ರಾಜಕೀಯ

ಮೈಸೂರಲ್ಲಿ ಬಿಜೆಪಿ, ನಂಜನಗೂಡಲ್ಲಿ ಕೆಜೆಪಿ ಕಹಳೆ

Published On :

ಕ.ಪ್ರ. ವಾರ್ತೆ ಮೈಸೂರು ಮಾ.22
ರಾಜ್ಯ ವಿಧಾನಸಭಾ ಚುನಾವಣಾ ರಣಕಹಳೆ ಮೊಳಗುತ್ತಿದ್ದಂತೆಯೇ ಜಿದ್ದಾಜಿದ್ದಿಗೆ ಬಿದ್ದಿರುವ ಆಡಳಿತಾರೂಢ ಬಿಜೆಪಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಮುಖಂಡರು ಶುಕ್ರವಾರ ಮೈಸೂರಿನಿಂದಲೇ ಅಧಿಕೃತವಾಗಿ ಪ್ರಚಾರ ಆರಂಭಿಸಿದರು.
ಶಕ್ತಿ ದೇವತೆಯಾದ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ'ಗೆ ಚಾಲನೆ ನೀಡಿದರೆ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಂಜನಗೂಡಿನ ಶ್ರೀಕಂಂಠೇಶ್ವರನಿಗೆ ಶುಕ್ರವಾರ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನ ಬಿಜೆಪಿ ಪಾಲಿಗೆ ವೇದಿಕೆಯಾದರೆ, ಕೆಜೆಪಿಗೆ ರಾಜೇಂದ್ರ ಕಲಾಮಂದಿರ ವಾಗ್ದಾಳಿಯ ವೇದಿಕೆಯಾಯಿತು. ಮಹಾರಾಜ ಕಾಲೇಜು ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ ಮಾತನಾಡಿ, ಬಿಜೆಪಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದು ಹೊಸ ಜೈತ್ರಯಾತ್ರೆಗೆ ಹೊರಟಿದೆ. ತೇತ್ರಾಯುಗದಲ್ಲಿ ಶ್ರೀರಾಮ ಅಶ್ವಮೇಧ ಯಾಗ ನಡೆಸಿದಂತೆ ಇಂದು ನಾವು ನಡೆಸುತ್ತಿದ್ದೇವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಕತ್ತಿದ್ದರೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಕುದುರೆ ಕಟ್ಟಿ ಹಾಕಲಿ. ಕಾಂಗ್ರೆಸ್ ನಾಯಕರು ಗರಿಗರಿ ಸೂಟು ಹೊಲಿಸಿಕೊಂಡು ಅಧಿಕಾರದ ಕನಸು ಕಾಣುತ್ತಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಗೊಂದಲವಿಲ್ಲ. ಆದ್ದರಿಂದ ಶೆಟ್ಟರ್ ಅವರನ್ನು ನಾಯಕರಾಗಿ ಸ್ವೀಕರಿಸಿದ್ದೇವೆ. ಆದರೆ ಕಾಂಗ್ರೆಸ್‌ನಲ್ಲಿ ನಾಯಕರು ಯಾರು ಎಂಬುದೇ ಗೊತ್ತಿಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ಕಾಂಗ್ರೆಸ್ ಮತ್ತು ಕೆಜೆಪಿ ಬಿಜೆಪಿಯನ್ನು ಎದುರಿಸಲು ಒಳ ಒಪ್ಪಂದ ಮಾಡಿಕೊಂಡಿವೆ. ಇನ್ನು ಜೆಡಿಎಸ್ ಕೆಲವೊಮ್ಮೆ ಒಪ್ಪಂದವನ್ನು ಆನ್ ಮಾಡಿದರೆ, ಮತ್ತೊಮ್ಮೆ ಆಫ್ ಮಾಡುತ್ತದೆ. ಸಿದ್ದರಾಮಯ್ಯ ಸೋಲಿಸುವ ಸವಾಲು ನಮ್ಮದು. ಏಕೆಂದರೆ ನಮ್ಮ ತಂಡದ ನಾಯಕ ಸಿದ್ದರಾಗಿದ್ದಾರೆ. ಆದರೆ ಕಾಂಗ್ರೆಸ್ ತಂಡದಲ್ಲಿ ಮ್ಯಾಚ್ ಆದ ಬಳಿಕ ನಾಯಕನನ್ನು ಆರಿಸುತ್ತೇವೆ ಎನ್ನುತ್ತಾರೆ ಎಂದರು.
