ಚುನಾವಣಾ ಆಯೋಗದಿಂದ ಪಕ್ಷಾಭಿಪ್ರಾಯ ಸಂಗ್ರಹಣೆ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಕ್ರಿಯೆ ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಜತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್, ಆಯುಕ್ತರಾದ ಎಚ್.ಎಸ್.ಬ್ರಹ್ಮ, ಸೈಯದ್ ಅಹ್ಮದ್ ಜತೆ ಬೆಂಗಳೂರಿಗೆ ಆಗಮಿಸಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎನ್ಸಿಪಿ, ಸಮಾಜವಾದಿ, ಕಮ್ಯುನಿಸ್ಟ್ ಸೇರಿದಂತೆ ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಂದ ಅಭಿಪ್ರಾಯ ಪಡೆದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಪೊಲೀಸ್ ಮಹಾನಿರ್ದೇಶಕ ಲಾಲ್ ರುಕಾಂ ಪಚಾವೋ, ವಿವಿಧ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚುನಾವಣಾ ಆಯೋಗ ಶನಿವಾರ ಸಭೆ ನಡೆಸಲಿದೆ. ಬಿಜೆಪಿಯಿಂದ 12, ಕಾಂಗ್ರೆಸ್ನಿಂದ 9 ಹಾಗೂ ಜೆಡಿಎಸ್ನಿಂದ 1 ಪ್ರಮುಖ ಸಲಹೆಯನ್ನು ಸಭೆಯಲ್ಲಿ ನೀಡಲಾಗಿದೆ.
ಪಕ್ಷವಾರು ಅಭಿಮತ ಹೀಗಿದೆ... ಬಿಜೆಪಿ: ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು 40ಕ್ಕೆ ಸೀಮಿತಗೊಳಿಸಿರುವುದು ಸರಿ ಅಲ್ಲ. ಕನಿಷ್ಠ 80 ಜನರ ಅವಶ್ಯಕತೆ ಇದೆ. ಜತೆಗೆ ಚುನಾವಣಾ ವೆಚ್ಚದ ಮೇಲೆ ವಿಧಿಸಿರುವ ನಿರ್ಬಂಧವನ್ನು ತುಸು ಸಡಿಲಿಸಬೇಕು. ಚುನಾವಣೆ ಹಬ್ಬದ ವಾತಾವರಣದಲ್ಲಿ ನಡೆಯಬೇಕು. ಹಣ ಹಾಗೂ ತೋಳ್ಬಲದ ವಿರುದ್ಧ ತುರ್ತು ಕ್ರಮ ತೆಗೆದುಕೊಳ್ಳಬೇಕು. ಜತೆಗೆ ಪಕ್ಷದ ಧ್ವಜವನ್ನು ಕಾರ್ಯಕರ್ತರ ಮನೆಗಳಲ್ಲಿ ಹಾಕಿಕೊಳ್ಳುವುದಕ್ಕೂ ಅವಕಾಶ ನೀಡಬೇಕು.
ಕಾಂಗ್ರೆಸ್: ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ನೇತೃತ್ವದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ, ಮತಗಟ್ಟೆಗಳಲ್ಲಿ ಏಜೆಂಟರ ಹಾವಳಿ ತಡೆಯುವುದಕ್ಕೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ. ಏಜೆಂಟರ ಬದಲು ಆಯೋಗದಿಂದಲೇ ಒಂದು ದಿನ ಮುಂಚಿತವಾಗಿ ಮತದಾರರ ಸಂಖ್ಯೆ ವಿತರಣೆ ಮಾಡುವಂತೆ ಸಲಹೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದೆ.
ಜೆಡಿಎಸ್: ಕಳೆದ ಚುನಾವಣೆ ಸಂದರ್ಭದಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಖರೀದಿಸಿದ್ದರು. ಆದರೆ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. ಇಂಥ ದೂರುಗಳು ಬಂದಾಗ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

