಾಟ್ರಿಕ್ ಸಾಧನೆಗೆ (2004ರಲ್ಲಿ ಪಕ್ಷೇತರರಾಗಿ, 2008ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು) ಹವಣಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸಿ.ವಿ. ಮಹದೇವಯ್ಯ, ಕಾಂಗ್ರೆಸ್‌ನಿಂದ ಶಿವಕುಮಾರ್ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಹೊನ್ನಗಿರಿಗೌಡ, ಕೆ.ಆರ್. ತಾತಯ್ಯ ಟಿಕೆಟ್ ಆಕಾಂಕ್ಷಿಗಳು. ಬಿಜೆಪಿಯಿಂದ ಎನ್.ಸಿ. ಪ್ರಕಾಶ್, ಸಾಗರನಹಳ್ಳಿ ವಿಜಯಕುಮಾರ್, ಎಂ.ಬಿ. ನಂದೀಶ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಕೆಜೆಪಿಯಿಂದ ದಿಲೀಪ್‌ಕುಮಾರ್, ಬೆಟ್ಟಸ್ವಾಮಿ, ಚಂದ್ರಶೇಖರ ಬಾಬು, ಸಾಗರನಹಳ್ಳಿ ನಟರಾಜ್ ಪ್ರಮುಖ ಆಕಾಂಕ್ಷಿಗಳು.

ಇಲ್ನೋಡ್ರಿ.. ಇದು ಮಧುಗಿರಿ
ಮಧುಗಿರಿ ಕ್ಷೇತ್ರದ ಹಾಲಿ ಶಾಸಕಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ. ಕ್ಷೇತ್ರ ಪುನರ್ ವಿಂಗಡಣೆ ನಂತರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತಿತವಾಗಿದೆ. 2008ರ ಚುನಾವಣೆಯಲ್ಲಿ ಮಾಜಿ ಸಚಿವ ಸಿ. ಚನ್ನಿಗಪ್ಪ ಅವರ ಪುತ್ರ ಗೌರಿಶಂಕರ್ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. 'ಆಪರೇಷನ್ ಕಮಲ'ಕ್ಕೆ ಬಲಿಯಾಗಿ ಬಿಜೆಪಿ ಸೇರಿದ ನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಈ ಬಾರಿ ಅನಿತಾ ಮಧುಗಿರಿಯಿಂದ ಸ್ಪರ್ಧಿಸುತ್ತಿಲ್ಲ. ಹೀಗಾಗಿ ವೀರಭದ್ರಯ್ಯ ಅವರ ಹೆಸರು ಜೆಡಿಎಸ್‌ನಿಂದ ಪ್ರಮುಖವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ಕೆ.ಎನ್. ರಾಜಣ್ಣ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತ. ಇಲ್ಲೂ ಕೂಡ ಬಿಜೆಪಿಗೆ ಯಾವುದೇ ಅಲೆ ಇಲ್ಲ. ಇನ್ನು ಕೆಜೆಪಿ ಈ ಕ್ಷೇತ್ರವನ್ನು ನೆಚ್ಚಿಕೊಂಡಿಲ್ಲ.

