ರಾಹುಲ್ ಗಾಂಧಿ ಅವರು ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಶನಿವಾರ ಪಾದಯಾತ್ರೆ ನಡೆಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ವಿನಯಕುಮಾರ್ ಸೊರಕೆ, ಎಸ್.ಆರ್. ಪಾಟೀಲ, ಎಚ್.ಕೆ. ಪಾಟೀಲ ಮುಂತಾದವರು ಇದ್ದರು. ಇವರಿಗೆ ಯೂಥ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಪಾದಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿ ಜನರತ್ತ ಕೈಬೀಸುತ್ತ, ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರ ಕೈಕುಲುಕುತ್ತ ಉತ್ಸಾಹದಿಂದಲೇ ಹೆಜ್ಜೆ ಹಾಕಿದರು. ದಣಿವೇ ಆಗದಂತೆ ನಡೆದರು. ಬಹಿರಂಗ ಸಭೆ ಮುಗಿಸಿ ಭೋಜನಕ್ಕಾಗಿ ಕೇವಲ 15 ನಿಮಿಷ ಬಿಡುವು ಪಡೆದು ಮತ್ತೆ ಪಾದಯಾತ್ರೆ ಆರಂಭಿಸಿದರು. ತಾವೇನೂ ಕಡಿಮೆ ಇಲ್ಲ ಎಂಬಂತೆ ಸಿದ್ದರಾಮಯ್ಯ, ಪರಮೇಶ್ವರ್ ಅವರೂ ಲಗುಬಗೆಯಲ್ಲೇ ಹೆಜ್ಜೆ ಹಾಕಿದರು.