ಸಿದ್ದರಾಮಯ್ಯ ಸೂಟುಬೂಟಿನ ಸಿಎಂ ಅಲ್ಲ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ...

Published On :
ಗುಡಗೂರು (ಹಾವೇರಿ ಜಿಲ್ಲೆ): ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ``ಸಿದ್ದರಾಮಯ್ಯ ಅವರು ಪ್ರಧಾನಿಯಂತೆ ಸೂಟುಬೂಟಿ ನ ಮುಖ್ಯಮಂತ್ರಿಯಲ್ಲ. ಇಷ್ಟೆಲ್ಲ ಘೋಷಣೆ ಮಾಡುವ ಮೂಲಕ ನಿಮ್ಮ ನೋವಿಗೆ ಸ್ಪಂದಿಸಿದ್ದಾರೆ. ಅವರು ಪ್ರಧಾನಿಯಂತೆ ರೇಡಿಯೋದಲ್ಲಿ ಮನ್ ಕೀ ಬಾತ್ ಹೇಳುವುದಿಲ್ಲ. ನಿಮ್ಮ ಬಳಿ ಬಂದು ನಿಮ್ಮ ಕಂಬನಿ ಒರೆಸಿದ್ದಾರೆ. ಸಿದ್ದರಾಮಯ್ಯ ಅವರೇ ನಿಜವಾದ ರೈತರ, ಬಡವರ, ಜನಸಾಮಾನ್ಯರ ನಾಯಕ'' ಎಂದು ರಾಹುಲ್ ಹೊಗಳಿದ್ದಾರೆ. `ಒಂದೂವರೆ ವರ್ಷದಿಂದ ವಿದೇಶಗಳನ್ನು ಸುತ್ತುತ್ತ ಮೇಕ್ ಇನ್ ಇಂಡಿಯಾ ಮಂತ್ರ ಪಠಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹರಿದ ಬಟ್ಟೆ, ಕೆಸರಾದ ಕೈಗಳ ರೈತರು ಮತ್ತು ಬಡವರೊಂದಿಗೆ ಒಂದೇ ಒಂದು ಫೋಟೋ ತೆಗೆಸಿಕೊಂಡಿಲ್ಲ. ಯಾಕೆಂದರೆ ಅವರು ಸೂಟುಬೂಟಿನ ಪ್ರಧಾನಿ...' ಭೀಕರ ಬರಗಾಲ ಮತ್ತು ಸಾಲದ ಹೊರೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಜಿಲ್ಲೆಯ ರೈತರ ಕುಟುಂಬಗಳಿಗೆ ಶನಿವಾರ ಸಾಂತ್ವನ ಹೇಳಿದ ಬಳಿಕ ರಾಣಿಬೆನ್ನೂರು ತಾಲೂಕು ಗುಡಗೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡ ಪರಿ ಇದು. ಬಡವರು ಕಣ್ಣೀರಿಡುತ್ತಿದ್ದರೆ ಪ್ರಧಾನಿಯವರು ವಿದೇಶ ಪ್ರವಾಸದಲ್ಲಿ ಬಿಜಿಯಾಗಿದ್ದಾರೆ. ಭಾರತದ ರೈತರಲ್ಲಿ, ಬಡವರಲ್ಲಿ ಹಣವಿಲ್ಲ. ಬರೀ ಶ್ರೀಮಂತರು, ಉದ್ಯಮಿಗಳ ಜತೆ ಸೂಟುಬೂಟಿನಲ್ಲಿ ತಿರುಗಾಡುವ ಪ್ರಧಾನಿಯವರಿಗೆ ಬಡವರ ಬಟ್ಟೆ ಹರಿದಿರುವುದು ಕಾಣುತ್ತಿಲ್ಲ. ಹಾಗಾಗಿ ಉದ್ಯಮಿಗಳ ಮಧ್ಯ ನಿಂತು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಬಡಬಡಿಸುತ್ತಿದ್ದರಿಂದ, ದೇಶದ ಜನತೆಗೆ ತಮ್ಮ ಪರವಾದ ಸರ್ಕಾರ ಕೇಂದ್ರದಲ್ಲಿ ಇಲ್ಲ ಎನ್ನುವ ಆತಂಕ ಶುರುವಾಗಿದೆ ಎಂದು ವಿಷಾದಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ ಯುರೋಪ್, ಮಧ್ಯಾಹ್ನ ಅಮೆರಿಕ, ಸಂಜೆ ಚೈನಾದಲ್ಲಿ ಇರುತ್ತಾರೆ. ಅಲ್ಲಿರುವ ಭಾರತೀಯರೊಂದಿಗೆ, ದೊಡ್ಡ ದೊಡ್ಡ ಉದ್ಯಮಿಗಳ ಜತೆಗೆ ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಅಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಇಂಡಿಯಾದಲ್ಲಿನ ದೇಶ ನಿರ್ಮಾತೃಗಳೊಂದಿಗೆ ಅವರಿಗೆ ಮಾತನಾಡಲು, ಅವರ ಸಲಹೆ ಆಲಿಸಲು, ಸಮಸ್ಯೆ ಕೇಳಲು ಪುರುಸೊತ್ತೇ ಇಲ್ಲದಂತಾಗಿದೆ. ಒಂದೂವರೆ ವರ್ಷವಾದರೂ ಇಲ್ಲನ ಜನರೊಂದಿಗೆ ಮಾತನಾಡುವ ಮನಸ್ಸು ಮಾಡಿಲ್ಲ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಎರಡು ನಿಮಿಷದ ಸಾಂತ್ವನ
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರಾಣಿಬೆನ್ನೂರು ತಾಲೂಕಿನ ಮೈದೂರು ಪ್ಲಾಟ್ನ ಅಶೋಕ ಮಡಿವಾಳರ ನಿವಾಸಕ್ಕೆ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕೇವಲ ಎರಡು ನಿಮಿಷ ಮನೆಯೊಳಗಿದ್ದು, ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಧೈರ್ಯ ಹೇಳಿದರು. ಮೃತ ರೈತ ಅಶೋಕ ಮಡಿವಾಳರ ಪತ್ನಿ ಹೊನ್ನವ್ವ ಅವರಿಗೆ ರು. 1 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದ ರಾಹುಲ್, ನಿಮ್ಮೊಂದಿಗೆ ಪಕ್ಷ ಹಾಗೂ ರಾಜ್ಯ ಸರ್ಕಾರವಿದೆ. ಇನ್ನು ಎಷ್ಟು ಸಾಲವಿದೆ ಎಂಬುದನ್ನು ವಿಚಾರಿಸಿ,ಸಹಕಾರ ನೀಡುವ ಭರವಸೆ ನೀಡಿದರು. ಸಿದ್ದರಾಮಯ್ಯ ಮಾತನಾಡಿ, ಐಟಿಐ ವಿದ್ಯಾಭ್ಯಾಸ ಮಾಡುತ್ತಿರುವ ಮಗನಿಗೆ ಉದ್ಯೋಗ ನೀಡಲು ಕ್ರಮ ಹಾಗೂ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದರು.
ಉತ್ಸಾಹಕ್ಕೆ ರೈತರ ಬೆಳೆನಾಶ!
ರಾಹುಲ್ ಗಾಂಧಿ ಪಾದಯಾತ್ರೆ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಉತ್ಸಾಹಕ್ಕೆ ಹೊಲದಲ್ಲಿ ಬೆಳೆದು ನಿಂತಿದ್ದ ಫಸಲು ನಾಶವಾಗಿದೆ. ಪಾದಯಾತ್ರೆಯುದ್ದಕ್ಕೂ ಹೊಲದಗುಂಟ ಸಾಗಿದ ನೂರಾರು ಕಾರ್ಯಕರ್ತರು ಬೆಳೆಯನ್ನು ತುಳಿಯುತ್ತಲೇ ಸಾಗಿದರು. ರೈತರಿಗೆ ಸಾಂತ್ವನ ಹೇಳಲು ರಾಹುಲ್ ಪಾದಯಾತ್ರೆ ನಡೆಸುತ್ತಿದ್ದರೂ ರೈತರ ಬೆಳೆ ನಾಶ ಮಾಡಿ ಕಾರ್ಯಕರ್ತರು ಓಡುತ್ತಿದ್ದದ್ದು ರೈತರಿಗೆ ಬೇಸರ ಮೂಡಿಸಿತು. ರಸ್ತೆ ಇಕ್ಕೆಲಗಳಲ್ಲಿದ್ದ ಶೇಂಗಾ, ಉದ್ದು ಇನ್ನಿತರ ಬೆಳೆಗಳನ್ನು ತುಳಿಯುತ್ತ ಕಾರ್ಯಕರ್ತರು ಓಡಿದರು. ಪಕ್ಷದ ಬಾವುಟ ಹಿಡಿದು ರಾಹುಲ್ರನ್ನು ಹಿಂಬಾಲಿಸುತ್ತಿದ್ದರು. ರಾಹುಲ್ ವೀಕ್ಷಣೆಗೆ ಯುವಕರು ಉತ್ಸುಕತೆ ತೋರಿದ್ದರಿಂದ ಭದ್ರತಾ ಸಿಬ್ಬಂದಿ ಅವರನ್ನು ನೂಕುತ್ತಿದ್ದರು. ಆಗ ಯುವಕರು ಹೊಲದ ಮೂಲಕ ಧಾವಿಸಿ ಮುಂದೆ ಬರುತ್ತಿದ್ದರು
ಕಳಸಾ ಬಂಡೂರಿ ಮನವಿ
ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಶನಿವಾರ ಇಲ್ಲಿಯ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಿದರು. ಪಕ್ಷಾತೀತ ರೈತ ಹೋರಾಟ ಸಮಿತಿಯ ಸದಸ್ಯರು ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಕೋರಿ ರಾಣಿಬೆನ್ನೂರಿನಲ್ಲಿ ಮನವಿ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ಯೋಜನೆ ಜಾರಿಯಾದರೆ 9 ತಾಲೂಕಿನ 40 ಗ್ರಾಮಗಳ ಜನರಿಗೆ ಕುಡಿಯಲು, ನೀರಾವರಿ ಹಾಗೂ ಕೈಗಾರಿಕೆಗೆ ನೀರಿನ ಸೌಲಭ್ಯ ಸಿಗಲಿದೆ. ಸುಮಾರು 44.15 ಟಿಎಂಸಿ ನೀರು ಅನಗತ್ಯವಾಗಿ ಹರಿದು ಸಮುದ್ರ ಸೇರುತ್ತಿದೆ. ಮಹದಾಯಿ-ಮಲಪ್ರಭಾ ಜೋಡಣೆಯಿಂದ 7.56 ಟಿಎಂಸಿ ನೀರಿನ ಸದ್ಬಳಕೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶೇಂಗಾ ಚಟ್ನಿ ಕಟ್ಟಿಸಿಕೊಂಡರು!
ಉತ್ತರ ಕರ್ನಾಟಕದ ವಿಶೇಷವಾದ ಶೇಂಗಾಹಾಗೂ ಗುರೆಳ್ಳು ಚಟ್ನಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗೂ ಇಷ್ಟವಾಗಿ ಕಟ್ಟಿಸಿಕೊಂಡು ಹೋಗಿದ್ದಾರೆ. ಮಧ್ಯಾಹ್ನ ಶಾಸಕ ಕೆ.ಬಿ. ಕೋಳಿವಾಡರ ನಿವಾಸದಲ್ಲಿ ರಾಹುಲ್ ಗಾಂಧಿ ಇತರ ಗಣ್ಯರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಜೋಳದ ರೊಟ್ಟಿ ಜತೆಗೆ ಶೇಂಗಾ ಹಾಗೂ ಗುರೆಳ್ಳು ಚಟ್ನಿಯನ್ನು ಗಡಿಗೆ ಮೊಸರಿನೊಂದಿಗೆ ಸವಿದ ರಾಹುಲ್ಗೆ ಅದು ಬಹಳ ಇಷ್ಟವಾಯಿತು. ಇವೆರಡೂ
ಚಟ್ನಿಯನ್ನು ಅವರು ಕೇಳಿ ಕಟ್ಟಿಸಿಕೊಂಡರು.
ಶೌಚ ದರ್ಶನ
ರಾಹುಲ್ ಗಾಂಧಿ ಪಾದಯಾತ್ರೆ ಹಿನ್ನೆಲೆಯಲ್ಲಿ ಎರಡು ದಿನ ಮೈದೂರು, ಗುಡಗೂರು ಗ್ರಾಮಗಳಲ್ಲಿ `ಯಾರೂ ಬಯಲಿನಲ್ಲಿ ಶೌಚ ಮಾಡಬಾರದು' ಎಂದು ಗ್ರಾಮ ಪಂಚಾಯತಿ ಡಂಗುರ ಸಾರಿಸಿತ್ತು. ಆದರೆ, ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಬಯಲು ಶೌಚ ದರ್ಶನವಾಯಿತು. ಮೇಕೆಗಳಿಗೆ ದಿಗ್ಬಂಧನ ಮೈದೂರು ಪ್ಲಾಟ್ನಲ್ಲಿ ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಸಾಂತ್ವನ ಹೇಳಲು ರಾಹುಲ್ ಆಗಮಿಸಿದ್ದ ಸಂದರ್ಭದಲ್ಲಿ ರಕ್ಷಣೆಗಾಗಿ ಪಕ್ಕದ ಮನೆಯ ನಿಂಗಪ್ಪ ಚೌಟಿ ಅವರಿಗೆ ಸೇರಿದ್ದ ನೂರಕ್ಕೂ ಹೆಚ್ಚು ಆಡು (ಮೇಕೆ)ಗಳಿಗೆ ದೊಡ್ಡಿಯಲ್ಲಿ ದಿಗ್ಬಂಧನ ಹಾಕಲಾಗಿತ್ತು. ನಿತ್ಯ ಬೆಳಗ್ಗೆ 8 ಗಂಟೆಗೆ ಅವುಗಳನ್ನು ಮೇಯಲು ಬಿಡಲಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


