ಈಗ ದಲಿತ ಡಿಸಿಎಂ ಚರ್ಚೆ

ಪ್ರದೇಶ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹುದ್ದೆ ವಿಚಾರ ಪ್ರಸ್ತಾಪವಾಗಿ ವಾಕ್ಸಮರಕ್ಕೆ...
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ
Updated on: 

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹುದ್ದೆ ವಿಚಾರ ಪ್ರಸ್ತಾಪವಾಗಿ ವಾಕ್ಸಮರಕ್ಕೆ ಕಾರಣವಾಯಿತು. ಮಾತ್ರವಲ್ಲ ಕಾರ್ಯಕರ್ತರ ನಡುವೆ ಚರ್ಚೆ, ಆಕ್ಷೇಪಕ್ಕೆ ಸಮಾರಂಭ ಸಾಕ್ಷಿ ಯಾಯಿತು.

ಇದರೊಂದಿಗೆ ಕಳೆದ ಕೆಲ ದಿನಗಳಿಂದ ಸ್ಥಬ್ದವಾಗಿದ್ದ ದಲಿತ ಸಿಎಂ-ಡಿಸಿಎಂ ವಿಚಾರ ಮತ್ತೊಮ್ಮೆ ಜೀವ ತಳೆದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರಗೆ ಡಿಸಿಎಂ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡುವುದಾಗಿ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ಹೇಳಿದ್ದು ವಾಗ್ಯುದ್ಧಕ್ಕೆ ವೇದಿಕೆಯಾಯಿತು. ಇದನ್ನು ಆಕ್ಷೇಪಿಸಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, `ಪರಮೇಶ್ವರಗೆ ಡಿಸಿಎಂ ಹುದ್ದೆ ಕೊಡುವ ಬಗ್ಗೆ ಬಹಿರಂಗ ಚರ್ಚೆ ಬೇಡ' ಎಂದರು. ಇದಕ್ಕೆ ಕೆಲ ಕಾರ್ಯಕರ್ತರಿಂದ ವಿರೋಧವೂ ವ್ಯಕ್ತವಾಯಿತು.

ರಾಜಶೇಖರನ್ ವಾದ
ಅಂಬೇಡ್ಕರ್ ಪ್ರತಿಪಾದಿಸಿದ ಅಸ್ಪೃಶ್ಯತೆ ನಿವಾರಣೆ ಮಾತಿಗೆ ಸೀಮಿತವಾಗಬಾರದು. ಅದೇ ರೀತಿ ದಲಿತರಿಗೆ ಅಧಿಕಾರದ ವಿಚಾರವನ್ನೂ ಭಾಷಣಕ್ಕೆ ಮಿತಿಗೊಳಿಸಬಾರದು. ಪರಮೇಶ್ವರ ಅವರಿಗೆ ಅಧಿಕಾರ ಕೊಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಅವರ ಶ್ರಮವಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಇದನ್ನು ಗುರುತಿಸಿ ಅಧಿಕಾರ ನೀಡಲೇಬೇಕು. ಪರಮೇಶ್ವರ ಕೇವಲ ಜ್ಞಾನಿಯಲ್ಲ, ವಿಜ್ಞಾನಿ. ಅವರಿಗೆ ಡಿಸಿಎಂ ಸ್ಥಾನ ನೀಡದೇ ಇದ್ದರೆ ತಪ್ಪು ಸಂದೇಶ ರವಾನೆಯಾಗುವುದರ ಜತೆಗೆ, ಅಭಿವೃದ್ಧಿ ಕುಂಠಿತವಾಗುತ್ತದೆ.

ಕಾರ್ಯಕರ್ತರ ಆಕ್ಷೇಪ
ಆಂಜನೇಯ ಹೀಗೆ ಮಾತನಾಡುವುದು ಸರಿಯಲ್ಲ. ಪರಮೇಶ್ವರ ಅವರಿಗೆ ಅಧಿಕಾರ ಸಿಕ್ಕರೆ ನಿಮಗೇನು ಸಂಕಟ? ಇದರ ಬದಲು ಸಿದ್ದರಾಮಯ್ಯ ಬಳಿ ಹೋಗಲಿ ಎಂದು ಕೆಲವರು ಆಕ್ಷೇಪಿಸಿದರು.

ಸಚಿವರ ತಿರುಗೇಟು
ಪರಮೇಶ್ವರ ಅವರನ್ನು ಡಿಸಿಎಂ ಮಾಡುವುದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ಯಾರಿಗೆ ಯಾವ ಅಧಿಕಾರ ನೀಡಬೇಕೆಂಬುದನ್ನು ಹೈಕಮಾಂಡ್ ತೀರ್ಮಾನದ ಪ್ರಕಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಇದನ್ನು ಹೀಗೆ ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ. ಈ ರೀತಿ ಮಾತ ನಾಡುವುದು ದಲಿತರಿಗೆ ಮಾಡುವ ಅವಮಾನ. ನಮ್ಮನಮ್ಮಲ್ಲೇ ಜಗಳವಾಡುವುದು ಬೇಡ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com