ಪಾವಗಡದಲ್ಲಿ 'ವೆಂಕಟ' ಇನ್ ಸಂಕಟ
ನಕ್ಸಲ್‌ಪೀಡಿತ ಪ್ರದೇಶ, ಸದಾ ಬರಗಾಲದ ಛಾಯೆ ಆವರಿಸಿರುವ ಪಾವಗಡ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗಲಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟರಮನಪ್ಪ ಗೆಲವಿನಿಂದ ಗಮನ ಸೆಳೆದಿತ್ತು. ಬಿಜೆಪಿಗೆ ಬೆಂಬಲ ನೀಡಿ, ಸಚಿವರಾಗಿ ಬಳಿಕ ಉಚ್ಚಾಟನೆಗೊಂಡು ಕೋರ್ಟ್‌ನಲ್ಲಿ ಗೆಲವು ಸಾಧಿಸಿದ ವೆಂಕಟರಮನಪ್ಪ ಈ ಬಾರಿ ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು ಕಾಂಗ್ರೆಸ್‌ನಿಂದ ತಮ್ಮ ಪುತ್ರ ವೆಂಕಟೇಶನಿಗೆ ಟಿಕೆಟ್ ಕೊಡಿಸುವ ಸಿದ್ಧತೆಯಲ್ಲಿದ್ದಾರೆ. ಜೆಡಿಎಸ್‌ನಿಂದ ತಿಮ್ಮರಾಯಪ್ಪ, ಬಿಜೆಪಿಯಿಂದ ಸೋಮ್ಲಾನಾಯಕ್ ಕಣಕ್ಕೆ ಇಳಿಯಲಿದ್ದಾರೆ. ಕುಡಿಯುವ ನೀರಿಗೂ ಇಲ್ಲಿ ತತ್ವಾರ. ಜತೆಗೆ ನಕ್ಸಲರ ಕಾಟ ಕೂಡ ಇದೆ. ಈ ಕ್ಷೇತ್ರಕ್ಕೆ ಕಾಲಿಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಬಂಗಾರಪ್ಪ ನಂತರ ಯಾವೊಬ್ಬ ಮುಖ್ಯಮಂತ್ರಿಯೂ ಇಲ್ಲಿಗೆ ಕಾಲಿಟ್ಟಿಲ್ಲ. ಆದರೆ ತಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ಕುಮಾರಸ್ವಾಮಿ ಬಂದಿದ್ದರು.

ತಿಪಟೂರಿನಲ್ಲಿ ಯಾರ ಕೈಗೆ ಚಿಪ್ಪು?
ಕಲ್ಪತರು ನಾಡೆಂದೇ ಖ್ಯಾತಗಳಿಸಿರುವ ತಿಪಟೂರು ಕ್ಷೇತ್ರ ವೀರಶೈವ ಜನಾಂಗದರೇ ದೊಡ್ಡ ಮಟ್ಟದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಗೇಶ್ ಕಾಂಗ್ರೆಸ್‌ನ ಕೆ. ಷಡಕ್ಷರಿ ಅವರನ್ನು ಪರಾಭವಗೊಳಿಸಿದ್ದರು. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ನಾಗೇಶ್ ಅವರೇ ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಎರಡು ಬಾರಿ ಸೋತಿರುವ ಕಾಂಗ್ರೆಸ್‌ನ ಕೆ. ಷಡಕ್ಷರಿ ಮತ್ತೊಮ್ಮೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಜೆಡಿಎಸ್‌ನಿಂದ ಮೈಲಾರಿ ಅವರ ಹೆಸರು ಚಾಲ್ತಿಯಲಿದ್ದೆ. ಕಡೆ ಗಳಿಗೆಯಲ್ಲಿ ಅದು ಏರುಪೇರಾಗುವ ಸಂಭವ ಇದೆ. ಕೆಜೆಪಿಯಿಂದ ಲೋಕೇಶ್ವರಪ್ಪ ಅವರು ಪ್ರಬಲ ಆಕಾಂಕ್ಷಿ. ಬಿಎಸ್‌ವೈ ಕಟ್ಟಾ ಬೆಂಬಲಿಗರಾಗಿರುವ ಲೋಕೇಶ್ವರಪ್ಪ ಪೊಲೀಸ್ ಹುದ್ದೆಗೆ ಗುಡ್‌ಬೈ ಹೇಳಿ ಪ್ರಚಾರ ಆರಂಭಿಸಿದ್ದಾರೆ.

