ಲಾಟರಿ ಹಗರಣದಲ್ಲಿ ಸಿಎಂ, ಜಾರ್ಜ್ ಭಾಗಿ: ದೇವೇಗೌಡ ಆರೋಪ

ಒಂದಂಕಿ ಲಾಟರಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಭಾಗಿಯಾಗಿದ್ದು,ಸತ್ಯಾಂಶ ಹೊರಬರಬೇಕಾದರೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಪ್ರಧಾನಿ,ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.
Updated on: 

ಬೆಂಗಳೂರು:ಒಂದಂಕಿ ಲಾಟರಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಭಾಗಿಯಾಗಿದ್ದು,ಇದರ ಸತ್ಯಾಂಶ ಹೊರಬರಬೇಕಾದರೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಪ್ರಧಾನಿ,ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಬೆಳಕಿಗೆ ಬಂದ ಲಾಟರಿ ಹಗರಣ ಛಾಪಾ ಕಾಗದ ಹಗರಣಕ್ಕಿಂತ ದೊಡ್ಡದು. ಒಂದು ಮೂಲದ ಪ್ರಕಾರ ಇದು 2 ಸಾವಿರ ಕೋಟಿ ರೂಪಾಯಿ ಮೊತ್ತದ್ದು. ಇದರಲ್ಲಿ ಮುಖ್ಯಮಂತ್ರಿ ಭಾಗಿಯಾಗಿರುವುದು ಶೇಕಡಾ 200ರಷ್ಟು ಸತ್ಯ. ಅವರ ಜತೆ ಗೃಹ ಸಚಿವರು ಇದರ ಹೊಣೆ ಹೊತ್ತುಕೊಳ್ಳಬೇಕು. ಅಲ್ಲದೇ, ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಮತ್ತು ಪ್ರಧಾನಿ ಅವರಿಗೂ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಹಾಗೊಂದು ವೇಳೆ ಈ ಹಗರಣದಲ್ಲಿ ಸಿದ್ದರಾಮಯ್ಯ ಅಥವಾ ಗೃಹ ಸಚಿವ ಇಬ್ಬರೂ ಭಾಗಿಯಾಗಿಲ್ಲ ಎನ್ನುವುದಾದರೆ,ಒಂದೂವರೆ ವರ್ಷದ ಹಿಂದೆಯೇ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಪತ್ರ ಬರೆದು ಸರ್ಕಾರದ ಗಮನಕ್ಕೆ ತಂದರೂ ಯಾಕೆ ಕ್ರಮಕ್ಕೆ ಕೈಗೊಂಡಿರಲಿಲ್ಲ? ಒಂದು ವೇಳೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ ಅವರು ಮೌನವಹಿಸಿದ್ದೇಕೆ? ಎಂದು ಪ್ರಶ್ನಿಸಿದರು.

ಲಾಟರಿ ದಂಧೆ ಬಗ್ಗೆ ಅಧಿವೇಶನದಲ್ಲಿಯೇ ಪ್ರಸ್ತಾಪಿಸಿದ್ದರೂ ಗುಪ್ತಚರ ಇಲಾಖೆ ಮೌನವಹಿಸಿದೆ ಅಥವಾ ಮುಖ್ಯಮಂತ್ರಿ ಅವರು ಕೂಡ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದಿಲ್ಲ.

ಇವರಿಬ್ಬರ ದೋಷದಿಂದಲೇ ಕರ್ನಾಟಕ ಲಾಟರಿ ಅಥವಾ ಮಟ್ಕಾದ ದಂಧೆಯ ಅಡ್ಡೆಯಾಗುತ್ತಿದೆ ಎಂದು ಕಿಡಿಕಾರಿದ ದೇವೇಗೌಡ, ಮುಖ್ಯಮಂತ್ರಿ ಆಟ ಆಡೋದಕ್ಕೆ ಇದ್ದಾರಾ ? ಇದು ಸರ್ಕಾರ ನಡೆಸೋ ರೀತೀನಾ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಎಂದು ಆಕ್ರೋಶ ಹೊರಹಾಕಿದರು.

