

ಬೆಂಗಳೂರು: ಬಿಬಿಎಂಪಿ ಗದ್ದುಗೆ ಹಿಡಿಯುವ ಚದುರಂಗದ ಆಟ ಹೊಸ ತಿರುವಿನತ್ತ ಸಾಗಿದ್ದು, ಜೆಡಿಎಸ್ ಲೆಕ್ಕಾಚಾರದ ದಾಳ ಉರುಳಿಸಿದೆ. ಎರಡು ದಿನಗಳಿಂದ ಕಾಂಗ್ರೆಸ್ ಜತೆಗೆ ಸಖ್ಯ ಬಯಸುವ ಧಾಟಿಯಲ್ಲಿ ಮಾತನಾಡುತ್ತಿದ್ದ ಜೆಡಿಎಸ್ ಭಾನುವಾರ ಏಕೋ ಏನೋ ಯುಟರ್ನ್ ಹೊಡೆಯುವ ವರಸೆ ತೋರಿಸುತ್ತಿದೆ. ಈಗಾಗಲೇ ಕೇರಳರ ರೆಸಾರ್ಟ್ ನಲ್ಲಿರುವ ಜೆಡಿಎಸ್ ಸದಸ್ಯರನ್ನು ವಾಪಸ್ ಬರುವಂತೆ ಸಂದೇಶ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್ ಗೆ ದಿಗಿಲು ಹುಟ್ಟಿಸಿದೆ. ಹಾಗೆಯೇ ಬಿಜೆಪಿ ವಿರುದ್ಧವೂ ಅಟ್ಯಾಕ್ ಮಾಡಿದ್ದು ಆ ಪಕ್ಷಕ್ಕೂ ತಮ್ಮ ಬೆಂಬಲ ಸಿಗುವುದು ಸುಲಭವಲ್ಲ ಎಂಬ ಸಂದೇಶ ರವಾನಿಸಿ ದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ದಿಢೀರ್ ಸಭೆ ನಡೆಸಿ ಜೆಡಿಎಸ್ ಬೆಂಬಲ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದರೆ, ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಹಾಗೆಯೇ ತನ್ನೊಂದಿಗಿರುವ 6 ಮಂದಿ ಪಕ್ಷೇತರರನ್ನು ರಕ್ಷಿಸಿಕೊಳ್ಳುವಲ್ಲಿ ಹೆಚ್ಚು ನಿಗಾ ವಹಿಸಿದೆ.
ಕುಮಾರಣ್ಣನ ಅರ್ಥವೇನು?: ಭಾನುವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಎಚ್.ಡಿ.ಕುಮಾರಸ್ವಾಮಿ, ಎರಡು ರಾಷ್ಟ್ರೀಯ ಪಕ್ಷಗಳ ಸಹವಾಸ ಬೇಡ ಎಂದೆನಿಸುತ್ತದೆ. ಅವರ ನಿಲುವುಗಳ ವಿರುದ್ಧ ಹೋರಾಟ ಮಾಡಬೇಕೆಂದು ಅನಿಸುತ್ತದೆ ಎಂದಿದ್ದಾರೆ. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ತಟಸ್ಥವಾಗಿರಬೇಕೆಂದು ಬಯಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಜೆಡಿಎಸ್ ಬೆಂಬಲ ಆಸೆ ಹೊತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ದಿಗಿಲು ಹುಟ್ಟಿಸಿದ್ದಾರೆ. ಯಾವ ಪಕ್ಷದಿಂದ ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಎಂದು ಜೆಡಿಎಸ್ ಲೆಕ್ಕಾಚಾರ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಯಾವ ಪಕ್ಷವನ್ನು ಬೆಂಬಲಿಸಬೇಕೆಂದು ತೀರ್ಮಾನಿಸಲು ಸೆ.1ರಂದು ಕರೆದಿದ್ದ ಸಭೆಯನ್ನು ಸೆ.5ರಂದು ಮುಂದೂಡಲಾಗಿದ್ದರೂ ಈ ಸಭೆ ಅನಿಶ್ಚಿತ. ಇದರಿಂದ ಇನ್ನೂ ಐದಾರು ದಿನಗಳಲ್ಲಿ ಜೆಡಿಎಸ್ ಯಾವ ಕಡೆ ವಾಲಬಹುದು ಎಂಬ ಸಂದೇಹ ಮೂಡಿದೆ.
ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಸ್ಥಾನದಲ್ಲಿರುವುದರಿಂದ ಈ ಸಂದರ್ಭವನ್ನು ಗರಿಷ್ಠ ಪ್ರಮಾಣದಲ್ಲಿ ಹೇಗೆ ಬಳಸಿಕೊಳ್ಳಲು ಸಾಧ್ಯ ಎಂದು ಜೆಡಿಎಸ್ ನೋಡುತ್ತಿದೆ. ಕಾಂಗ್ರೆಸ್ ಜತೆ ಕೈ ಜೋಡಿಸಿದರೆ ಲಭಿಸುವ ಲಾಭವಷ್ಟು? ಬಿಜೆಪಿ ಜತೆ ಸಖ್ಯೆ ಮಾಡಿದರೆ ಆಗುವ ಅನುಕೂಲ ಗಳೇನು ಎನ್ನುವ ಗುಣಾ ಕಾರ-ಭಾಗಾಕಾರದಲ್ಲಿ ಜೆಡಿಎಸ್ ಮುಳುಗಿದೆ. ಹೀಗಾಗಿ ಮೇಯರ್ ಚುನಾವಣೆಗೆ ದಿನಾಂಕ ಪ್ರಕಟಿಸುವ ಕಾಲ ಸಮೀಪಿಸುತ್ತಿದ್ದರೂ ಜೆಡಿಎಸ್ ಯಾವ ಪಕ್ಷ ವನ್ನು ಬೆಂಬಲಿಸಬೇಕೆನ್ನುವ ಬಗ್ಗೆ ಇನ್ನೂ ತೀರ್ಮಾನ ಪ್ರಕಟಿಸಿಲ್ಲ.
ಅತ್ತ ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ಕೇರಳದ ರೆಸಾರ್ಟ್‍ನಲ್ಲಿರುವ ಪಕ್ಷದ ಕಾರ್ಪೋರೇಟರ್‍ಗಳನ್ನು ವಾಪಸ್ ಕರೆಸಿಕೊಳ್ಳುವ ಮಾತನಾಡಿದರೆ, ಇದಕ್ಕೆ ವ್ಯತಿರಿಕ್ತವಾಗಿ ವಿಧಾನಪರಿಷತ್‍ನ ಜೆಡಿಎಸ್ ಸದಸ್ಯ ಶರವಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬಿಬಿಎಂಪಿ ಚುನಾವಣೆ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್- ಜೆಡಿಎಸ್ ಸಂಬಂಧ ಬೆಸೆಯುವ ಪ್ರಯತ್ನ ನಡೆಸಿದ್ದಾರೆ. ಹಾಗೆಯೇ ಈಗಾಗಲೇ ಕೇರಳದ ಕೊಚ್ಚಿಯಲ್ಲಿರುವ ಜೆಡಿಎಸ್ ಸದಸ್ಯರು ತಮ್ಮನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನ ನಡೆದಿಲ್ಲ. ಆ ರೀತಿಯ ಯಾವುದೇ ಸಂದೇಶ ನಮಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಬರೀ ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿ ಕೂಡ ಗೊಂದಲಕ್ಕೆ ಸಿಲುಕಿದ್ದು, ಅಷ್ಟೇ ಅಲ್ಲ. ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿರುವ 6 ಮಂದಿ ಪಕ್ಷೇತರರೂ ಅಯೋಮಯ ಪರಿಸ್ಥಿತಿಗೆ ಸಿಲುಕಿದ್ದಾರೆ. ಆದರೂ ಕಾಂಗ್ರೆಸ್‍ನ ಈ ತೆರೆಮರೆ ಹೋರಾಟದ ಉಸ್ತುವಾರಿ ಹೊತ್ತ ಶಾಸಕರಾದ ಮುನಿರತ್ನ ಮತ್ತು ಭೈರತಿ ಬಸವರಾಜು ಜೆಡಿಎಸ್ ನಡೆ ಗಮನಿಸಿ ಮುಂದಿನ ಕಾರ್ಯತಂತ್ರ ರೂಪಿಸಲು ಸಜ್ಜಾಗಿದ್ದಾರೆ. ಸಿ.ಎಂ.ಇಬ್ರಾಹಿಂ, ದೇವೇಗೌಡರೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಾದಷ್ಟು ಕಾಂಗ್ರೆಸ್‍ಗೆ ಜೆಡಿಎಸ್ ದೊರೆಯುವ ವಾತಾವರಣ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ.