

ಬೆಂಗಳೂರು: ಲಿಂಗಾಯತ ವೀರಶೈವ ಸಮಾಜದ ವಿರುದ್ದವಾಗವಲೀ ಬಿ.ಎಸ್.ಯಡಿಯೂರಪ್ಪನವರ ವಿರುದ್ಧವಾಗಲಿ ನಾನು ಯಾವುದೇ ರೀತಿ ಹೇಳಿಕೆ ನೀಡಿಲ್ಲ' ಹೀಗೆಂದು ಬಿಜೆಪಿ ಬಿಬಿಎಂಪಿ ಚುನಾವಣಾ ಉಸ್ತುವಾರಿ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ಟಿಕೆಟ್ ಸಿಗದೇ ಇದ್ದವರು ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ಸರ್ವೋಚ್ಛ ನಾಯಕರು. ಅವರ ಬಗ್ಗೆ ಯಾವುದೇ ಮಾತನಾಡಿಲ್ಲ ಎಂದರು. ಟಿಕೆಟ್ ತಪ್ಪಿತೆಂಬ ಕಾರಣಕ್ಕೆ ಈ ರೀತಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಅಲ್ಲದೇ ನಾನು ಮಾತನಾಡದೇ ಇರುವ ವಿಚಾರವನ್ನು ಮಾತನಾಡಿದ್ದೇನೆ ಎಂದು ಹೇಳಿ ಆರೋಪಿಸುವುದು ಎಷ್ಟು ಸರಿ, ಹಾಗೊಂದು ವೇಳೆ ನಾನು ಮಾತನಾಡಿದ್ದೇನೆಂಬುದಕ್ಕೆ ದಾಖಲೆಯೂ ಇಲ್ಲ. ಕಾರ್ಪೋರೇಷನ್ ಟಿಕೆಟ್ ತಪ್ಪಿದೆ ಎಂದು ಸುಮ್ಮನೆ ಈ ರೀತಿ ಗೊಂದಲ ಸೃಷ್ಟಿಸಬೇಡಿ ಎಂದು ವಿನಂತಿಸುತ್ತೇನೆ ಎಂದು ಹೇಳಿದರಲ್ಲದೇ, ಕಾಲ್ಪನಿಕ ಹೇಳಿಕೆ ಬಗ್ಗೆ ಚರ್ಚೆ ಮಾಡಲು ಇಷ್ಟಪಡುವುದಿಲ್ಲ ಮತ್ತು ಅದನ್ನೇ ದೊಡ್ಡದು ಮಾಡುವ ಉದ್ದೇಶವೂ ಇಲ್ಲ ಎಂದರು.
ಲಿಂಗಾಯತ ಸಮಾಜಕ್ಕೆ ನಮ್ಮ ಪಕ್ಷದಿಂದ ಮೂರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೂ ಮೂರು ಅಭ್ಯರ್ಥಿಗಳನ್ನು ಟಿಕೆಟ್ ನೀಡಲಾಗಿತ್ತು. ಟಿಕೆಟ್ ನೀಡಿಕೆ ವಿಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಕಾಂಗ್ರೆಸ್ ಪಕ್ಷ ಸಹ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷವು ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ತಮ್ಮ ವಿರುದ್ಧ ಟೀಕೆ ಮಾಡಿದ ರುದ್ರೇಶ್ ಕುರಿತು ಪ್ರಸ್ತಾಪಿಸಿದ ಆರ್.ಅಶೋಕ್, ಅವರ ವಿರುದ್ಧ ಕ್ರಮಕೈಗೊಳ್ಳುವ ಪ್ರಶ್ನೆಯೇ ಇಲ್ಲ. ಅವರನ್ನು ಕರೆದು ಮಾತನಾಡುತ್ತೇನೆ, ಈಗಾಗಲೇ ಅವರು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವಾಗಿ ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆಂದರು.
ಕಾಂಗ್ರೆಸ್ ಐದು ಭಾಷೆಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಗ್ಗೆಯೂ ಟೀಕಿಸಿದ ಅವರು, ಇಡೀ ಬೆಂಗಳೂರಿನಲ್ಲಿರುವವರು ಕನ್ನಡಿಗರು. ಕಾಂಗ್ರೆಸ್‍ನ ಭಾಷಾ ನೀತಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿ ಕೊನೆಯಲ್ಲಿ ಗೊಂದಲ ಸುದ್ದಿಗೋಷ್ಠಿಯಲ್ಲಿ ಅಶೋಕ್ ಅವರ ಮಾತಿನ ನಂತರ ವೀರಶೈವ ಸಮಾಜದ ಮುಖಂಡ ವಾಗೀಶ್ ಎಂಬುವರು ಮಾತನಾಡಿ, ಚುನಾವಣೆ ವೇಳೆ ರಾಜಕೀಯದಲ್ಲಿ ಹುಳಿಹಿಂಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಪತ್ರಕರ್ತರು ಹುಳಿ ಹಿಂಡಿದ್ಯಾರು ಎಂಬುದನ್ನು ಹೇಳಿ ಎಂದು ಪಟ್ಟುಹಿಡಿದಾಗ ಸ್ಥಳದಲ್ಲಿ ಒಂದಷ್ಟು ಗೊಂದಲ ಸೃಷ್ಟಿಯಾಯಿತು. ಒಂದು ಹಂತದಲ್ಲಿ ಮಾತಿಗೆ ಮಾತು ಬೆಳೆದು ಅಶೋಕ್ ಸೇರಿದಂತೆ ಉಳಿದ ಪ್ರಮುಖರು ಖುರ್ಚಿಯಿಂದೆದ್ದು ಸ್ಥಳದಿಂದ ಹೊರಟರು.