ಕೆಂಪಯ್ಯಗೇಕೆ ನೋಟಿಸ್ ಕೊಟ್ಟಿಲ್ಲ?
ಲಾಟರಿ ದಂಧೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಲಾಯಿತು ಎನ್ನುವ ಸುದ್ದಿ ಓದಿದ್ದೇನೆ. ಹಾಗಾದ್ರೆ,ಇದರಲ್ಲಿ ಅವರೊಬ್ಬರೆ ಇದ್ದಾರಾ? ಕೆಲವರಿಗೆ ನೊಟೀಸ್ ಕೊಟ್ಟಿದ್ದೇವೆಂದು ಸರ್ಕಾರ ಹೇಳುತ್ತಿದೆ. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರಿಗೇಕೆ ನೋಟಿಸ್ ಕೊಟ್ಟಿಲ್ಲ ಎಂದು ದೇವೇಗೌಡ ಪ್ರಶ್ನಿಸಿದರು.

ಜಾತಿ ಮೇಲೆ ಅಧಿಕಾರಿಗಳ ನೇಮಕಾತಿ ನಡೆಯುತ್ತಿದೆ. ಹಗರಣದ ಸತ್ಯಾಂಶವನ್ನು ಮುಚ್ಚಿಡುವ ಹುನ್ನಾರ ನಡೆಯುತ್ತಿದೆ. ರಾಜ್ಯದ ಜನತೆಯ ಮುಂದೆ ಎಲ್ಲವೂ ಬಯಲಾಗಬೇಕಾದರೆ,ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎನ್ನುವುದಾದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಲ್ಲವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ,ಸಿಬಿಐ ತನಿಖೆ ನಡೆಸಿದರೆ ಮುಖ್ಯಮಂತ್ರಿ ಸೇರಿದಂತೆ ಭಾಗಿಯಾದವರೆಲ್ಲ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದನ್ನು ತಾವು ಈಗ ಹೇಳುವುದಿಲ್ಲ ಎಂದರು.ರಾಜ್ಯಾದ್ಯಂತ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಧ್ವನಿ ಎತ್ತಿದಾಗ ನೀವೇನು ಮಾಡ್ತಿದ್ರಿ?
ಲಾಟರಿ ಹಗರಣದ ವಿರುದ್ಧ ಬಿಜೆಪಿ ಈಗ ಧ್ವನಿ ಎತ್ತಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಒಂದೂವರೆ ವರ್ಷಗಳ ಹಿಂದೆ ಅಧಿವೇಶನದಲ್ಲಿಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,ಲಾಟರಿ ದಂಧೆ ಬಗ್ಗೆ ಮಾತನಾಡಿದರು. ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಮೌನ ವಹಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ,ಅಧಿವೇಶನದಲ್ಲಿಯೇ ಕುಮಾರಸ್ವಾಮಿ ಅವರನ್ನು ಹೀಯಾಳಿಸಿ ಮಾತನಾಡಿದ್ದರು. ಆಗಲೂ ಬಿಜೆಪಿ ಅವರು ಉಸಿರುಬಿಟ್ಟಿರಲಿಲ್ಲ.ಈಗ ಮಾತ್ರ ಲಾಟರಿ ದಂಧೆ ಅವರು ಮಾತನಾಡುತ್ತಿರುವುದು ತಮಗೂ ವಿಚಿತ್ರವಾಗಿ ಕಾಣುತ್ತಿದೆ ಎಂದು ಕೆಣಕಿದರು.


ಅಂದೂ ಕಾಂಗ್ರೆಸ್, ಇಂದೂ ಕಾಂಗ್ರೆಸ್
ಛಾಪಾ ಕಾಗದ ಹಗರಣ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು.ಇವತ್ತು ಲಾಟರಿ ಹಗರಣ ನಡೆದಾಗಲೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಸರ್ಕಾರ ಅದರಪ್ಪನ ಹಾಗೆ ಆಡಳಿತ ನಡೆಸುತ್ತಿದೆ. ರಾಜ್ಯವನ್ನು ಮಟ್ಕಾ, ಲಾಟರಿ ಅಕ್ರಮದ ತಾಣ ಮಾಡುವ ಕೆಲಸ ನಡೆದಿದೆ. ತೆಲಗಿ ಹಗರಣ ನಡೆದಾಗಲೂ ಸಿಬಿಐ ತನಿಖೆ ಬೇಡ ಎಂದಿದ್ದರು. ಇವತ್ತು ಅವರು ಅದನ್ನೇ ಹೇಳುತ್ತಿದ್ದಾರೆ. ಅದರೆ, ಸತ್ಯ ಏನೆಂಬುದು ತನಿಖೆಯಿಂದಲೇ ಗೊತ್ತಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com