ಕೊರಟಗೆರೆಗೆ ಯಾರು ದೊರೆ?
ಕೊರಟಗೆರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಪ್ರತಿನಿಧಿಸುವ ಮೀಸಲು ಕ್ಷೇತ್ರ. ಕ್ಷೇತ್ರ ಮರು ವಿಂಗಡನೆಗೂ ಮುನ್ನ ಇದು ಸಾಮಾನ್ಯ ಕ್ಷೇತ್ರವಾಗಿತ್ತು. ಹೀಗಾಗಿ ಪರಮೇಶ್ವರ ಮಧುಗಿರಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಕೊರಟಗೆರೆಯಲ್ಲಿ ಸಿ. ಚೆನ್ನಿಂಗಪ್ಪ ಪ್ರಾಬಲ್ಯ ಸಾಧಿಸಿದ್ದರು. ಈ ಬಾರಿಯೂ ಕಾಂಗ್ರೆಸ್‌ನಿಂದ ಪರಮೇಶ್ವರ ಕಣಕ್ಕಿಳಿಯಲಿದ್ದಾರೆ. ಮೇಲ್ನೋಟಕ್ಕೆ ಸುಧಾಕರ್‌ಲಾಲ್‌ಗೆ ಜೆಡಿಎಸ್‌ನಿಂದ ಟಿಕೆಟ್ ನೀಡುತ್ತಾರೆ ಎನ್ನಲಾದರೂ ವೈ.ಎಚ್. ಹುಚ್ಚಯ್ಯ, ನರಸೀಯಪ್ಪ ಸೇರಿದಂತೆ ಇತರರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಾಲೆಚಂದ್ರಯ್ಯ ಕೆಜೆಪಿಗೆ ಸೇರಿದ್ದು ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಬಿಜೆಪಿಯಿಂದ ಗಂಗಹನುಮಯ್ಯ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.

ನಗರ: ಜಯದ ಸೊಗಡು ಯಾರ್ಗೆ 'ಶಿವ'?
1994ರಿಂದ ಸತತ 4 ಬಾರಿ ಆಯ್ಕೆಯಾಗಿರುವ ಸೊಗಡು ಶಿವಣ್ಣ ಅವರೇ ಈ ಬಾರಿಯ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ರಫೀಕ್ ಅಹ್ಮದ್ ಸ್ಪರ್ಧಿಸುವ ಸಾಧ್ಯತೆ ಇದೆ. ಕೆಜೆಪಿಯಿಂದ ಸಂಸದ ಜಿ.ಎಸ್. ಬಸವರಾಜ್ ಅವರ ಮಗ ಜ್ಯೋತಿ ಗಣೇಶ್ ಸ್ಪರ್ಧಿಸಲಿದ್ದು, ಜೆಡಿಎಸ್‌ನಿಂದ ಜಿಲ್ಲಾಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ, ಕೆ.ಬಿ. ಬೋರೇಗೌಡ, ನರಸೇಗೌಡ, ವಿಜಯಪ್ರಕಾಶ್ ಮಿರ್ಜಿ, ಗೋವಿಂದರಾಜು ಹೆಸರುಗಳು ಚಾಲ್ತಿಯಲ್ಲಿವೆ. ಜೆಡಿಎಸ್‌ನಿಂದ ಕಳೆದ ಬಾರಿ ಜಹಂಗೀರ್ ರವಿ ಎಂಬುವರಿಗೆ ಟಿಕೆಟ್ ನೀಡಲಾಗಿತ್ತು. ಸುಮಾರು 25 ಸಾವಿರಕ್ಕೂ ಹೆಚ್ಚು ಮತ ಪಡೆಯುವಲ್ಲಿ ಮಾತ್ರ ಶಕ್ಯರಾಗಿದ್ದರು. ಜಿಪಂ ಕೂಡ ಜೆಡಿಎಸ್ ವಶದಲ್ಲಿದ್ದರೂ ನಗರ ಕ್ಷೇತ್ರಕ್ಕೆ ಬಂದರೆ ಸಾಧನೆ ಮಾತ್ರ ಶೂನ್ಯ.

ಗ್ರಾಮಾಂತರ: ಯಾರು ಗೌಡ್ರ?
ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಬಿ. ಸುರೇಶ್‌ಗೌಡ. ಈ ಬಾರಿಯೂ ಅವರೇ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಯಲಚವಾಡಿ ನಾಗರಾಜ್, ಎಚ್. ನಿಂಗಪ್ಪ, ರುದ್ರೇಶ್, ಹೆಬ್ಬಾಕ ರವಿ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಜೆಡಿಎಸ್‌ನಿಂದ ಮಾಜಿ ಸಚಿವ ಸಿ. ಚನ್ನಿಗಪ್ಪ ಅವರ ಪುತ್ರ ಗೌರಿಶಂಕರ್‌ಗೆ ಟಿಕೆಟ್ ನೀಡಲಾಗುವುದು ಎಂಬ ಸುದ್ದಿಯಿದೆ. ಮಾಜಿ ಶಾಸಕ ಎಚ್. ನಿಂಗಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರೆ ಕೆಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹವಣಿಕೆಯಲ್ಲಿದೆ. ಒಕ್ಕಲಿಗ ಜನಾಂಗ ದೊಡ್ಡ ಸಂಖ್ಯೆಯಲ್ಲಿ ಇದೆ. ಉಳಿದಂತೆ ವೀರಶೈವರು, ಪರಿಶಿಷ್ಟರು, ಮುಸ್ಲಿಂ ಸಮುದಾಯದವರು ಕೂಡ ದೊಡ್ಡ ಪ್ರಮಾಣದಲ್ಲಿದ್ದಾರೆ.

