10 ಸ್ಥಾನಗಳಲ್ಲಿ ಏಕಾಂಗಿ ಸ್ಪರ್ಧೆಗೆ ಜೆಡಿಎಸ್ ಸಜ್ಜು

ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ 10 ಸ್ಥಾನಗಳಲ್ಲಿ ಗಂಭೀರ ಸ್ಪರ್ಧೆ ನಡೆಸಿ ಉಳಿದ ಸ್ಥಾನಗಳಲ್ಲಿ ಸ್ಥಳೀಯ ಹೊಂದಾಣಿಕೆ ತಂತ್ರ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ...
ಜೆಡಿಎಸ್ ಸಭೆ (ಸಂಗ್ರಹ ಚಿತ್ರ)
ಜೆಡಿಎಸ್ ಸಭೆ (ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ 10 ಸ್ಥಾನಗಳಲ್ಲಿ ಗಂಭೀರ ಸ್ಪರ್ಧೆ ನಡೆಸಿ ಉಳಿದ ಸ್ಥಾನಗಳಲ್ಲಿ ಸ್ಥಳೀಯ ಹೊಂದಾಣಿಕೆ ತಂತ್ರ ಅಳವಡಿಸಿಕೊಳ್ಳಲು ಚಿಂತನೆ  ನಡೆಸಿದೆ.

ಇದುವರೆಗೆ 15 ಸ್ಥಾನಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಸಿದ್ಧಪಡಿಸಲಾಗುತ್ತಿದೆಯಾದರೂ ಆ ಕಸರತ್ತು ಇನ್ನೂ ಮುಗಿದಿಲ್ಲ. ಆದ್ದರಿಂದ 10 ಸ್ಥಾನಗಳ ಅಭ್ಯರ್ಥಿ ಆಯ್ಕೆಯನ್ನು ಮಾತ್ರ  ಪೂರ್ಣಗೊಳಿಸಲಾಗಿದೆ. ಇವಿಷ್ಟೂ ಸ್ಥಾನಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಕಲ ಯತ್ನ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಉಳಿದ 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಥಳೀಯ  ಹೊಂದಾಣಿಕೆಗೆ ಮನಸ್ಸು ಮಾಡಲಾಗಿದೆ. ಅಂದರೆ ಜೆಡಿಎಸ್ ಸ್ಪರ್ಧೆ ಇಲ್ಲದ ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಪರೋಕ್ಷ ಬೆಂಬಲ ನೀಡಲು ಆಸಕ್ತಿ ವಹಿಸಲಾಗಿದೆ. ಈ ಬಗ್ಗೆ ಪಕ್ಷದ  ಸ್ಥಳೀಯ ನಾಯಕರೇ ತೀರ್ಮಾನ ಕೈಗೊಂಡು ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಬೇಕೆಂದು ಸೂಚಿಸಲಾಗಿದೆ. ಹೀಗಾಗಿ ಜೆಡಿಎಸ್ ಸ್ಪರ್ಧೆ ಇಲ್ಲದ ಸ್ಥಾನಗಳಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ  ಬೆಂಬಲ ನೀಡದೆ ಸ್ಥಳೀಯ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚಲುವರಾಯಸ್ವಾಮಿ-ಸಿಎಂ ಭೇಟಿ: ಈ ಮಧ್ಯೆ ಕಾಂಗ್ರೆಸ್ ಮೈತ್ರಿಗೆ ಹೆಚ್ಚು ಆಸಕ್ತಿ ವಹಿಸುವ ಶಾಸಕರಾದ ಜಮೀರ್ ಅಹಮ್ಮದ್ ಖಾನ್ ಮತ್ತು ಚಲುವರಾಯ ಸ್ವಾಮಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಿಢೀರ್ ಭೇಟಿ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಗಿದ ಅಧ್ಯಾಯ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ಎರಡು ಬಾರಿ ಘೋಷಣೆ  ಮಾಡಿರುವ ಬೆನ್ನಲ್ಲೇ ಈ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗೆಯೇ ಇದು ಕೆಲವು ಸ್ಥಾನಗಳಲ್ಲಿ ಸ್ಥಳೀಯ ಹೊಂದಾಣಿಕೆಯನ್ನು  ಸ್ಪಷ್ಟಪಡಿಸಿದಂತಾಗಿದೆ.

25 ಸ್ಥಾನಗಳ ಪೈಕಿ ಜೆಡಿಎಸ್ ಐವರು ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಇಬ್ಬರಿಗೆ ಮಾತ್ರ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಮೈಸೂರಿನಲ್ಲಿ ಎಂದಿನಂತೆ ಸಂದೇಶ್ ನಾಗರಾಜ್ ಮತ್ತು  ಬೆಂಗಳೂರು ಗ್ರಾಮಾಂತರದಲ್ಲಿ ಇ. ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಬೆಳಗಾವಿ ಸೇರಿದಂತೆ 10 ಸ್ಥಾನಗಳಲ್ಲಿ ಅಭ್ಯರ್ಥಿಗಳ ಆಂಯ್ಕೆ ಇನ್ನೂ ಪ್ರಗತಿಯಲ್ಲಿದೆ.

ಜೆಡಿಎಸ್ ಸಂಭವನೀಯ ಪಟ್ಟಿ
ಕೋಲಾರ ನಿರ್ಮಾಪಕ ಸಿ.ಆರ್. ಮನೋಹರ್
ತುಮಕೂರು ಬೆಮೆಲ್ ಕೃಷ್ಣಪ್ಪ ಪುತ್ರ ಕಾಂತರಾಜ್
ಬೆಂಗಳೂರು ಗ್ರಾ. ಇ. ಕೃಷ್ಣಪ್ಪ
ಮಂಡ್ಯ ಸಚಿವ ಡಿ.ಕೆ. ಶಿವಕುಮಾರ್ ಆಪ್ತ
ಅಪ್ಪಾಜಿಗೌಡ ಅಥವಾ ಡಾ. ಕೃಷ್ಣ
ಮೈಸೂರು ಸಂದೇಶ್ ನಾಗರಾಜ್
ಕೊಡಗು ಸ್ಥಳೀಯ ಮುಖಂಡ ನರೇಶ್
ಚಿಕ್ಕಮಗಳೂರು ಸ್ಥಳೀಯ ಮುಖಂಡ ಅಜಿತ್‍ಕುಮಾರ್
ಶಿವಮೊಗ್ಗ ಮಹಿಮಾ ಪಟೇಲ್ ಅಥವಾ ವಾಗೀಶ್
ಉತ್ತರ ಕನ್ನಡ ಸ್ಥಳೀಯ ಮುಖಂಡ ರವಿಕುಮಾರ್
ರಾಯಚೂರು ಬೆಂಗಳೂರಿನ ಉದ್ಯಮಿ ಅಂಜನೇಯ
ಹಾಸನ ಪಟೇಲ್ ಶಿವರಾಮ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com