ಸರ್ಕಾರಕ್ಕೆ ಸ್ಪೀಕರ್ ಬರದ ಚಾಟಿ

ರಾಜ್ಯದಲ್ಲಿ 135 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದರೆ ಅತಿದೊಡ್ಡ ಆತಂಕ. ಈ ಬಗ್ಗೆ ಈಗಾಗಲೇ ಪರಿಹಾರ ಕಾರ್ಯ ಕೈಗೊಳ್ಳಬೇಕಿತ್ತು. ಇದೀಗ ಕ್ರಿಯಾಯೋಜನೆ ರೂಪಿಸಲು ಗಡುವು ನೀಡಲಾಗಿದೆ. ಆದರೆ, ಬರ ಎಂದು ಘೋಷಿಸುವಾಗಲೇ ಅಲ್ಲಿನ ಪರಿಸ್ಥಿತಿ ಗಮನಕ್ಕೆ...
ಕರ್ನಾಟಕ ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಂಗ್ರಹ ಚಿತ್ರ)
ಕರ್ನಾಟಕ ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ರಾಜ್ಯದಲ್ಲಿ 135 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದರೆ ಅತಿದೊಡ್ಡ ಆತಂಕ. ಈ ಬಗ್ಗೆ ಈಗಾಗಲೇ ಪರಿಹಾರ ಕಾರ್ಯ ಕೈಗೊಳ್ಳಬೇಕಿತ್ತು. ಇದೀಗ ಕ್ರಿಯಾಯೋಜನೆ  ರೂಪಿಸಲು ಗಡುವು ನೀಡಲಾಗಿದೆ. ಆದರೆ, ಬರ ಎಂದು ಘೋಷಿಸುವಾಗಲೇ ಅಲ್ಲಿನ ಪರಿಸ್ಥಿತಿ ಗಮನಕ್ಕೆ ಬಂದಿರುತ್ತದಲ್ಲವೇ? ಕಂದಾಯ, ಕೃಷಿ ಸಚಿವರು ಸೇರಿದಂತೆ ಉಸ್ತುವಾರಿ ಸಚಿವರು ಯಾರೂ ಸ್ಥಳಕ್ಕೆ ಹೋಗಿಲ್ಲ. ಮುಖ್ಯಮಂತ್ರಿಯವರಾದರೂ ಜಿಲ್ಲಾ ಕೇಂದ್ರಕ್ಕೆ ಹೋಗಿದ್ದರೆ ಪರಿಹಾರ ಆಗುತ್ತಿತ್ತು. ಆದರೆ, ಬರದ ಬಗ್ಗೆ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಳಂಬ ಗತಿಯಲ್ಲಿದೆ...

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿರುವುದನ್ನು ಹೇಳಿದ್ದು ಹೀಗೆ. ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, 135 ತಾಲೂಕಿನಲ್ಲಿ ಬರ ಎಂದರೆ ಸುಮ್ಮನೆಯೇ? ಇದೀಗ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದು ತೀರಾ ತಡವಾಯಿತು. ಇದನ್ನು ತಿಂಗಳ ಹಿಂದೆಯೇ ಮಾಡಬೇಕಿತ್ತು. ಯಾವ ಸಚಿವರೂ ಬರ ನಿರ್ವಹಣೆ ಕಾರ್ಯ ಮಾಡಿಲ್ಲ.

ಅವರು ಜಿಲ್ಲೆಗಳಿಗೇ ಹೋಗುತ್ತಿಲ್ಲ ಎಂದು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡುತ್ತ ಬೇಸರ ವ್ಯಕ್ತಪಡಿಸಿದರು. ಈಗಲೇ ಕುಡಿಯುವ ನೀರಿಗೆ ತೊಂದರೆ ಎಂದರೆ ಇನ್ನೂ 8 ತಿಂಗಳು ನಿರ್ವಹಣೆ ತೀರಾ ಕಷ್ಟ. ಕಂದಾಯ ಸಚಿವರು ಏನೂ ಮಾಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೇ ಹೋಗಿಲ್ಲ. ಬರಪೀಡಿತ ಪ್ರದೇಶಗಳಲ್ಲಿ ಏನು ಸಮಸ್ಯೆ ಇದೆ ಎಂದು ಜಿಲ್ಲಾಧಿಕಾರಿಗಳು ಅರಿತ ಮೇಲಷ್ಟೇ ಅಲ್ಲವೇ ಆ ಘೋಷಣೆ ಆಗುವುದು. ಈಗ ಕ್ರಿಯಾಯೋಜನೆ ಮಾಡಿ ಎಂದು ಸೂಚಿಸಿದರೆ ಅದು ಆಗುವುದು ಯಾವಾಗ? ಮಾಡುವುದು ಯಾವಾಗ? ಎಲ್ಲದ್ದರಲ್ಲೂ ವಿಫಲರಾಗಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ವಿಷಾದಿಸಿದರು.

ವಿಶೇಷ ಅಧಿವೇಶನ: ವಿಧಾನಮಂಡಲಗಳ ವಿಶೇಷ ಅಧಿವೇಶನದ ಬಗ್ಗೆ ಈವರೆಗೆ ಯಾವುದೇ ಪ್ರಸ್ತಾಪ ಬಂದಿಲ್ಲ. ಲೋಕಾಯುಕ್ತ ಕಾಯಿದೆಯ ಸಮಗ್ರ ವಿಧೇಯಕಕ್ಕೆ ವಿಶೇಷ
ಅಧಿವೇಶನ ಕರೆಯಬಹುದು. ಈ ಬಗ್ಗೆ ಕಾನೂನು ಸಚಿವರೊಂದಿಗೆ ಮಾತನಾಡುತ್ತೇನೆ. ಸರ್ಕಾರ ಏನು ಹೇಳುತ್ತದೆಯೋ ನೋಡೋಣ. 3 ದಿನ ಅಥವಾ ಒಂದುವಾರ ನಡೆಸಬಹುದು. ಬರದ ಬಗ್ಗೆಯೂ ಚರ್ಚಿಸಬಹುದು. ಆದರೆ, ಬರದ ಬಗ್ಗೆ ಚರ್ಚೆ ನಡೆಸಲು ಅಧಿವೇಶನ ಕರೆಯುವಂತೆ ಪ್ರತಿಪಕ್ಷದವರು ಒತ್ತಾಯಿಸಬೇಕು. ಅವರು ಏನೂ ಕೇಳಿಲ್ಲ. ನೋಡೋಣ ಏನಾಗುತ್ತದೋ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ನುಡಿದರು.

ಲೋಕಾಯುಕ್ತ ಪದಚ್ಯುತಿಗಾಗಿ ಅಧಿವೇಶನ ಏನೂ ಕರೆಯಬೇಕಿಲ್ಲ. ಆದರೆ, ಅದಕ್ಕಾಗಿ ಗೊತ್ತುವಳಿ ಸೂಚನೆ ನೀಡಬೇಕು. ಅದನ್ನು ಯಾರೂ ಇನ್ನೂ ನೀಡಿಲ್ಲ. ಗೊತ್ತುವಳಿ ಸೂಚನೆ ನೀಡಿದ ಮೇಲೆ ನಾವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದು ತನಿಖೆಗೆ ಸೂಚಿಸಬೇಕು. ಅವರು ತನಿಖೆ ನಡೆಸಿದ ನಂತರ ವರದಿ ಬಂದ ಮೇಲೆ ಅಧಿವೇಶನದಲ್ಲಿ ಚರ್ಚಿಸಿ ನಂತರ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು. ಪ್ರಕ್ರಿಯೆ ದೊಡ್ಡದಿದೆ. ಹೀಗಾಗಿಯೇ ಲೋಕಾಯುಕ್ತರು ಇಷ್ಟೊಂದು ಆಟ ಆಡುತ್ತಿರುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com