ಯಾರ ಬಾಯಿಗೆ ಬೀಳುತ್ತೆ 'ಶಿರಾ'?
'ಬರ'ವಲನ್ನೇ 'ವರ'ವನ್ನಾಗಿಸಿಕೊಂಡಿರುವ ಶಿರಾ ಕ್ಷೇತ್ರ ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎರ್ಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕಳೆದ ಬಾರಿ ಹಾಲಿ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ ಅವರು ಜೆಡಿಎಸ್‌ನ ಬಿ. ಸತ್ಯನಾರಾಯಣ್ ಅವರನ್ನು ಸೋಲಿಸಿದ್ದರು. ಈ ಮೊದಲು ಜಯಚಂದ್ರ ಕಳ್ಳಂಬೆಳ್ಳ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಕ್ಷೇತ್ರ ಪುನರ್ ವಿಂಗಡಣೆ ನಂತರ ಆ ಕ್ಷೇತ್ರ ಮಾಯವಾದ ಬಳಿಕ ಶಿರಾ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಈ ಬಾರಿಯೂ ಅವರೇ ಹುರಿಯಾಳು. ಜೆಡಿಎಸ್‌ನಿಂದ ಕೂಡ ಸತ್ಯನಾರಾಯಣ್ ಅವರೇ ಸ್ಪರ್ಧಿಸಲಿದ್ದಾರೆ. ಕೆಜೆಪಿ, ಬಿಜೆಪಿ ಪ್ರಭಾವ ಅಷ್ಟಕ್ಕಷ್ಟೆ.

ತುರುವೇಕೆರೆಯಲ್ಲಿ ಈಜುವವರಾರು?
ತುರುವೇಕೆರೆ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ. ಈ ಬಾರಿಯೂ ಅವರೇ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಜಗ್ಗೇಶ 'ಆಪರೇಷನ್ ಕಮಲ'ದಿಂದ ಬಿಜೆಪಿ ಸೇರಿದ ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಡಿ. ಲಕ್ಷ್ಮಿನಾರಾಯಣ ಸೋತಿದ್ದರು. ಕಾಂಗ್ರೆಸ್‌ನಲ್ಲಿ ಎಚ್.ಬಿ. ನಂಜೇಗೌಡ, ಚೌದ್ರಿ ರಂಗಪ್ಪ, ಬಿ.ಎಸ್. ವಸಂತುಮಾರ್, ಗೀತಾ ರಾಜಣ್ಣ, ಗೋವಿಂದರಾಜಗೌಡ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಕೆಜೆಪಿಯಿಂದ ಮಸಾಲೆ ಜಯರಾಂ, ನಿರ್ಮಾಪಕ ಕೆ.ಮಂಜು, ಲಕ್ಷ್ಮೀನಾರಾಯಣ್ ಅವರ ಸಹೋದರ ಎಂ.ಡಿ. ಮೂರ್ತಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಬೋರೇಗೌಡ, ರವಿ ಟಿಕೆಟ್ ಕೇಳುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ದೊಡ್ಡ ನಾಯಕ ಯಾರು?
ಗಣಿ ಸದ್ದಿನ ಜತೆಗೆ ಕಂಬಳಿ ಉದ್ಯಮಕ್ಕೆ ಪ್ರಸಿದ್ಧಿಯಾಗಿರುವ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 'ನಾಯಕ' ಯಾರು ಎಂಬುದೇ ಕುತೂಹಲ. ಕಳೆದ ಬಾರಿ ಜೆಡಿಎಸ್‌ನ ಸುರೇಶಬಾಬು ಜಯಗಳಿಸಿದ್ದರು. ಈ ಬಾರಿಯೂ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಕಿರಣ್‌ಕುಮಾರ್, ಕೆಜೆಪಿಯಿಂದ ಮಾಜಿ ಶಾಸಕ ಮಾಧುಸ್ವಾಮಿ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನಿಂದ ಶಿರಾ ಶಾಸಕ ಟಿ.ಬಿ. ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಹಾಗೂ ಕೆ.ಎನ್. ರಾಜಣ್ಣ ಪುತ್ರ ರಾಜೇಂದ್ರ ರಾಜಣ್ಣ, ಕ್ಯಾಪ್ಟನ್ ಸೋಮಶೇಖರ್, ಧನಂಜಯಕುಮಾರ್ ಸೇರಿ 21 ಮಂದಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಕಾಂಗ್ರೆಸ್‌ನಿಂದ ಸತತವಾಗಿ ಎರಡು ಬಾರಿ ಮಾಜಿ ಸಚಿವ ಬಸವಯ್ಯ ಆಯ್ಕೆಯಾಗಿದ್ದು ಬಿಟ್ಟರೆ ಈವರೆಗೆ ಈ ಕ್ಷೇತ್ರದಲ್ಲಿ ಯಾರೊಬ್ಬರು ಸತತವಾಗಿ ಆಯ್ಕೆಯಾಗಿಲ್ಲ. ಮತ್ತೊಂದು ವಿಪರ್ಯಾಸವೆಂದರೆ ಈ ಕ್ಷೇತ್ರದಿಂದ ಗೆದ್ದ ಅಭ್ಯರ್ಥಿಯ ಪಕ್ಷ ರಾಜ್ಯದಲ್ಲಿ ಇದುವರೆಗೆ ಅಧಿಕಾರಕ್ಕೆ ಬಂದಿಲ್ಲ.