ಬಿಎಸ್‌ವೈ ಹಿಂದೆ ಕಾಂಗ್ರೆಸ್ ಕುತಂತ್ರ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಯಡಿಯೂರಪ್ಪ ಅವರು ಬಿಜೆಪಿ ತ್ಯಜಿಸಿ, ಕೆಜೆಪಿ ಸ್ಥಾಪಿಸಲು ಕಾಂಗ್ರೆಸ್‌ನ ಬ್ಲಾಕ್‌ಮೇಲ್ ಕಾರಣ. ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಸಿಬಿಐ ಮೂಲಕ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿ ಕಾಂಗ್ರೆಸ್‌ನವರು ಯಡಿಯೂರಪ್ಪ ಕೆಜೆಪಿ ಸ್ಥಾಪಿಸುವಂತೆ ನೋಡಿಕೊಂಡಿದ್ದಾರೆ. ಇಂಥ ಕುತಂತ್ರ ರಾಜಕಾರಣಕ್ಕೆ ಜನತೆ ಉತ್ತರಿಸಬೇಕು. ಅಲ್ಲದೆ ಕಾಂಗ್ರೆಸ್ ಮತ್ತು ಕೆಜೆಪಿ ಒಳ ಒಪ್ಪಂದ ಮಾಡಿಕೊಂಡು ಒಬ್ಬರಿಗೊಬ್ಬರು ಆರೋಪಿಸುವುದನ್ನು ನಿಲ್ಲಿಸಿದ್ದಾರೆ. ನಾವು ಗೆಲ್ಲದಿದ್ದರೂ ಪರವಾಗಿಲ್ಲ ಬಿಜೆಪಿ ಗೆಲ್ಲಬಾರದು ಎಂಬುದು ಯಡಿಯೂರಪ್ಪ ಅವರ ವರ್ತನೆ ಎಂದರು.
ಈಗಾಗಲೇ ಬಿಜೆಪಿಯಲ್ಲಿ ಸ್ವಾರ್ಥಿಗಳಿಗೆ ಟಿಕೆಟ್ ನೀಡಿ ಅನುಭವಿಸಿದ್ದೇವೆ. ಆದ್ದರಿಂದ ಈ ಬಾರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಲಾಗುವುದು. ಕಾಂಗ್ರೆಸ್ ಮುಖಂಡರಲ್ಲಿ ಜಾತಿ ಯೋಚನೆ ಬಿಟ್ಟರೆ ಬೇರೆ ವಿಷಯಕ್ಕೆ ಜಾಗವೆ ಇಲ್ಲ. ಪ್ರಹ್ಲಾದ್ ಜೋಶಿ ಬ್ರಾಹ್ಮಣ, ಶೆಟ್ಟರ್ ಲಿಂಗಾಯಿತ ಎಂದು ಜಾತಿ ಲೆಕ್ಕಾಚಾರ ಹಾಕುತ್ತಾರೆ. ಅಂಥವರಿಂದ ಏನು ತಾನೆ ನಿರೀಕ್ಷಿಸಲು ಸಾಧ್ಯ ಎಂದರು.

ಮನೆಮುರುಕ ಬುದ್ಧಿ ಈಶ್ವರಪ್ಪಗೆ ಮಾತ್ರ
ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಬೆನ್ನಿಗೆ ಚೂರಿ ಹಾಕುವ ಬುದ್ಧಿ ನನಗಿಲ್ಲ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಮನೆ ಮುರುಕ ಬುದ್ಧಿ ಈಶ್ವರಪ್ಪನಿಗೆ ಮಾತ್ರ ಬರುತ್ತದೆ. ನನಗಲ್ಲ. ಕೆಜೆಪಿ ನೆಲ, ಜಲ, ಭಾಷೆಗಾಗಿ ಸ್ಥಾಪಿತವಾದ ಪಕ್ಷ. ಮುಂದಿನ ದಿನಗಳಲ್ಲಿ ಬಿಜೆಪಿ 40 ಕ್ಷೇತ್ರದಲ್ಲಿ ಜಯಗಳಿಸುವುದು ಕಷ್ಟದ ಕೆಲಸ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.