ಉರಿ ಬಿಸಿಲಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತಭಿಕ್ಷೆ
ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದಿಂದ ಕಣದಲ್ಲಿರುವ 45(ಒಟ್ಟು ಸ್ಥಾನ 55) ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆಂದು ಭಾನುವಾರ ಗುಲ್ಬರ್ಗಕ್ಕೆ...
ಕ.ಪ್ರ. ವಾರ್ತೆ ಗುಲ್ಬರ್ಗ ಮಾ. 3
ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದಿಂದ ಕಣದಲ್ಲಿರುವ 45(ಒಟ್ಟು ಸ್ಥಾನ 55) ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆಂದು ಭಾನುವಾರ ಗುಲ್ಬರ್ಗಕ್ಕೆ ಆಮಿಸಿದ್ದ ಸಿಎಂ ಜಗದೀಶ ಶೆಟ್ಟರ್ ಮುಖ್ಯರಸ್ತೆಯಲ್ಲಿ ನಡೆಸಿದ ತೆರೆದ ಜೀಪಿನ ರ್ಯಾಲಿಗೆ ದೊರಕಿದ ಜನಸ್ಪಂದನೆ ಅಷ್ಟಕ್ಕಷ್ಟೆ.
ಏಕೆಂದರೆ- ರ್ಯಾಲಿ ನಡೆದ ದಿನ ಬಾನುವಾರ. ಮುಖ್ಯರಸ್ತೆಯಲ್ಲಿನ ಮಳಿಗೆ- ಮುಂಗಟ್ಟುಗಳೇ ಅಧಿಕ. ವಾರದ ರಜೆ ಇರುವುದರಂದ ರ್ಯಾಲಿ ಸಮಯದಲ್ಲಿ ಮಳಿಗೆಗಳೆಲ್ಲವೂ ಶೆಟರ್ ಎಳೆಯಲ್ಪಟ್ಟಿದ್ದವು. ತೆರೆದ ಜೀಪಿನಲ್ಲಿ ರೇವು ನಾಯಕ ಬೆಳಮಗಿ, ಎಂಎಲ್ಸಿ ಶಶಿಲ್ ನಮೋಶಿ, ಅಮರನಾಥ ಪಾಟೀಲ್, ರಘುನಾಥ ಮಲ್ಕಾಪುರ, ಕೆ.ಬಿ. ಶಾಣಪ್ಪ, ವಿದ್ಯಾಸಾಗರ ಶಾಬಾದಿ, ವಿದ್ಯಾಸಾಗರ ಕುಲ್ಕರ್ಣಿ, ಮಹಾಂತಗೌಡ ಪಾಟೀಲ್ ಮೊದಲಾದ ಸ್ಥಳೀಯ ಬಿಜೆಪಿ ನಾಯಕರೊಟ್ಟಿಗೆ ಸಿಎಂ ಶೆಟ್ಟರ್ ಕೈ ಬೀಸುತ್ತ ಪಕ್ಷದ ಪರ ಮತಯಾಚಿಸಿದರೂ ಪ್ರತಿಯಾಗಿ ಜನರಿಂದ ಕೂಗು, ಕೇಕೆಯ ಯಾವ ಸ್ಪಂದನೆಯೂ ಕೇಳಿಬರಲಿಲ್ಲ. ಆದಾಗ್ಯೂ ಜೀಪ್ ರ್ಯಾಲಿ ಆಗಿದ್ದ ಕಾರಣ ನಾಯಕಮಣಿಗಳು ತಾವು ಕೈ ಬೀಸಿದ್ದಕ್ಕೆ ಪ್ರತಿಯಾಗಿ ಯಾರಾದರೂ ಕೈ ಮಾಡಲಿ, ಬಿಡಲಿ ತಾವಂತೂ ಸರ್ದಾರ್ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್ ಸಾರ್ವಜನಿಕ ಸಭಾಂಗಣದವರೆಗೂ ಕೈ ಬೀಸುತ್ತಲೇ ಸಾಗಿದರು.