ಕುಣಿಗಲ್‌ನಲ್ಲಿ ಕುಣಿತದ ಮೋಡಿ ಯಾರದು?
ಕಳೆದ ಚುನಾವಣೆಯಲ್ಲಿ ಸಹೋದರರ ಸವಾಲಿಗೆ (ಬಿಜೆಪಿಯಿಂದ ನಾಗರಾಜಯ್ಯ, ಜೆಡಿಎಸ್‌ನಿಂದ ಕೃಷ್ಣಕುಮಾರ್) ಕುಣಿಗಲ್ ಕ್ಷೇತ್ರ ವೇದಿಕೆಯಾಗಿತ್ತು. ಹಾಲಿ ಶಾಸಕ ಕಾಂಗ್ರೆಸ್‌ನ ಬಿ.ಬಿ. ರಾಮಸ್ವಾಮಿಗೌಡ. ಈ ಬಾರಿಯೂ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಲ್ಲದೇ ರವಿಕಿರಣ್ ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ನಲ್ಲಿ ಮಾಜಿ ಸಚಿವ ಡಿ. ನಾಗರಾಜಯ್ಯ ಪ್ರಬಲ ಟಿಕೆಟ್ ಆಕಾಂಕ್ಷಿ. ಉಳಿದಂತೆ ಮಾಜಿ ಶಾಸಕರಾದ ಮುದ್ದಹನುಮೇಗೌಡ ಹಾಗೂ ವೈ.ಕೆ. ರಾಮಯ್ಯ ಅವರ ಪತ್ನಿ ಅನುಸೂಯ ವೈ.ಕೆ. ರಾಮಯ್ಯ ಕೂಡ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಡಿ. ನಾಗರಾಜಯ್ಯ ಅವರ ಸಹೋದರ ಕೃಷ್ಣಕುಮಾರ್ ಕಣಕ್ಕಿಳಿಯಲು ಹವಣಿಸುತ್ತಿದ್ದಾರೆ. ಟಿಕೆಟ್ ಇನ್ನೂ ಪಕ್ಕಾ ಆಗಿಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ ಸೇರಿದ್ದರಿಂದ ಈ ಕ್ಷೇತ್ರದ ಸಂಸದ ಎಚ್.ಡಿ. ಕುಮಾರಸ್ವಾಮಿ ಸ್ವಲ್ಪ ಮಟ್ಟಿನ ಹಿಡಿತ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.