ಬಿಜೆಪಿ, ಕೈಗೆ ಅಧಿಕಾರ ಮರೀಚಿಕೆ: ಎಚ್ಡಿಕೆ
ಕ.ಪ್ರ ವಾರ್ತೆ ಹೆಬ್ಬಗೋಡಿ ಮಾ.21-
ರಾಜ್ಯ ಲೂಟಿ ಮಾಡಿದ ಬಿಜೆಪಿ ಸರ್ಕಾರ, ಅಂತೆಯೇ ಕೇಂದ್ರದಲ್ಲಿ ಹಗರಣಗಳ ಸರಮಾಲೆಯನ್ನೆ ಹೊದ್ದಿರುವ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಜೆಡಿಎಸ್ನ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿನ ಅಭಿವೃದ್ಧಿಪರ ಕಾರ್ಯಗಳು ಬಡವರ ಪರವಾಗಿಯೇ ಇದ್ದವು. ಈ ಎಲ್ಲ ವಿಚಾರಗಳನ್ನು ಮತದಾರರು ಗಮನದಲ್ಲಿಟ್ಟುಕೊಂಡು ಮತ ನೀಡಬೇಕಾಗಿದೆ. ಕುಕ್ಕರ್, ವಾಚ್, ಸೀರೆಗಳನ್ನು ಹಂಚುತ್ತಾ ಮತ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದು, ಚುನಾವಣೆ ಸಮೀಪಿಸಿದ್ದರಿಂದಲೇ ರಾಜ್ಯ ಸರ್ಕಾರ ಬಡವರಿಗೆ 2ಕ್ಕೆ ಅಕ್ಕಿ ವಿತರಣೆ ಮಾಡುವ ಆಶ್ವಾಸನೆ ನೀಡಿದೆಯೆಂದರು.
ಅಲ್ಪಸಂಖ್ಯಾತರ ವಿಚಾರದಲ್ಲಿ ಕಾಂಗ್ರೆಸ್ ಮಾತ್ರ ಅಭಿವೃದ್ಧಿಪರ ಚಿಂತನೆ ಹೊಂದಿದೆ ಎಂಬ ಧೋರಣೆ ಒಪ್ಪಲು ಸಾಧ್ಯವಿಲ್ಲ. ಜೆಡಿಎಸ್ ಅಲ್ಪಸಂಖ್ಯಾತರಿಗೆ ನೀಡಿರುವ ಅವಕಾಶಗಳನ್ನು ಮತದಾರರು ನೆನಪಿನಲ್ಲಿಡಬೇಕಿದ್ದು, ಕಾಂಗ್ರೆಸ್ನ ಕಪಟತನ ಅರಿಯಬೇಕಿದೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗಾಗಿ ವಿಶೇಷ ಯೋಜನೆಗಳನ್ನು ತರುವ ಬಗ್ಗೆ ಸಾಕಷ್ಟು ಚಿಂತನೆಗಳನ್ನು ನಡೆಸಿದ್ದು, ಈ ಮೊದಲು ನೀಡಿದ್ದ 400 ಮಸಾಶನವನ್ನು 1500ಕ್ಕೆ ಹೆಚ್ಚಿಸುವ, ಬಡ ಯುವಕರಿಗೆ ಸ್ವ ಉದ್ಯೋಗಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಬೊಮ್ಮನಹಳ್ಳಿಯ ಜೆಡಿಎಸ್ ಅಭ್ಯರ್ಥಿ ಆರ್. ಶರಶ್ಚಂದ್ರ, ಆರ್. ನಾರಾಯಣರಾವ್ , ಜೆಡಿಎಸ್ ಮುಖಂಡರು ಪಾಲ್ಗೊಂಡಿದ್ದರು.
ಶರಶ್ಚಂದ್ರ ಅಭ್ಯರ್ಥಿ: ಇದೇ ವೇಳೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶರಶ್ಚಂದ್ರ ಆಯ್ಕೆಯಾಗಿರುವುದಾಗಿ ಕುಮಾರಸ್ವಾಮಿ ತಿಳಿಸಿದರು. ಇನ್ನೆರಡು, ಮೂರು ದಿನಗಳಲ್ಲಿ ರಾಜ್ಯದ 224 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

