

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಶವಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಡೆಸಲಾಗಿದ್ದು 2 ದಿನಗಳಲ್ಲಿ ವರದಿ ಪೊಲೀಸರ ಕೈ ಸೇರಲಿದೆ.
ಸಾವಿಗೆ ಕಾರಣ ತಿಳಿಯಲಿದೆ. ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬ ಜಿಜ್ಞಾಸೆಗೆ ಉತ್ತರ ದೊರೆಯಲಿದೆ. ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಎಸ್.ವೆಂಕಟರಾಘವ
ನೇತೃತ್ವದಲ್ಲಿ ಡಾ.ಸುಮಂಗಲ ಮತ್ತು ಡಾ.ಪ್ರದೀಪ್ ಅವರನ್ನೊಳಗೊಂಡ ತಜ್ಞರ ತಂಡ ತಹಸೀಲ್ದಾರ್ ಸಮ್ಮುಖದಲ್ಲಿ ಬೆಳಗ್ಗೆ 9 ರಿಂದ 11 ಗಂಟೆವರೆಗೆ ಶವಪರೀಕ್ಷೆ ನಡೆಸಿ
ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು. ಹೃದಯ, ಕುತ್ತಿಗೆ ಭಾಗ, ಕಿಡ್ನಿ ಸೇರಿದಂತೆ ದೇಹದ ಮತ್ತಿತರ ಅಂಗಾಂಗಳ ಪರೀಕ್ಷೆ ನಡೆಸಿದ್ದು, 2 ದಿನದಲ್ಲಿ ವರದಿ ಸಿದ್ಧಪಡಿಸಿ ಪೊಲೀಸರಿಗೆ ಸಲ್ಲಿಸಲಾಗುವುದು. ಚರ್ಮ ಸೇರಿದಂತೆ ದೇಹದ ಇತರ ಮಾದರಿಗಳನ್ನು ಪರೀಕ್ಷೆಗಾಗಿ ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಾ.ಎಸ್. ವೆಂಕಟರಾಘವ ಮಾಹಿತಿ ನೀಡಿದರು.
ಚಿತ್ರೀಕರಣ: ದೇಶವೇ ಗಮನಿಸುತ್ತಿರುವ ಅತ್ಯಂತ ಗಂಭೀ ರ ಪ್ರಕರಣವಾದ್ದರಿಂದ ಶವಪರೀಕ್ಷೆ ಪ್ರಕ್ರಿಯೆ ಯನ್ನು ಸಂಪೂರ್ಣವಾಗಿ ಕ್ಯಾಮರಾ ಚಿತ್ರೀಕರಣದಲ್ಲಿ ನಡೆಸಲಾಗಿದ್ದು,
ಪರೀಕ್ಷೆ ವೇಳೆ ತಹಸೀಲ್ದಾರ್ ಮತ್ತು ಹಿರಿಯ ಪೊ ಲೀಸ್ ಅಧಿಕಾರಿಯೊ ಬ್ಬರು ಉಪಸ್ಥಿತರಿದ್ದರು. ಮರಣೋತ್ತರ ಪರೀಕ್ಷೆ ವರದಿ ಕೈಸೇರಿದ ಬಳಿಕ ನಿಖರ
ಕಾರಣ ಗೊತ್ತಾಗಲಿದೆ ಎಂದು ಹಿರಿಯ ಪೋ ಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಿಎಂಗೆ ಮುತ್ತಿಗೆ ಯತ್ನ: ಕೋಲಾರ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಬೆಂಬಲಿಗರು ಸೋಮವಾರ ರಾತ್ರಿಯಿಂದಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ
ಜಮಾಯಿಸಿದ್ದರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಾಗಿ ಆಸ್ಪತ್ರೆಯ ಶವಾಗಾರ ವಿಭಾಗದ ಹಿಂದಿನ ಗೇಟ್ ನಿಂದ ಬಂದರು. ಈ ವೇಳೆ ಹೊರಭಾಗದಲ್ಲಿದ್ದ ಬೆಂಬಲಿಗರು ಸಿಎಂ ವಿರುದ್ಧ ಧಿಕ್ಕಾರ ಕೂಗಿ ಒಳನುಗ್ಗಿ, ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲೀಸರು ತಡೆದರು.
ಮೊಬೈಲ್‍ಗೆ ಪಾಸ್‍ವರ್ಡ್
ಡಿ.ಕೆ.ರವಿ ಅವರು ತಮ್ಮ ಮೊಬೈಲ್ ಫೋನ್ಗೆ ಪಾಸ್ ವರ್ಡ್ ನೀಡಿದ್ದಾರೆ. ಪಾಸ್‍ವರ್ಡ್ ಲಾಕ್ ತೆಗೆಯಲು ಸೈಬರ್ ಕ್ರೈಂ ಪೋಲೀಸರ ನೆರವು ಪಡೆಯಲಾಗುವುದು ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರವಿ ಶವ ಪತ್ತೆಯಾದ ಸ್ಥಳದಲ್ಲೇ 2 ಸ್ಯಾಮ್ ಸಂಗ್, 1 ಆ್ಯಪಲ್ ಐ ಫೋನ್ ಹಾಗೂ ಐಪ್ಯಾಡ್ ಪತ್ತೆಯಾಗಿದೆ. ಮೊಬೈಲ್‍ಗಳಿಗೆ ಪಾಸ್‍ವರ್ಡ್ ನೀಡಿದ್ದಾರೆ. ಲಾಕ್ ತೆಗೆದಾಗ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು. ಕಾನೂನು ಅನ್ವಯ ಸೈಬರ್ ಕ್ರೈಂ ತಂಡವೇ ಲಾಕ್ ತೆರೆಯಲಿದೆ. ಇದೇ ವೇಳೆ ಹೊರ ಹೋದ ಮತ್ತು ಒಳಬಂದ ಕರೆಗಳ ಮಾಹಿತಿ ಸಿಗುವ ಜತೆಗೆ ಮೊಬೈಲ್‍ನಲ್ಲಿ ಒಂದು ವೇಳೆ ಸಂಭಾಷಣೆ ರೆಕಾರ್ಡ್ ಆಗಿದ್ದರೆ ತನಿಖೆಗೆ ಸಹಾಯವಾಗಲಿದೆ ಎಂದು ಅವರು ಹೇಳಿದರು.