ತೆರೆದ ಜೀಪಿನ ಮುಂದೆ ಮಹಿಳಾ ಮೋರ್ಚಾ ಕಾರ್ಯಕರ್ತೆಯರ ಗುಂಪು, ಜೊತೆಗೇ ಕಣದಲ್ಲಿರುವ 45 ಅಭ್ಯರ್ಥಿಗಳ ಸಾಲು. ಬೆಳಗ್ಗೆಯಿಂದಲೇ ಆರಂಭವಾದ ಬಿಸಿಲ ಉಪಟಳಕ್ಕೆ ಶೆಟ್ಟರ್ ಬೆವರಿದ್ದರು. ಮತಯಾಚನೆಯಿಂದ ಅದೆಷ್ಟು ಪ್ರತಿಫಲ ದೊರಕುವುದೋ.. ಆದರೆ ರ್ಯಾಲಿ ಮಾತ್ರ ಶೆಟ್ಟರ್ ಬೆವರಳಿಸಿತ್ತು.
ತರಾತುರಿಯಲ್ಲಿ ಸಭೆ ಮುಕ್ತಾಯ: ಸೂಪರ್ ಮಾರ್ಕೆಟ್ ಪ್ರದೇಶದಲ್ಲಿನ ವಿಶಾಲ ಮೈದಾನದಲ್ಲಿ ಸಾರ್ವಜನಿಕ ಸಭೆ ವ್ಯವಸ್ಥೆಯಾಗಿತ್ತು. ಇಲ್ಲಿಯೂ ಸಭಿಕರ ಕೊರತೆ ಎದ್ದು ಕಂಡಿತು. ಇದನ್ನೆಲ್ಲ ಪರಿಗಣಿಸುವ ಗೋಜಿಗೆ ಹೋಗದೆ ಸಂಘಟಕರು ಸಿಎಂ ಶೆಟ್ಟರ್ ಸಭೆ ಆರಂಭಿಸಿಯೇ ಬಿಟ್ಟರು. ಮುಂದೆ ಬೀದರ್ ಪ್ರವಾಸವಿದ್ದ ಕಾರಣ ಶೆಟ್ಟರ್ ಆತುರದಲ್ಲೇ ಮಾತನಾಡಿ ಭಾಷಣ ಮುಗಿಸಿದರು. ಜೊತೆಗಾರ ನಾಯಕರಲ್ಲಿ ಮಾತನಾಡಿದವರು ಅಷ್ಟಕ್ಕಷ್ಟೆ. ಭಾನುವಾರವಾದ್ದರಿಂದ ಪಕ್ಷದ ಕಾರ್ಯಕರ್ತರು, ಮಹಿಳಾ ಮೋರ್ಚಾ ಪದಾಧಿಕಾರಿಗಳೇ ಸಭಾಂಗಣದಲ್ಲಿ ಕಂಡರೇ ಹೊರತು ಸಭಿಕರು, ಸಾಮಾನ್ಯ ಜನತೆ ಸಿಎಂ ಶೆಟ್ಟರ್, ಜೊತೆಗಾರ ನಾಯಕರ ಮಾತುಗಳನ್ನಾಲಿಸಲು ಸಭಾಂಗಣಕ್ಕೆ ನಿರೀಕ್ಷಿಸಿದಷ್ಟು ಬಂದಿರಲಿಲ್ಲ.
ಜನ ಮೆಚ್ಚಿದ ಸರ್ಕಾರ: ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸಿ ನೀಡಿರುವ ಯೋಜನೆಗಳೇ ಈ ಚುನಾವಣೆಯಲ್ಲಿ ಪಕ್ಷದ ಗೆಲವಿಗೆ ಶ್ರೀರಕ್ಷೆ ಎಂದು ಶೆಟ್ಟರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

