

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಡವರ ವಿರುದ್ಧವಾಗಿದ್ದು, ಮೀಸಲಾತಿಯನ್ನು ರದ್ದುಗೊಳಿಸಲು ಪಿತೂರಿ ಮಾಡುತ್ತಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
ಬಿಹಾರದ ಬಂಕಾದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಕೈಗೊಂಡು ಮಾತನಾಡಿದ ಮಾಯಾವತಿ, ಮೋದಿ ಸರ್ಕಾರ ಮೀಸಲಾತಿಯನ್ನು ರಾಜಕೀಯಗೊಳಿಸಿ ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಯತ್ನಿಸುತ್ತಿದೆ. ಒಂದು ವೇಳೆ ಮೀಸಲಾತಿಯನ್ನು ರದ್ದುಗೊಳಿಸಿದರೆ ದೇಶಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
"ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಮೋದಿ ಸರ್ಕಾರ ಹಿಂಪಡೆಯಲು ಯತ್ನಿಸಿದರೆ, ದೇಶ ಹಿಂದೆಂದೂ ಕಾಣದಂತಹ ಹೋರಾಟವನ್ನು ಪ್ರಾರಂಭಿಸಬೇಕಾಗುತ್ತದೆ" ಎಂದು ಮಾಯಾವತಿ ಹೇಳಿದ್ದಾರೆ. ಆರ್.ಎಸ್.ಎಸ್ ನ ಮುಖಂಡ ಮೋಹನ್ ಭಾಗವತ್ ಇತ್ತೀಚೆಗಷ್ಟೇ ಮೀಸಲಾತಿ ಕುರಿತಾಗಿ ಹೇಳಿಕೆ ನೀಡಿ, ಈ ಸೌಲಭ್ಯದ ಬಗ್ಗೆ ಮತ್ತೆ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದ್ದರು.
ಮೋಹನ್ ಭಾಗವತ್ ಅವರ ಹೇಳಿಕೆ ನಂತರ ದೇಶಾದ್ಯಂತ ಮೀಸಲಾತಿ ಮರುಪರಿಶೀಲನೆ ಬಗ್ಗೆ ಚರ್ಚೆ ನಡೆದಿತ್ತು.